ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನವಿ ಸ್ವೀಕರಿಸದ ಮುಖ್ಯಮಂತ್ರಿ: ರೈತ ಮುಖಂಡರ ಆಕ್ರೋಶ

Last Updated 25 ಆಗಸ್ಟ್ 2020, 10:21 IST
ಅಕ್ಷರ ಗಾತ್ರ

ಬೆಳಗಾವಿ: ತಮ್ಮಿಂದ ಮನವಿ ಸ್ವೀಕರಿಸದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ರೈತ ಮುಖಂಡರು ಮಂಗಳವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವುದನ್ನು ಕೈಬಿಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಂಬ್ರಾ ವಿಮಾನನಿಲ್ದಾಣದ ಪ್ರವೇಶ ದ್ವಾರದಲ್ಲಿ ಬೆಳಿಗ್ಗೆಯಿಂದಲೂ ಪ್ರತಿಭಟಿಸುತ್ತಿದ್ದ ಅವರನ್ನು ಪೊಲೀಸರು ಮುಖ್ಯಮಂತ್ರಿ ಭೇಟಿ ಮಾಡಿಸುವುದಾಗಿ ತಿಳಿಸಿ ಒಳಕ್ಕೆ ಕರೆತಂದಿದ್ದರು. ಆದರೆ, ಮುಖ್ಯಮಂತ್ರಿ ಅವರ ಬಳಿ ಮನವಿ ಪಡೆಯಲಿಲ್ಲ. ಇದರಿಂದ ಸಿಟ್ಟಾದ ಮುಖಂಡರು ಧಿಕ್ಕಾರ ಕೂಗಿ, ಬಾಯಿ ಬಡಿದುಕೊಂಡು ಅಸಮಾಧಾನ ವ್ಯಕ್ತಪಡಿಸಿದರು.

‘ಮನವಿ ಪಡೆಯದೇ ರೈತರನ್ನು ಅವಮಾನಿಸಲಾಗಿದೆ’ ಎಂದು ದೂರಿ ಮನವಿ ಪತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದರು. ‘ನಮ್ಮ ಭೂಮಿ ನಮ್ಮ ಹಕ್ಕು’, ‘ನಮ್ಮ ಭೂಮಿ ನಮಗೇ ಇರಲಿ’ ಎಂಬಿತ್ಯಾದಿ ಘೋಷಣೆ ಕೂಗಿದರು.

ಬಳಿಕ ಅವರನ್ನು ಪೊಲೀಸರು ಹೊರ ಕರೆತಂದರು. ಅಲ್ಲಿ ಧರಣಿ ಕುಳಿತಿದ್ದ ರೈತರೊಂದಿಗೆ ಸೇರಿದ ಮುಖಂಡರು ಬೆಳಗಾವಿ-ಬಾಗಲಕೋಟೆ ರಸ್ತೆ ತಡೆದು ಪ್ರತಿಭಟಿಸಿದರು. ದಾರಿಯಲ್ಲಿ ಸಾಗುತ್ತಿದ್ದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹಾಗೂ ಜವಳಿ ಸಚಿವ ಶ್ರೀಮಂತ ಪಾಟೀಲ ಅವರಿದ್ದ ಕಾರಿಗೆ ಮುತ್ತಿಗೆ ಹಾಕಲು ಮುಂದಾದ ಅವರನ್ನು ಪೊಲೀಸರು ತಡೆದರು.

‘ಕೃಷಿ ಭೂಮಿ ಕಿತ್ತುಕೊಳ್ಳಲು ಸರ್ಕಾರ ಹುನ್ನಾರ ನಡೆಸಿದೆ. ಬಂಡವಾಳಶಾಹಿಗಳು, ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಳ್ಳಲು ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದೆ. ರೈತ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿದೆ’ ಎಂದು ಆರೋಪಿಸಿದರು.

‘ಹೋದ ವರ್ಷ ನೆರೆ ಹಾಗೂ ಅತಿವೃಷ್ಟಿಯಿಂದಾಗಿ ಬೆಳೆ ಕಳೆದುಕೊಂಡ ರೈತರಿಗೆ ಇನ್ನೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಕೂಡಲೇ ಸಂತ್ರಸ್ತರೆಲ್ಲರಿಗೂ ಪರಿಹಾರ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಬಳಿಕ ಸ್ಥಳಕ್ಕೆ ಬಂದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಅಹವಾಲು ಆಲಿಸಿದರು. ನಗರದ ಪ್ರವಾಸಿಮಂದಿರದಲ್ಲಿ ಮುಖಂಡರೊಂದಿಗೆ ಸಭೆ ನಡೆಸಿ ಮನವಿ ಸ್ವೀಕರಿಸಿದರು. ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಂಚಾಲಕರಾದ ಚೂನಪ್ಪ ಪೂಜಾರಿ, ಜಯಶ್ರೀ ಪೂಜಾರಿ, ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ, ಮುಖಂಡರಾದ ಪ್ರಕಾಶ ನಾಯ್ಕ, ಗೂಳಪ್ಪ ಬಾವಿಕಟ್ಟಿ, ರಮೇಶ, ಭಗವಾನ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT