ಮಂಗಳವಾರ, ಜೂನ್ 15, 2021
22 °C
ಕೃಷಿ ಇಲಾಖೆಯಿಂದಲೂ ತಯಾರಿ

ಮುಂಗಾರಲ್ಲಿ ಬಿತ್ತನೆ ಗುರಿ ಹೆಚ್ಚಳ: ಭೂಮಿ ಹದಗೊಳಿಸುತ್ತಿರುವ ರೈತರು

ಎಂ. ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಆಗಾಗ ಮಳೆ ಬೀಳುತ್ತಿರುವುದು ಕೃಷಿ ಚಟುವಟಿಕೆಗಳಿಗೆ ವರವಾಗಿ ಪರಿಣಮಿಸಿದೆ. ಮುಂಗಾರು ಹಂಗಾಮಿಗಾಗಿ ರೈತರು ಭೂಮಿ ಹದಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನಿಗೆ ಕೃಷಿ ಇಲಾಖೆಯಿಂದಲೂ ತಯಾರಿ ನಡೆದಿದೆ.

ಹೋದ ವರ್ಷ 6.68 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿ ಬಹುತೇಕ ಸಾಧನೆಯಾಗಿತ್ತು. ಈ ಬಾರಿ ಬಿತ್ತನೆ ಗುರಿ ಹೆಚ್ಚಿಸಲಾಗಿದೆ. 7.16 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. 46ಸಾವಿರದಿಂದ 48ಸಾವಿರ ಕ್ವಿಂಟಲ್‌ ಬಿತ್ತನೆಬೀಜಗಳು ಮತ್ತು 2.05 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ.

ಹೋದ ಮುಂಗಾರಿನಲ್ಲಿ ಅಲ್ಲಲ್ಲಿ ನೆರೆ ಹಾಗೂ ಅತಿವೃಷ್ಟಿ ಉಂಟಾಗಿ ಬೆಳೆ ಹಾನಿಯಾಗಿ ರೈತರು ಹಾನಿ ಅನುಭವಿಸಿದ್ದರು. ಈ ಬಾರಿ ಉತ್ತಮ ಮಳೆಯ ಆಶಯದೊಂದಿಗೆ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ.

ಆಶಾದಾಯಕ ಮುಂಗಾರು ನಿರೀಕ್ಷೆ

ಆಶಾದಾಯಕ ಮುಂಗಾರು ಮಳೆಯ ನಿರೀಕ್ಷೆ ಇರುವುದರಿಂದ ಬಿತ್ತನೆ ಬೀಜ, ರಸಗೊಬ್ಬರ ಮೊದಲಾದ ಕೃಷಿ ಪರಿಕರಗಳ ವಿತರಣೆಗೆ ಇಲಾಖೆ ಸಿದ್ಧತೆ ನಡೆಸಿದೆ. ಅಲ್ಲಲ್ಲಿ ದಾಸ್ತಾನು ಮಾಡಲಾಗುತ್ತಿದೆ. 25ಸಾವಿರ ಕ್ವಿಂಟಲ್ ಸೋಯಾಅವರೆ ಬಿತ್ತನೆಬೀಜವನ್ನು ತರಿಸಲಾಗಿದೆ.

‘ಬೈಲಹೊಂಗಲ, ಹುಕ್ಕೇರಿ, ಬೆಳಗಾವಿ, ಚಿಕ್ಕೋಡಿ ತಾಲ್ಲೂಕುಗಳ ರೈತರು ಸೋಯಾಅವರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತುತ್ತಾರೆ. ತಿಂಗಳ ಕೊನೆಯ ವಾರದಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬಂದು ತಂಪು ವಾತಾವರಣ ನಿರ್ಮಾಣವಾದರೆ ಮತ್ತು ರೈತರು ಬಿತ್ತನೆ ಕಾರ್ಯ ಆರಂಭಿಸಿದರೆ ಅವರಿಗೆ ಒದಗಿಸುವುದಕ್ಕೆ ಬೇಕಾಗುವಷ್ಟು ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ರಿಯಾಯಿತಿ ದರದಲ್ಲಿ ವಿತರಣೆ

ಹಂಗಾಮಿನಲ್ಲಿ ಭತ್ತ, ಸೋಯಾಅವರೆ, ಮೆಕ್ಕೆಜೋಳ, ಹೆಸರು, ಉದ್ದು, ಹೈಬ್ರೀಡ್ ಜೋಳ, ಸಜ್ಜೆ, ತೊಗರಿ, ಸೂರ್ಯಕಾಂತಿ ಬಿತ್ತನೆ ಬೀಜಗಳನ್ನು ಇಲಾಖೆಯಿಂದ ಎಲ್ಲ ವರ್ಗದ ರೈತರಿಗೆ ಗರಿಷ್ಠ 2 ಹೆಕ್ಟೇರ್‌ (5 ಎಕರೆ) ಪ್ರದೇಶಕ್ಕೆ ಸೀಮಿತವಾಗುವಂತೆ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಜಿಲ್ಲೆಯ ಒಟ್ಟು 35 ರೈತ ಸಂಪರ್ಕ ಕೇಂದ್ರಗಳು ಮತ್ತು 95 ಪಿಕೆಪಿಎಸ್ (ಹೆಚ್ಚುವರಿ ವಿತರಣಾ ಕೇಂದ್ರ)ಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಿಸಲಾಗುವುದು. ಅಗತ್ಯ ಬಿತ್ತನೆ ಬೀಜಗಳನ್ನು ಹಂತ ಹಂತವಾಗಿ ದಾಸ್ತಾನು ಮಾಡಲು ಕ್ರಮ ವಹಿಸಲಾಗಿದೆ. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಪಾಟೀಲ ಮಾಹಿತಿ ನೀಡಿದರು.

ಪ್ರಸ್ತುತ ಲಭ್ಯತೆ

ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕಿನಲ್ಲಿ ಹೆಸರು ಕೃಷಿ ಹೆಚ್ಚು. ಪ್ರಸ್ತುತ 40 ಕ್ವಿಂಟಲ್‌ ಲಭ್ಯವಿದೆ. ಬೆಳಗಾವಿ ಮತ್ತು ಖಾನಾಪುರ ತಾಲ್ಲೂಕಿನ ರೈತರು ಭತ್ತಕ್ಕೆ ಆದ್ಯತೆ ನೀಡುತ್ತಾರೆ. ಸದ್ಯ 525 ಕ್ವಿಂಟಲ್ ಬಿತ್ತನೆಬೀಜ ದಾಸ್ತಾನಿದೆ. ಅಥಣಿ ಭಾಗದಲ್ಲಿ ಉದ್ದು ಹಾಕುತ್ತಾರೆ. ಇದು ಸದ್ಯ 300 ಕ್ವಿಂಟಲ್‌ ಲಭ್ಯವಿದೆ. ಜೂನ್‌ ಮೊದಲ ವಾರದಿಂದ ಬಿತ್ತನೆ ಪ್ರಕ್ರಿಯೆಯನ್ನು ವ್ಯಾಪಕವಾಗಿ ಆರಂಭಿಸುವುದು ಇಲ್ಲಿನ ವಾಡಿಕೆಯಾಗಿದೆ.

ಪೂರ್ವ ಮುಂಗಾರಿಗೆ 35ಸಾವಿರ ಮೆಟ್ರಿಕ್ ಟನ್ ಯೂರಿಯಾ ಹಾಗೂ 18ಸಾವಿರ ಮೆಟ್ರಿಕ್ ಟನ್ ಡಿಎಪಿ ಅಗತ್ಯವೆಂದು ನಿರೀಕ್ಷಿಸಲಾಗಿದೆ. ಪ್ರಸ್ತುತ 18ಸಾವಿರ ಮೆ.ಟನ್ ಯೂರಿಯಾ ಮತ್ತು 8ಸಾವಿರ ಡಿಎಪಿ ಲಭ್ಯವಿದೆ. ಇಡೀ ಹಂಗಾಮಿಗೆ 90ಸಾವಿರದಿಂದ 95ಸಾವಿರ ಮೆ.ಟನ್ ಯೂರಿಯಾ, 30ಸಾವಿರದಿಂದ 35ಸಾವಿರ ಮೆ.ಟನ್ ಡಿಎ‍ಪಿ ಮತ್ತು 70ಸಾವಿರದಿಂದ 75ಸಾವಿರ ಮೆ.ಟನ್ ಎನ್‌ಪಿಕೆ ಅಗತ್ಯವಿದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ಅಂಕಿ ಅಂಶ

7,16,925

ಜಿಲ್ಲೆಯಲ್ಲಿ ಹೆಕ್ಟೇರ್‌ ಬಿತ್ತನೆ ಗುರಿ

46,000 ಕ್ವಿಂ.

ಬೇಕಾಗುವ ಬಿತ್ತನೆ ಬೀಜಗಳು

2,05,000 ಮೆ.ಟನ್.

ಬೇಕಾಗುವ ವಿವಿಧ ರಸಗೊಬ್ಬರ

***

ಬಿತ್ತನೆ ಗುರಿ

2,06,905 ಹೆಕ್ಟೇರ್‌– ಧಾನ್ಯಗಳು

62,865 ಹೆಕ್ಟೇರ್‌– ಕಾಳುಗಳು

1,29,385 ಹೆಕ್ಟೇರ್‌– ಎಣ್ಣೆಕಾಳುಗಳು

3,17,770 ಹೆಕ್ಟೇರ್– ವಾಣಿಜ್ಯ ಬೆಳೆ (ಕಬ್ಬು, ಹತ್ತಿ, ತಂಬಾಕು)

(ಮಾಹಿತಿ: ಕೃಷಿ ಇಲಾಖೆ)

ಅಧಿಕಾರಿ ಏನಂತಾರೆ?

ವಾರಾಂತ್ಯದ ವೇಳೆಗೆ ಮತ್ತಷ್ಟು ಸೋಯಾಅವರೆ ಬಿತ್ತನೆಬೀಜ ಬರಲಿದೆ. ಬಿತ್ತನೆ ಕಾರ್ಯ ಆರಂಭಕ್ಕೆ ಮುನ್ನ ಎಲ್ಲ ಬಿತ್ತನೆಬೀಜಗಳು ಶೇ 90ರಷ್ಟು ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು

-ಶಿವನಗೌಡ ಪಾಟೀಲ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು