ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: 3 ತಿಂಗಳಾದರೂ ಸಿಗದ ಪರಿಹಾರ

ಜಿಲ್ಲೆಯೊಂದರಲ್ಲೇ 7,100 ಎಕರೆಯಲ್ಲಿ ಹಾನಿ!
Last Updated 13 ಸೆಪ್ಟೆಂಬರ್ 2020, 6:41 IST
ಅಕ್ಷರ ಗಾತ್ರ

ಬೆಳಗಾವಿ: ಈ ಹಂಗಾಮಿನಲ್ಲಿ ಬಿತ್ತಿದ ಸೋಯಾಬೀನ್‌ ಬಿತ್ತನೆ ಬೀಜಗಳು ಸಮರ್ಪಕವಾಗಿ ಮೊಳಕೆ ಬಾರದೆ ನಷ್ಟ ಅನುಭವಿಸಿದ ರೈತರಿಗೆ ಮೂರು ತಿಂಗಳಾದರೂ ಕೃಷಿ ಇಲಾಖೆಯಿಂದ ಪರಿಹಾರ ದೊರೆತಿಲ್ಲ.

ಜಿಲ್ಲೆಯ ಬೈಲಹೊಂಗಲ, ಹುಕ್ಕೇರಿ, ಬೆಳಗಾವಿ, ಚಿಕ್ಕೋಡಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್‌ ಬೆಳೆಯಲಾಗುತ್ತದೆ. ರೈತರು, ಇಲಾಖೆಯಿಂದ ನಿಗದಿಪಡಿಸಿದ ರೈತ ಸಂಪರ್ಕ ಕೇಂದ್ರ ಹಾಗೂ ಪಿಕೆಪಿಎಸ್‌ಗಳ ಮೂಲಕ ರಿಯಾಯಿತಿ ದರದಲ್ಲಿ ಬಿತ್ತನೆಬೀಜ ಖರೀದಿಸಿದ್ದರು. ಬೀಜಗಳು ಕಳಪೆ ಗುಣಮಟ್ಟದಿಂದ ಕೂಡಿರುವುದು ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮೊಳಕೆ ಬಾರದಿರುವುದನ್ನು ಜೂನ್‌ ಮೊದಲ ವಾರದಲ್ಲೇ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಅಲ್ಲಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಪರಿಹಾರ ವಿತರಣೆಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.

ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ, ಜಿಲ್ಲೆಯೊಂದರಲ್ಲೇ 7,100 ಎಕರೆ ಪ್ರದೇಶದಲ್ಲಿ ಸೋಯಾಬೀನ್ ಬೀಜಗಳು ಸರಿಯಾಗಿ ಮೊಳಕೆ ಬಂದಿಲ್ಲದಿರುವ ಬಗ್ಗೆ ವರದಿ ಸಿದ್ಧಪಡಿಸಲಾಗಿದೆ. 800 ಮಂದಿ ರೈತರು ನಿರ್ದಿಷ್ಟ ಕಂಪನಿಗಳ ಬಿತ್ತನೆಬೀಜಗಳನ್ನು ವಾಪಸ್ ಮಾಡಿ ಹಣ ಪಡೆದುಕೊಂಡಿದ್ದರು. ಅಲ್ಲಲ್ಲಿ ಕೆಲವರು ಇತರ ಬೀಜಗಳನ್ನು ಬಿತ್ತಿದ್ದರು.

‘ಎಲ್ಲವೂ ಸರಿಯಾಗಿದ್ದರೆ ಎಕರೆಗೆ ಕನಿಷ್ಠ 10 ಕ್ವಿಂಟಲ್‌ನಿಂದ 15 ಕ್ವಿಂಟಲ್ ಇಳುವರಿ ಬರುತ್ತಿತ್ತು. ಸರಾಸರಿ ₹ 3ಸಾವಿರ ದೊರೆತಿದ್ದರೂ ಕನಿಷ್ಠ ₹ 30ಸಾವಿರ ಗಳಿಸುತ್ತಿದ್ದೆವು. ಆದರೆ, ಇಲಾಖೆಯಿಂದಲೇ ವಿತರಿಸಿದ ಬಿತ್ತನೆ ಬೀಜಗಳು ಕಳಪೆಯಾದ್ದರಿಂದ ಬಹಳ ನಷ್ಟ ಉಂಟಾಗಿದೆ. ಸರಿಯಾದ ಮೊಳಕೆ ಬಾರದಿದ್ದರಿಂದ, ಕೆಲವು ರೈತರು ಆರ್ಥಿಕ ಸಂಕಷ್ಟದಿಂದಾಗಿ ಬೇರೆ ಬೆಳೆಯಲು ಆಗಲಿಲ್ಲ. ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದ ರೈತರ ಆಸೆಗೆ ಕಳಪೆ ಬೀಜ ತಣ್ಣೀರೆರಚಿತು. ಹೀಗಾಗಿ, ಎಕರೆಗೆ ಕನಿಷ್ಠ ₹ 25ಸಾವಿರ ಪರಿಹಾರ ನೀಡಬೇಕು. ಆದರೆ, ಈ ನಿಟ್ಟಿನಲ್ಲಿ ಸರ್ಕಾರ ಇನ್ನೂ ಕ್ರಮ ಕೈಗೊಂಡಿಲ್ಲದಿರುವುದು ಖಂಡನೀಯ’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.

‘ಬೇಸಾಯ ವೆಚ್ಚವನ್ನಷ್ಟೇ ಕೊಡಲು ಇಲಾಖೆಯಲ್ಲಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಅದಕ್ಕೆ ನಮ್ಮ ವಿರೋಧವಿದೆ’ ಎಂದು ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ‘ಸೋಯಾಬೀನ್ ಬಿತ್ತನೆ ಬೀಜಗಳು ಸಮರ್ಪಕವಾಗಿ ಮೊಳಕೆ ಬಾರದಿರುವ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದ್ದೇವೆ. ಕೃಷಿಕರಿಗೆ ಪರಿಹಾರ ಕಲ್ಪಿಸಲು ಕ್ರಮ ವಹಿಸುವುದಾಗಿ ಸಚಿವರು ತಿಳಿಸಿದ್ದಾರೆ. ಯಾವಾಗ ಬರುತ್ತದೆ ಹಾಗೂ ಮಾರ್ಗಸೂಚಿಗಳೇನು ಎನ್ನುವ ಬಗ್ಗೆ ಮಾಹಿತಿ ಇಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT