‘ಹಸಿರುಮನೆ’ಯಲ್ಲಿ ಲಾಭ ತಂದುಕೊಟ್ಟ ವೀಳ್ಯದೆಲೆ

7
ಚಿಕ್ಕೋಡಿ ತಾಲ್ಲೂಕು ನಾಗರಾಳದ ಪ್ರಕಾಶ ಪ್ರಯೋಗ

‘ಹಸಿರುಮನೆ’ಯಲ್ಲಿ ಲಾಭ ತಂದುಕೊಟ್ಟ ವೀಳ್ಯದೆಲೆ

Published:
Updated:
Deccan Herald

ಚಿಕ್ಕೋಡಿ: ತಾಲ್ಲೂಕಿನ ನಾಗರಾಳ ಗ್ರಾಮದ ಕೃಷಿಕ ಪ್ರಕಾಶ ಶಿವಮೂರ್ತಿ ಕಾಂಬಳೆ ಹಸಿರುಮನೆಯಲ್ಲಿ (ಪಾಲಿಹೌಸ್) ವೀಳ್ಯದೆಲೆ ಬೆಳೆದು ಲಾಭ ಗಳಿಸುತ್ತಿದ್ದಾರೆ.

ಎಂಟು ವರ್ಷಗಳ ಹಿಂದೆ ಸಾಂಪ್ರದಾಯಿಕ ಕೃಷಿಯಿಂದ ವೀಳ್ಯದೆಲೆಯಲ್ಲಿ ಹೆಚ್ಚಿನ ವರಮಾನ ದೊರೆಯುತ್ತಿರಲಿಲ್ಲ. ಇದರಿಂದ ಬೇಸರಗೊಂಡು ತರಕಾರಿ ಬೆಳೆಯಲು ಪ್ರಾರಂಭಿಸಿದ್ದರು. ಅದರಲ್ಲೂ ಆರ್ಥಿಕ ನಷ್ಟ ಉಂಟಾಗಿದ್ದರಿಂದ ನಲುಗಿ ಹೋಗಿದ್ದರು. ಬೆಳೆಗೆ ತಗಲುತ್ತಿದ್ದ ರೋಗ–ರುಜಿನಗಳು, ಬೆಲೆ ಕುಸಿತ ಮೊದಲಾದ ಸಮಸ್ಯೆಗಳಿಂದ ಕೃಷಿಯಲ್ಲಿ ನಷ್ಟ ಅನುಭವಿಸಿದ್ದರು.

ವೀಳ್ಯದೆಲೆ ಕೃಷಿಯಿಂದ ವಿಮುಖರಾಗಿ ಕಲರ್ ಕ್ಯಾಪ್ಸಿಕಂ ಮೊದಲಾದ ತರಕಾರಿ ಬೆಳೆಯಲು ಆರಂಭಿಸಿದ್ದರು. ಆಗಲೂ ಸರಿಯಾದ ಬೆಲೆ ದೊರೆಯದೇ ಕಂಗಾಲಾಗಿದ್ದರು. ಮುಂದೇನು ಎಂಬ ಚಿಂತನೆಯಲ್ಲಿದ್ದ ಅವರಿಗೆ, ಪಾಲಿಹೌಸ್‌ನಲ್ಲಿ ವೀಳ್ಯದೆಲೆ ಕೃಷಿ ಬದುಕಿನ ದಾರಿ ತೋರಿಸಿದೆ. ‘ಹಸಿರು ಬಂಗಾರ’ ವೀಳ್ಯದೆಲೆ ಅವರ ಜೀವನವನ್ನು ಬೆಳಗಿದೆ.

2015ರಿಂದ

ತಮ್ಮ ಯೋಚನೆಯನ್ನು ಯೋಜನೆಯನ್ನಾಗಿ ಪರಿವರ್ತಿಸಿದ ಅವರು, 2015ರಲ್ಲಿ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ₹ 8.70 ಲಕ್ಷ ಅನುದಾನ ಪಡೆದು, 10 ಗುಂಟೆ ವ್ಯಾಪ್ತಿಯಲ್ಲಿ ವೀಳ್ಯದೆಲೆ ಕೃಷಿ ಮಾಡುತ್ತಿದ್ದಾರೆ. ಸರ್ಕಾರ ಅವರಿಗೆ ಶೇ 90ರಷ್ಟು ಸಹಾಯಧನ ನೀಡಿದೆ.

‘ಸಾಂಪ್ರದಾಯಿಕ ವೀಳ್ಯದೆಲೆ ಕೃಷಿಯಿಂದ ನಿರೀಕ್ಷಿತ ಆದಾಯ ಸಿಗಲಿಲ್ಲ. ತರಕಾರಿ ಬೆಳೆಯೂ ಕೈ ಹಿಡಿಯಲಿಲ್ಲ. ವೀಳ್ಯದೆಲೆ ಕೃಷಿಯನ್ನೇ ಪಾಲಿಹೌಸ್‌ನಲ್ಲಿ ಮಾಡುವ ನಿರ್ಧಾರ ಕೈಗೊಂಡೆ. ತೋಟಗಾರಿಕೆ ಇಲಾಖೆ ನೆರವಾಯಿತು. ಮೊದಲ ವರ್ಷದಲ್ಲಿ ಖರ್ಚು–ವೆಚ್ಚ ಕಳೆದು ₹ 3.50 ಲಕ್ಷ ಆದಾಯ ಸಿಕ್ಕಿದೆ. ಈ ವರ್ಷ ₹ 5 ಲಕ್ಷ ಆದಾಯ ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಪ್ರಕಾಶ.

ರೋಗಗಳು ಕಡಿಮೆ

‘ಸೆ. 9ರಂದು ಶಿರಗಾಂವ ವೀಳ್ಯದೆಲೆ ಮಾರುಕಟ್ಟೆಯಲ್ಲಿ, ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದ 3ಸಾವಿರ ಎಲೆಗಳಿಗೆ ₹ 300ರಿಂದ ₹ 500 ದರ ದೊರೆತರೆ, ಪಾಲಿಹೌಸ್‌ನಲ್ಲಿ ಬೆಳೆದಿರುವ ಅಗಲವಾದ ಎಲೆಗಳಿಗೆ ₹ 1,300 ದರ ಸಿಕ್ಕಿತು’ ಎಂದು ಮಾಹಿತಿ ನೀಡಿದರು.

‘ಈ ಪದ್ಧತಿಯಲ್ಲಿ ಮಾಡುವ ವೀಳ್ಯದೆಲೆ ಬೆಳೆಗೆ ರೋಗಗಳು ತಗಲುವ ಸಾಧ್ಯತೆ ಕಡಿಮೆ. ಉಷ್ಣಾಂಶ ಸಮತೋಲನದಲ್ಲಿ ಇರುತ್ತದೆ. ಪ್ರತಿ 6 ದಿನಕ್ಕೊಮ್ಮೆ ಹನಿ ನೀರಾವರಿ ಮೂಲಕ ಅರ್ಧ ಗಂಟೆ ನೀರು ಕೊಡಲಾಗುತ್ತದೆ. 15 ದಿನಕ್ಕೊಮ್ಮೆ ಸಂಪೂರ್ಣವಾಗಿ ನೀರು ಹಾಯಿಸಲಾಗುತ್ತದೆ. ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ, ಎರೆಮಣ್ಣು, ಹಿಂಡಿ ಗೊಬ್ಬರ ಹಾಕುತ್ತೇವೆ’ ಎಂದು ತಿಳಿಸಿದರು.

ಸಂಪರ್ಕಕ್ಕೆ ಮೊ: 99457 30113.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !