ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಹೊಳೆಯಂತಾದ ರಸ್ತೆಗಳು!

Last Updated 23 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬುಧವಾರ ಗುಡುಗು ಸಹಿತ ಗಾಳಿ, ಮಳೆಯಾಗಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಗಾಳಿ, ಮಳೆಗೆ ವಿವಿ
ಧೆಡೆಗಳಲ್ಲಿ ಮರಗಳು ಧರೆಗುರುಳಿದರೆ, ಕೆಲವೆಡೆಗಳಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಮಳೆಗೂ ಮುನ್ನ ಗಾಳಿ ಬೀಸಿದ್ದರಿಂದ ಬಾಣಸವಾಡಿಯ ಒ.ಎಂ.ಬಿ.ಆರ್ ಬಡಾವಣೆ, ಇಂದಿರಾ ನಗರ, ಜೀವನಹಳ್ಳಿ, ಮೆಜೆಸ್ಟಿಕ್‌ನ ಮ್ಯೂವಿಲ್ಯಾಂಡ್‌ ಚಿತ್ರ ಮಂದಿರ, ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌, ಜೆ.ಪಿನಗರ 9ನೇ ಹಂತ, ಕಸ್ತೂರಿ ನಗರ, ವಿಠ್ಠಲ ಮಲ್ಯ ರಸ್ತೆ ಮತ್ತು ರಿಚ್ಮಂಡ್‌ ವೃತ್ತದ ಬಳಿ ಮರಗಳು ಬಿದ್ದಿವೆ.

ಕೋರಮಂಗಲದ ಕುದುರೆಮುಖ ಕಾಲೊನಿ, ಬನ್ನೇರುಘಟ್ಟ ರಸ್ತೆ, ಬೈಯಪ್ಪನಹಳ್ಳಿ ಇ.ಎಸ್‌.ಐ ಆಸ್ಪತ್ರೆ ಸಮೀಪ, ಹದಿನಿ ರಸ್ತೆ, ಹಲಸೂರು, ಯಲಹಂಕದ ಅಟ್ಟೂರು ಬಡಾವಣೆ, ಕನಕಪುರ ಮುಖ್ಯರಸ್ತೆ, ಉತ್ತರ ಹಳ್ಳಿ, ಚನ್ನಸಂದ್ರ, ಕೆಂಗೇರಿ, ಲಕ್ಷ್ಮೀಪುರ, ರಾಜೀವಗಾಂಧಿ ನಗರ, ಕಗ್ಗಲಿಪುರದಲ್ಲೂ ಮರಗಳು ನೆಲಕ್ಕುರುಳಿವೆ.

ಕೆಲವೆಡೆಗಳಲ್ಲಿ ರಸ್ತೆಯಲ್ಲೇ ಮರಗಳು ನೆಲಕ್ಕುರುಳಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಬಂದು ಮರದ ಟೊಂಗೆಗಳನ್ನು ಕತ್ತರಿಸಿ, ತೆರವುಗೊಳಿಸಿದ ನಂತರ ನಗರ ವಾಹನ ಸಂಚಾರ ಸರಾಗವಾಯಿತು.

ನೀರು ಸಂಗ್ರಹ: ಇಂದಿರಾ ನಗರ 80 ಅಡಿ ರಸ್ತೆ, ಎಂ.ಜಿ.ರಸ್ತೆ, ಟ್ರಿನಿಟಿ ವೃತ್ತ, ಕೆ.ಆರ್‌ ವೃತ್ತ, ಗಾಲ್ಫ್‌ ಕೋರ್ಸ್‌ ರಸ್ತೆ ಬಳಿ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು.

ಮಳೆ ನೀರು ಚರಂಡಿಗಳಲ್ಲಿ ಹರಿಯದೆ ರಸ್ತೆಯಲ್ಲೇ ನಿಂತಿದ್ದರಿಂದ ಅನೇಕ ಕಡೆಗಳಲ್ಲಿ ರಸ್ತೆಗಳು ಹೊಳೆಯಂತಾಗಿದ್ದವು. ಇನ್ನೂ ಕೆಲವೆಡೆ ಚರಂಡಿಗಳಲ್ಲಿ ಕಸ–ಕಡ್ಡಿಗಳು ತುಂಬಿದ್ದರಿಂದ ನೀರು ಸರಾಗವಾಗಿ ಹರಿಯದೆ, ಉಕ್ಕಿ ರಸ್ತೆಯಲ್ಲಿ ಬಂದು ಸಂಗ್ರಹವಾಯಿತ್ತು.

ಚಿಕ್ಕಪೇಟೆ, ಸಿಟಿ ಮಾರ್ಕೆಟ್‌, ಹೆಸರಘಟ್ಟ ರಸ್ತೆ, ಬಗಲಗುಂಟೆ, ಮಲ್ಲಸಂದ್ರ, ವಿದ್ಯಾರಣ್ಯಪುರ, ಮತ್ತೀಕೆರೆ, ಮಾಗಡಿ ರಸ್ತೆ, ವಿಜಯ ನಗರ, ಲಾಲ್‌ಬಾಗ್‌, ಕಲಾಸಿಪಾಳ್ಯ, ಪೀಣ್ಯ, ಯಶವಂತಪುರದಲ್ಲಿ ಧಾರಾಕಾರ ಮಳೆಯಾಗಿದೆ.

ಕಬ್ಬನ್‌ ಪಾರ್ಕ್‌, ಹಲಸೂರು, ಅಶೋಕ ನಗರ, ವಿಲ್ಸನ್‌ ಗಾರ್ಡನ್‌, ಸದಾಶಿವ ನಗರ, ಕೆ.ಆರ್‌.ಪುರ, ಶಿವಾಜಿ ನಗರದಲ್ಲಿ ಸುರಿದ ಮಳೆಯಿಂದಾಗಿ ಜನ ತೊಂದರೆ ಅನುಭವಿಸಿದರು.

ರೆಸಾರ್ಟ್‌ನಿಂದ ಹೊರಬನ್ನಿ

‘ಎರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಮುಳುಗುತ್ತಿದೆ. ಶಾಸಕರೇ ರೆಸಾರ್ಟ್‌ನಿಂದ ಹೊರಬನ್ನಿ’ ಎಂದು ಮುರುಗೇಶ್‌ ತಂಗಮಣಿ ಎಂಬುವವರು ಟ್ವಿಟರ್‌ ಮೂಲಕ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

‘ ಅಧಿಕಾರ ಮತ್ತು ಹುದ್ದೆಯನ್ನು ಉತ್ತಮ ಪಡಿಸಿಕೊಳ್ಳಲು ಕೆಲಸ ಮಾಡದೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT