ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಬೆನಕನಿಗೆ ವಿದಾಯ ಸೆ.19ರಂದು

Last Updated 18 ಸೆಪ್ಟೆಂಬರ್ 2021, 13:48 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್ ಆತಂಕದ ನಡುವೆಯೇ ಸಂಭ್ರಮದಿಂದ ನಡೆದ ಸಾರ್ವಜನಿಕ ಗಣೇಶೋತ್ಸವ ಅಂತಿಮ ಘಟಕ್ಕೆ ಬಂದಿದೆ. ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಸೆ.18(ಭಾನುವಾರ)ರಂದು ಅಲ್ಲಲ್ಲಿ ನಡೆಯಲಿದೆ.

ನಗರದ ವಿವಿಧ ಬಡಾವಣೆಗಳಲ್ಲಿ 370ಕ್ಕೂ ಹೆಚ್ಚಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಿದ ಭಕ್ತರು, ವಿಘ್ನ ನಿವಾರಕನಿಗೆ ವಿದಾಯ ಹೇಳಲು ಸಜ್ಜಾಗಿದ್ದಾರೆ. ಬೆಳಿಗ್ಗೆ 9ಕ್ಕೆ ಆರಂಭಗೊಳ್ಳುವ ವಿಸರ್ಜನೆ ಕಾರ್ಯಕ್ರಮ ರಾತ್ರಿಯವರೆಗೂ ನಡೆಯುವ ಸಾಧ್ಯತೆ ಇದೆ. ಕೋವಿಡ್‌ಗೂ ಹಿಂದಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೆರವಣಿಗೆಯಲ್ಲಿ ತಂದು ವಿಗ್ರಹಗಳನ್ನು ವಿಸರ್ಜನೆ ಮಾಡುತ್ತಿದ್ದರು. ವಿವಿಧ ಕಲಾತಂಡಗಳು ಕೂಡ ಪಾಲ್ಗೊಳ್ಳುತ್ತಿದ್ದವು. ಮೂರ್ತಿಗಳನ್ನು ಮತ್ತು ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಮಂದಿ ಸೇರುತ್ತಿದ್ದರು. ನೂರಾರು ಮಂದಿ ಪೊಲೀಸರನ್ನು ನಿಯೋಜಿಸಲಾಗುತ್ತಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಸತತ 3ನೇ ವರ್ಷವೂ ಮೆರವಣಿಗೆಗೆ ಅವಕಾಶವನ್ನು ಸರ್ಕಾರ ನೀಡಿಲ್ಲ.

ವಿಗ್ರಹಗಳ ವಿಸರ್ಜನೆಗಾಗಿ ಮಹಾನಗರ ಪಾಲಿಕೆ 8 ಹೊಂಡಗಳನ್ನು ಸಜ್ಜುಗೊಳಿಸಿದೆ. ಇಲ್ಲಿನ ಕಪಿಲೇಶ್ವರ ಹಳೆಯ ಹೊಂಡ, ಹೊಸ ಹೊಂಡ, ಜಕ್ಕೇರಿ ಹೊಂಡ, ಕಲ್ಮೇಶ್ವರ ಹಳೆಯ ಹೊಂಡ, ಅನಗೋಳದ ಲಾಲ್ ತಲಾವ್, ಮಜಗಾವಿಯ ಬ್ರಹ್ಮದೇವ ಮಂದಿರ ತಲಾವ್, ಕೋಟೆ ಕೆರೆ ಹಾಗೂ ಕಣಬರ್ಗಿ ಕೆರೆಯಲ್ಲಿ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಲ್ಲಿ ಮೊಬೈಲ್ ಟ್ಯಾಂಕ್ ವ್ಯವಸ್ಥೆ ಸಹ ಮಾಡಲಾಗುವುದು. ಸಾರ್ವಜನಿಕರು ಮತ್ತು ಗಣೇಶ ಮಂಡಳಗಳವರು ಕೋವಿಡ್ ಮಾರ್ಗಸೂಚಿ ಪಾಲಿಸಿಕೊಂಡು ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.

‘ಬೆಳಿಗ್ಗೆ 9ರಿಂದ ಮೂರ್ತಿಗಳ ವಿರ್ಸಜನೆ ಆರಂಭಗೊಳ್ಳಲಿದ್ದು, ರಾತ್ರಿಯವರೆಗೆ ನಡೆಯಲಿದೆ. ಜಿಲ್ಲಾಡಳಿತದ ನಿರ್ದೇಶನದಂತೆ ಅಗತ್ಯ ಸುರಕ್ಷತಾ ಕ್ರಮ ವಹಿಸುವಂತೆ ಮಂಡಳಗಳ ಪದಾಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಮುಖಂಡ ವಿಕಾಸ ಕಲಘಟಗಿ ಪ್ರತಿಕ್ರಿಯಿಸಿದರು.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೂಡ ಮೂರ್ತಿಗಳ ವಿಸರ್ಜನೆ ಕಾರ್ಯ ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT