ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಸಾಲ ಮನ್ನಾಕ್ಕೆ ಆಗ್ರಹ

ಸರ್ಕಾರಗಳ ವಿರುದ್ಧ ಬಾಬಾಗೌಡ ಪಾಟೀಲ ಆಕ್ರೋಶ
Last Updated 17 ಡಿಸೆಂಬರ್ 2018, 12:48 IST
ಅಕ್ಷರ ಗಾತ್ರ

ಬೆಳಗಾವಿ: ರೈತರು ಕೃಷಿಗಾಗಿ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸೊಸೈಟಿಗಳಲ್ಲಿ ಮಾಡಿದ ಸಾಲವನ್ನು ಯಾವುದೇ ಮಾನದಂಡ ಧಿಸದೇ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ತಾಲ್ಲೂಕಿನ ಸುವರ್ಣ ವಿಧಾನಸೌಧ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪ್ರತಿಭಟನೆ ನಡೆಸಿದರು.

ಬರಗಾಲದ ನಡುವೆಯೂ ರೈತರು ಅಲ್ಪಸ್ವಲ್ಪ ತೊಗರಿ ಬೆಳೆದಿದ್ದಾರೆ. ಎಕರೆಗೆ 1 ಕ್ವಿಂಟಲ್‌ನಂತೆ ಇಳುವರಿ ಬಂದಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೂ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ತೊಗರಿಯನ್ನು ಪಿಕೆಪಿಎಸ್‌ನಲ್ಲಿ ಖರೀದಿಗೆ ವ್ಯವಸ್ಥೆ ಮಾಡಬೇಕು. ಕ್ವಿಂಟಲ್‌ಗೆ ₹ 8ರಿಂದ ₹ 10ಸಾವಿರ ನಿಗದಿಪಡಿಸಬೇಕು. ಖರೀದಿಸಿದ 15 ದಿನಗಳೊಳಗೆ ರೈತರ ಖಾತೆಗೆ ಹಣ ಪಾವತಿಸಬೇಕು. ಕಳೆದ ವರ್ಷದ ಬಾಕಿಯನ್ನೂ ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.

ಗೋವಿನಜೋಳ, ಕಡಲೆ ಖರೀದಿ ಕೇಂದ್ರಗಳನ್ನೂ ಕೂಡಲೇ ಆರಂಭಿಸಬೇಕು. ಕಬ್ಬಿಗೆ ನ್ಯಾಯಸಮ್ಮತ ದರ ನಿಗದಿಪಡಿಸಬೇಕು. ಬಾಕಿಯನ್ನು ಕೂಡಲೇ ಕೊಡಿಸಬೇಕು. ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಸಕ್ತ ಅಧಿವೇಶನದಲ್ಲಿಯೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ತೊಡಕು ನಿವಾರಿಸಿ:

ಗ್ರಾಮ ಹದ್ದಿಯಲ್ಲಿ ಇರುವ ಮನೆ ಹಾಗೂ ನಿವೇಶನಗಳ ಖರೀದಿಗೆ ಸಂಬಂಧಿಸಿದಂತೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಬೇಕು. ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವಾಗ ಮತ್ತು ಜಮೀನಿನ ಮೇಲೆ ಇರುವ ಭೋಜಾ ತೆಗೆದುಹಾಕಲು ನೋಂದಣಿ ಶುಲ್ಕ ವಿಧಿಸುವುದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಬಾಬಾಗೌಡ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಫಸಲ್ ಬಿಮಾ ಯೋಜನೆಯ ಲಾಭ ರೈತರಿಗೆ ದೊರೆತಿಲ್ಲ. ಇದು ಕಣ್ಣೀರು ಒರೆಸುವ ಕಾರ್ಯಕ್ರಮವಾಗಿದೆ. ಬೆಳೆ ಹಾನಿಯಾದವರಿಗೆ ಕೂಡಲೇ ಪರಿಹಾರ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಭರವಸೆಯಂತೆ ನಡೆದುಕೊಳ್ಳಿ:

‘ವಿಧಾನಮಂಡಲ ಅಧಿವೇಶನವನ್ನು ಸರ್ಕಾರ ಹಾಗೂ ಜನ್ರಪತಿನಿಧಿಗಳು ಮೋಜು–ಮಸ್ತಿಗಾಗಿ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕ ಹಾಗೂ ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಚರ್ಚಿಸುತ್ತಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದರೂ ರೈತರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ವಿಷಯದಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದೆ. ಇದು ಸರಿಯಲ್ಲ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇಕೇಂದ್ರ ಸರ್ಕಾರದವರು ಕೂಡ ರೈತರ ಸಾಲ ಮನ್ನಾ ಮಾಡುವ ನಾಟಕದ ಮಾತುಗಳನ್ನು ಆಡುತ್ತಿದ್ದಾರೆ. ಸಾಲ ಮನ್ನಾ ಮಾಡದಿದ್ದರೆ ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಪಾಠ ಕಲಿಸಬೇಕು’ ಎಂದು ತಿಳಿಸಿದರು.

ಮುಖಂಡರಾದ ನಿಂಗ‍ಪ್ಪ ನಂದಿ, ಬಸವರಾಜ ಡೊಂಗರಗಾವಿ, ಮಹಾಂತೇಶ ರಾವುತ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT