ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ: ಬ್ಯಾಂಕ್‌ಗಳಿಂದ ನಿರಾಕರಣೆಗೆ ಆಕ್ರೋಶ

ಅಖಂಡ ಕರ್ನಾಟಕ ರೈತ ಸಂಘ ನೇತೃತ್ವದಲ್ಲಿ ಪ್ರತಿಭಟನೆ
Last Updated 25 ಮಾರ್ಚ್ 2019, 14:09 IST
ಅಕ್ಷರ ಗಾತ್ರ

ಬೆಳಗಾವಿ: ‘ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ₹ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವಂತೆ ಸರ್ಕಾರದಿಂದ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕು’ ಎಂದು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲ್ಲೂಕು ಘಟಕದ ಮುಖಂಡರು ಹಾಗೂ ರೈತರು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆ‍ಪಿಎಸ್)ಗಳಲ್ಲಿ ₹ 10ಸಾವಿರದಿಂದ ₹ 15ಸಾವಿರ ಸಾಲ ಮನ್ನಾ ಮಾಡಲಾಗಿದೆ. ಹೀಗಾಗಿ, ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಲು ಆಗುವುದಿಲ್ಲ ಎಂದು ಬ್ಯಾಂಕ್ ವ್ಯವಸ್ಥಾಪಕರು ಹೇಳುತ್ತಿದ್ದಾರೆ. ಇದರಿಂದಾಗಿ, ಬಹಳಷ್ಟು ರೈತರಿಗೆ ಯೋಜನೆಯ ಲಾಭ ದೊರೆಯುವುದಿಲ್ಲ. ಅವರ ಸಂಕಷ್ಟ ದೂರಾಗುವುದಿಲ್ಲ’ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಕ. ಪಾಟೀಲ ತಿಳಿಸಿದರು.

‘ಮುಖ್ಯವಾಗಿ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಹಾಗೂ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಗಳಲ್ಲಿ ಸಾಲ ಮನ್ನಾ ಮಾಡಲು ನಿರಾಕರಿಸಲಾಗುತ್ತಿದೆ. ರೈತರ ₹ 1 ಲಕ್ಷದವರೆಗಿನ ಕೃಷಿ ಸಾಲ ಮನ್ನಾ ಮಾಡುವುದಾಗಿ ಸರ್ಕಾರವೇ ಘೋಷಿಸಿದೆ. ಹೀಗಿರುವಾಗ, ಕೇವಲ ಪಿಕೆಪಿಎಸ್‌ನಲ್ಲಿ ಪಡೆದಿರುವ ಕಡಿಮೆ ಪ್ರಮಾಣದ ಸಾಲ ಮನ್ನಾ ಮಾಡಿದರೆ ಸಾಲದು’ ಎಂದು ಹೇಳಿದರು.

‘ರೈತರು ಯಾವುದೇ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿದ್ದರೂ ಒಟ್ಟು ₹ 1 ಲಕ್ಷದವರೆಗೆ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

‘ಅಗಸಗ ಗ್ರಾಮದಲ್ಲಿ ಕೃಷಿ ಪತ್ತಿನ ಸೊಸೈಟಿಯಿಂದ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಸೊಸೈಟಿಯಲ್ಲಿ ಸರ್ವರ್‌ ತೊಂದರೆಯಿಂದಾಗಿ ಪಡಿತರ ಪಡೆದುಕೊಳ್ಳಲು ಚೀಟಿದಾರರು ತೊಂದರೆ ಅನುಭವಿಸುತ್ತಿದ್ದಾರೆ. 2–3 ದಿನಗಳನ್ನು ವ್ಯಯಿಸಬೇಕಾದ ಪರಿಸ್ಥಿತಿ ಇದೆ. ಹೀಗಾಗಿ, ಸರ್ವರ್‌ ತೊಂದರೆಯನ್ನು ನಿವಾರಿಸಬೇಕು. ಇಲ್ಲವೇ, ಮೊದಲಿನಂತೆಯೇ ಟೋಕನ್‌ ಪದ್ಧತಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಸುನಂದಾ ಸನದಿ, ಟಿ. ಕಡೋಲ್ಕರ್, ಮಲ್ಲಿಕಾರ್ಜುನ ದೇಸಾಯಿ, ಮಹದೇವ ಸನದಿ, ಶಾಂತಾ ಗಡ್ಕರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT