ಮಂಗಳವಾರ, ಮಾರ್ಚ್ 21, 2023
20 °C

ಕಾಯ್ದೆ ವಾಪಸಾಗುವವರೆಗೂ ಹೋರಾಟ: ಸಾಮಾಜಿಕ ಕಾರ್ಯಕರ್ತ ಎಸ್.ಆರ್.‌ ಹಿರೇಮಠ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೇಂದ್ರ ಸರ್ಕಾರವು ತಂದಿರುವ ಮೂರು ಕರಾಳ ಕಾಯ್ದೆಗಳು ರೈತರಿಗೆ ಮರಣ ಶಾಸನವಾಗಿವೆ. ಅವುಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲಿಸಬಾರದು’ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್.‌ ಹಿರೇಮಠ ಸಲಹೆ ನೀಡಿದರು.

ರೈತ ಸಂಘದಿಂದ ನಗರದ ಕೆಪಿಟಿಸಿಎಲ್‌ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ರೈತ ನಾಯಕ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ನೆನಪು ಮತ್ತು ಶ್ರದ್ಧಾಂಜಲಿ’ ಸಭೆಯಲ್ಲಿ ಅವರು ಮಾತನಾಡಿದರು.

‘ಕೆಲವೇ ಜನರ ಕೈಯಲ್ಲಿ ಅಧಿಕಾರ ಇರುವುದರಿಂದ ಸ್ವರಾಜ್ಯ ಸಿಗುವುದಿಲ್ಲ ಎನ್ನುವುದನ್ನು ಮರೆಯಬಾರದು’ ಎಂದರು.

ಬಲಪಡಿಸಬಹುದು:

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ‘ರೈತ ಚಳವಳಿಯು ವ್ಯಕ್ತಿ ದೋಷದಿಂದಾಗಿ ಬೇರೆ ಬೇರೆ ಪಂಗಡಗಳಾಗಿದೆ. ಎಲ್ಲ ಕಾರ್ಯಕರ್ತರೂ ಒಗ್ಗೂಡಿದರೆ ಬಲಪಡಿಸಬಹುದಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಬಾಬಾಗೌಡ ಪಾಟೀಲರು ಉತ್ತರ ಕರ್ನಾಟಕದಲ್ಲಿ ರೈತ ಸಂಘ ಕಟ್ಟಿದರು. ಅನೇಕ ಹೋರಾಟಗಳನ್ನು ಮಾಡಿ ಜೈಲು ವಾಸವನ್ನೂ ಅನುಭವಿಸಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಧಾರವಾಡ ಹಾಗೂ ಕಿತ್ತೂರು ಕ್ಷೇತ್ರದಲ್ಲಿ ಏಕಕಾಲಕ್ಕೆ ಗೆದ್ದಿದ್ದರು. ಆ ಸಮಯದಲ್ಲಿ ಜನಿಸಿದ ನನ್ನ ಪುತ್ರನಿಗೆ ಬಾಬಾಗೌಡ ಪಾಟೀಲ ಎಂದೇ ಹೆಸರಿಟ್ಟಿದ್ದೇನೆ. ಅವನೀಗ ಎಂಜಿನಿಯರಿಂಗ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ’ ಎಂದು ತಿಳಿಸಿದರು.

‘ಪಾಟೀಲರು ರೈತ ಚಳವಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ರಾಜಕೀಯ ಪಕ್ಷಕ್ಕೆ ಹೋದಾಗ ನಾವೆಲ್ಲರೂ ಕುಸಿದು ಹೋಗಿದ್ದೆವು. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರನ್ನು ಯಾವ ರಾಜಕೀಯ ಪಕ್ಷವೂ ಇರಿಸಿಕೊಳ್ಳಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ವಿಚಾರಗಳನ್ನು ಬಿಡಲಿಲ್ಲ:

ಮುಖಂಡ ಕಲ್ಯಾಣರಾವ್ ಮುಚಳಂಬಿ, ‘ಬಾಬಾಗೌಡ ವ್ಯಕ್ತಿ ಆಗಿರಲಿಲ್ಲ; ಶಕ್ತಿಯಾಗಿದ್ದರು. ಅವರು ರೈತ ಸಂಘಕ್ಕೆ ಬಂದಾಗ ಈ ಭಾಗದಲ್ಲಿ ಬಹಳಷ್ಟು ಬೆಳೆಯಿತು. ಅವರ ಕಾರಣದಿಂದಾಗಿಯೇ ಗ್ರಾಮೀಣ ಭಾಗದಲ್ಲಿ ಬಿಜೆಪಿ ಬಲಗೊಂಡಿತು ಎಂದರೆ ತಪ್ಪಾಗಲಾರದು. ಯಾವುದೇ ಪಕ್ಷದಲ್ಲಿದ್ದರೂ ಅವರು ಹಸಿರು ಟವೆಲ್‌ ಮತ್ತು ವಿಚಾರಗಳನ್ನು ಬಿಡಲಿಲ್ಲ. ಅವರನ್ನು ರೈತ ಸಂಘಕ್ಕೆ ವಾಪಸ್ ಕರೆತರಲು ಸಾಧ್ಯವಾಗಲಿಲ್ಲ’ ಎಂದು ವಿಷಾದಿಸಿದರು.

‘ನಿಜವಾದ ಜೋಡೆತ್ತುಗಳೆಂದರೆ ಪ್ರೊ.ನಂಜುಂಡಸ್ವಾಮಿ ಹಾಗೂ ಬಾಬಾಗೌಡ ಪಾಟೀಲ’ ಎಂದು ವ್ಯಾಖ್ಯಾನಿಸಿದರು.

ಮುಖಂಡ ಮಲ್ಲಿಕಾರ್ಜುನ ವಾಲಿ ಮಾತನಾಡಿ, ‘ಸ್ವಾಭಿಮಾನದ ಬದುಕಿಗಾಗಿ ರೈತ ಚಳವಳಿ ಮುಂದುವರಿಯಬೇಕು’ ಎಂದು ತಿಳಿಸಿದರು.

ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ, ‘ಬಾಬಾಗೌಡರು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ರೂವಾರಿ. ಅವರ ಕಾರಣದಿಂದಾಗಿಯೇ ರೈತರಿಂದು ಹೊಲಗಳಿಗೆ ರಸ್ತೆ ಕಂಡುಕೊಂಡಿದ್ದಾರೆ’ ಎಂದು ಸ್ಮರಿಸಿದರು.

ಮುಖಂಡರಾದ ಶಂಕರ ಅಂಬಲಿ, ಪಾರ್ವತಿ ಕಳಸಣ್ಣವರ, ಶಿವಪುತ್ರ ಜಕನಾಳ, ಬಾಬಾಗೌಡ ಪಾಟೀಲರ ಪುತ್ರ ಪ್ರಕಾಶ ಪಾಟೀಲ, ಶ್ರೀಶೈಲ ನಾಯಕ ಮಾತನಾಡಿದರು.

ಕಾರ್ಯಾಧ್ಯಕ್ಷ ಎಂ.ರಾಮು, ಮುಖಂಡ ಶ್ರೀಕಾಂತ ಶಿರಹಟ್ಟಿ ಇದ್ದರು.

ಹುನ್ನಾರ ನಡೆಸಿವೆ: ಶಶಿಕಾಂತ

ಮುಖಂಡ ಶಶಿಕಾಂತ ನಾಯಕ ಮಾತನಾಡಿ, ‘ರೈತ ಸಂಘ ಅನೇಕ ಕಾರಣಗಳಿಂದ ಒಡೆದು ಹೋಗಿದೆ. ಅದರ ಉಪಯೋಗವನ್ನು ರಾಜಕೀಯ ಪಕ್ಷಗಳು ಪಡೆದುಕೊಂಡಿವೆ. ಸಂಘದ ಅಸ್ತಿತ್ವ ಹೋಗಲಾಡಿಸುವ ಹುನ್ನಾರವನ್ನೂ ಪಕ್ಷಗಳು ನಡೆಸಿವೆ. ಈ ವೇಳೆ ನಾವೆಲ್ಲರೂ ಒಗ್ಗೂಡಿ ಹೋರಾಟ ಬಲಪಡಿಸಬೇಕು. ನಾನು ಬಿಜೆ‍ಪಿಯಲ್ಲಿದ್ದರೂ ರೈತ ಚಳವಳಿಯ ಕೆಲಸಕ್ಕೆ ಸದಾ ಮುಂದಿರುತ್ತೇನೆ’ ಎಂದರು.

ತಿಳಿಸಬೇಕು

ಬಾಬಗೌಡ ಪಾಟೀಲರು ರಾಜಕೀಯ ಪಕ್ಷಗಳನ್ನು ಬಿಟ್ಟು ಹೊರಬಂದರೇಕೆ ಎನ್ನುವುದನ್ನು ರಾಜಕೀಯ ಮುಖಂಡರು ತಿಳಿಸಬೇಕಾಗುತ್ತದೆ
ಸಿದಗೌಡ ಮೋದಗಿ
ಅಧ್ಯಕ್ಷ, ಭಾರತೀಯ ಕೃಷಿಕ ಸಮಾಜ (ಸಂ)

ಶಕ್ತಗೊಳಿಸಬೇಕು

ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸಿದರೆ ರೈತ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟನೆ ಶಕ್ತಗೊಳಿಸಬೇಕು
ಪಾರ್ವತಿ ಕಳಸಣ್ಣವರ
ರೈತ ನಾಯಕಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು