ಶನಿವಾರ, ಡಿಸೆಂಬರ್ 7, 2019
22 °C

ಸಾಲ ಮರುಪಾವತಿಸದ ರೈತನ ಬಂಧನಕ್ಕೆ ವಾರಂಟ್‌; ಬ್ಯಾಂಕ್‌ ವಿರುದ್ಧ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ರಾಜ್ಯ ಸರ್ಕಾರ ಕೃಷಿ ಸಾಲ ಮನ್ನಾ ಮಾಡಿದ್ದರೂ, ಸಾಲ ಮರುಪಾವತಿಸದ ರೈತರ ವಿರುದ್ಧ ನ್ಯಾಯಾಲಯದಿಂದ ಅರೆಸ್ಟ್‌ ವಾರಂಟ್‌ ಹೊರಡಿಸಿದ ಖಾಸಗಿ ವಲಯದ ಐಸಿಐಸಿಐ ಬ್ಯಾಂಕ್‌ ವಿರುದ್ಧ ಬೈಲಹೊಂಗಲದಲ್ಲಿ ಶನಿವಾರ ರೈತರು ಪ್ರತಿಭಟನೆ ಮಾಡಿದರು.

ಸವದತ್ತಿ ತಾಲ್ಲೂಕಿನ ಏಣಗಿ ಗ್ರಾಮದ ಈರಪ್ಪ ಹುಬ್ಬಳ್ಳಿ ಎಂಬುವರು 2014ರಲ್ಲಿ ಬ್ಯಾಂಕಿನ ಬೈಲಹೊಂಗಲ ಶಾಖೆಯಲ್ಲಿ ₹ 2.67 ಲಕ್ಷ ಬೆಳೆ ಸಾಲ ಪಡೆದುಕೊಂಡಿದ್ದರು. ಅಸಲು ಬಡ್ಡಿ ಸೇರಿ ₹ 4 ಲಕ್ಷಕ್ಕಿಂತ ಹೆಚ್ಚು ಬಾಕಿ ಉಳಿದಿತ್ತು. ಆದರೆ ಅದನ್ನು ಅವರು ಮರುಪಾವತಿ ಮಾಡಿರಲಿಲ್ಲ. 2017ರಲ್ಲಿ ಬ್ಯಾಂಕ್‌ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಕಳೆದ ಆಗಸ್ಟ್‌ ಕೊನೆಯ ವಾರದಲ್ಲಿ ನ್ಯಾಯಾಲಯವು ಅರೆಸ್ಟ್‌ ವಾರಂಟ್‌ ಹೊರಡಿಸಿತ್ತು.

‘ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಘೋಷಿಸಿದ್ದ ಸಾಲ ಮನ್ನಾ ಯೋಜನೆಯಡಿ ಈರಪ್ಪ ಅವರು ಅರ್ಹರಾಗಿದ್ದಾರೆ. ಅವರಿಂದ ಅಗತ್ಯವಾದ ಎಲ್ಲ ದಾಖಲೆಗಳನ್ನು ಬ್ಯಾಂಕ್‌ ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಆದರೂ, ಸಾಲ ಮನ್ನಾ ಮಾಡದೇ ಈಗ ವಾರಂಟ್‌ ಕಳುಹಿಸಿದ್ದಾರೆ’ ಎಂದು ರೈತ ಮುಖಂಡ ಮಹಾಂತೇಶ ಕಾಮತ್‌ ಆಕ್ರೋಶ ವ್ಯಕ್ತಪಡಿಸಿದರು.

‘ಅತಿವೃಷ್ಠಿ ಹಾಗೂ ಪ್ರವಾಹದಿಂದಾಗಿ ಬೆಳೆ ಸಂಪೂರ್ಣ ನಷ್ಟವಾಗಿದೆ. ಇಂತಹ ಸ್ಥಿತಿಯಲ್ಲಿ ರೈತರು ಹೇಗೆ ಸಾಲ ಮರುಪಾವತಿ ಮಾಡಲು ಸಾಧ್ಯ? ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ಸಹಾಯ ಮಾಡಬೇಕು’ ಎಂದು ಒತ್ತಾಯಿಸಿದರು.

ಉಪವಿಭಾಗಾಧಿಕಾರಿ ಸಭೆ: ‘ರೈತ ಈರಪ್ಪ ಹುಬ್ಬಳ್ಳಿ ಹಾಗೂ ಬ್ಯಾಂಕ್‌ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆ. ಇಬ್ಬರ ಹಿತಾಸಕ್ತಿಯನ್ನು ಗಮನಿಸಿ, ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಯೋಜನೆಯಡಿ ₹ 1.50 ಲಕ್ಷ ಪಾವತಿಸುವಂತೆ ಸಲಹೆ ನೀಡಿದ್ದೆ. ಆಗ ಈರಪ್ಪ ಒಪ್ಪಿಕೊಂಡಿದ್ದರು. ಆದರೆ, ಈಗ ರೈತರು ಏಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ’  ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು.

ಪ್ರತಿಕ್ರಿಯಿಸಿ (+)