ರೈತರ ಆತ್ಮಹತ್ಯೆ: ಮತ್ತೆ ಹೆಚ್ಚಿದ ಪ್ರಕರಣಗಳು

7
ಜಿಲ್ಲೆಯಲ್ಲಿ 2016–17ನೇ ಸಾಲಿನಲ್ಲಿ ಕಡಿಮೆ ಇತ್ತು

ರೈತರ ಆತ್ಮಹತ್ಯೆ: ಮತ್ತೆ ಹೆಚ್ಚಿದ ಪ್ರಕರಣಗಳು

Published:
Updated:

ಬೆಳಗಾವಿ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿಯುತ್ತಲೇ ಇವೆ. ಬರಗಾಲ, ಬೆಳೆ ಪಡೆಯಲಾಗದೆ ಆದ ಸಾಲಬಾಧೆ, ಬೆಳೆಗೆ ಸರಿಯಾದ ಬೆಲೆ ದೊರೆಯದಿರುವುದು, ಸಾಲ ನೀಡಿದವರಿಂದ ಬರುವ ಒತ್ತಡ ಮೊದಲಾದ ಕಾರಣಗಳಿಂದ ಅನ್ನದಾತರು ಸಾವಿನ ಮನೆಯ ಕದ ತಟ್ಟುತ್ತಿರುವುದು ಕಂಡುಬಂದಿದೆ. ಕೆಲವರು ಮರ್ಯಾದೆಗೆ ಅಂಜಿ ಬದುಕನ್ನು ಕೊನೆಗೊಳಿಸಿಕೊಂಡಿದ್ದಾರೆ. ಇದರಿಂದಾಗಿ ಅವರ ಕುಟುಂಬಗಳು ಅತಂತ್ರವಾಗುತ್ತಿವೆ.

ಜಾಗೃತಿ ಮೂಡಿಸುತ್ತಿರುವ ಮತ್ತು ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ನಡುವೆಯೂ ಆತ್ಮಹತ್ಯೆ ಪ್ರಕರಣಗಳು ನಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ. ರೈತರ ಸಂಕಷ್ಟಗಳಿಗೆ ಸಮರ್ಪಕ ಪರಿಹಾರ ದೊರೆತಿಲ್ಲದಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಜಿಲ್ಲಾಡಳಿತದಿಂದ ಸಂಗ್ರಹಿಸಿರುವ ಅಧಿಕೃತ ಅಂಕಿ–ಅಂಶಗಳ ಪ್ರಕಾರವೇ, 2017–18ನೇ ಸಾಲಿನಲ್ಲಿ 90 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 72 ಪ್ರಕರಣಗಳಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ. 17 ಪ್ರಕರಣಗಳಲ್ಲಿ, ಪರಿಹಾರ ನಿರಾಕರಿಸಲಾಗಿದೆ. ಒಂದು ಪ್ರಕರಣ ಇತ್ಯರ್ಥಪಡಿಸಲು ಬಾಕಿ ಇದೆ. ಹೋದ ವರ್ಷ, ಸಹಕಾರಿ ಸಂಸ್ಥೆಗಳಲ್ಲಿ ರೈತರು ಪಡೆದಿದ್ದ ₹ 50ಸಾವಿರದವರೆಗಿನ ಸಾಲವನ್ನು ಮನ್ನಾ ಮಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಆದೇಶ ಹೊರಡಿಸಿತ್ತು. ಈ ನಡುವೆಯೂ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿರುವುದು ಕಳವಳ ಮೂಡಿಸಿದೆ.

3 ತಿಂಗಳಲ್ಲಿ 9 ಮಂದಿ!:

2018–19ನೇ ಸಾಲಿನಲ್ಲಿ ಏಪ್ರಿಲ್‌ನಿಂದ ಈವರೆಗೆ ಅಂದರೆ ಮೂರೇ ತಿಂಗಳಲ್ಲಿ 9 ಪ್ರಕರಣಗಳು ವರದಿಯಾಗಿವೆ. ‘ಬೆಳಗಾವಿ ತಾಲ್ಲೂಕಿನಲ್ಲಿ 4, ರಾಮದುರ್ಗ, ಸವದತ್ತಿ, ಗೋಕಾಕ, ಹುಕ್ಕೇರಿ ಹಾಗೂ ಅಥಣಿ ತಾಲ್ಲೂಕಿನಲ್ಲಿ ತಲಾ ಒಬ್ಬರುಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಲಾಶಿ ಮೊಕಾಶಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸವದತ್ತಿ ತಾಲ್ಲೂಕಿನಲ್ಲಿ ಸತತ ಮೂರು ವರ್ಷ ಬರಗಾಲದಿಂದಾಗಿ ರೈತರು ತೀವ್ರ ತೊಂದರೆ ಅನುಭವಿಸಿದ್ದಾರೆ. ಬೆಳೆ ಕೈಗೆ ಬಾರಲಿಲ್ಲ. ಇದರಿಂದಾಗಿ ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲವರು ಮರ್ಯಾದೆಗೆ ಹೆದರಿ ಪ್ರಾಣ ಕಳೆದುಕೊಂಡಿದ್ದಾರೆ. ಹಿಂದಿನ ಸರ್ಕಾರದಲ್ಲಿ, ಉಚಿತವಾಗಿ ಅಕ್ಕಿ ವಿತರಿಸುವುದು ಮೊದಲಾದ ಸೌಲಭ್ಯ ಕಲ್ಪಿಸದೇ ಇದ್ದಿದ್ದರೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದವು’ ಎಂದು ಪ್ರಾಂತ ರೈತ ಸಂಘದ ಸಂಚಾಲಕ ಶ್ರೀಕಾಂತ ಹಟ್ಟಿಹೊಳಿ ಪ್ರತಿಕ್ರಿಯಿಸಿದರು.

ಪರಿಹಾರ ಮೊತ್ತ ಹೆಚ್ಚಳ:

ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಏರಿಸಿ ಹಿಂದಿನ ಸರ್ಕಾರ ಆದೇಶ ಹೊರಡಿಸಿತ್ತು. ಅದರಂತೆ ಪರಿಹಾರ ನೀಡಲಾಗುತ್ತಿದೆ. ಮೃತರ ಪತ್ನಿಗೆ ಕಂದಾಯ ಇಲಾಖೆಯಿಂದ ₹2000 ಪಿಂಚಣಿ, ಮಕ್ಕಳಿಗೆ ಉನ್ನತ ಶಿಕ್ಷಣದವರೆಗೆ  ಉಚಿತ ಶಿಕ್ಷಣ, ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆ ಕುಟುಂಬಕ್ಕೆ ಆರೋಗ್ಯ ಇಲಾಖೆಯಿಂದ ಇಂದಿರಾ ಸುರಕ್ಷಾ ಟ್ರಸ್ಟ್ ವತಿಯಿಂದ ಆರೋಗ್ಯ ಚೀಟಿ ನೀಡಲಾಗುತ್ತದೆ. ಇದರಿಂದ ನಿಗದಿತ ಆಸ್ಪತ್ರೆಗಳಲ್ಲಿ ಅವರಿಗೆ ಆರೋಗ್ಯ ಸೇವೆ ದೊರೆಯುತ್ತದೆ. ಪರಿಹಾರ ನೀಡುವ ಕುರಿತು ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು, ದಾಖಲೆಗಳನ್ನು ಪರಿಶೀಲಿಸಿ ಅನುಮೋದನೆ ಕೊಡುತ್ತದೆ ಎನ್ನುತ್ತಾರೆ ಅಧಿಕಾರಿಗಳು.

‘ಯಾರೂ ತಮ್ಮ ಕುಟುಂಬಕ್ಕೆ ಹಣ ದೊರೆಯಲೆಂದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಹಲವು ಕಾರಣಗಳಿಂದ ಅವರು ಸಾವಿನ ಹಾದಿ ಹಿಡಿಯಬಹುದು. ಎಲ್ಲ ಕುಟುಂಬದವರಿಗೂ ಪರಿಹಾರ ಕೊಡಬೇಕು’ ಎನ್ನುವುದು ರೈತ ಮುಖಂಡರ ಆಗ್ರಹವಾಗಿದೆ. 2016-17ನೇ ಸಾಲಿನಲ್ಲಿ ವರದಿಯಾಗಿದ್ದ 60 ಪ್ರಕರಣಗಳಲ್ಲಿ 55 ಕುಟುಂಬಗಳಿಗೆ ಪರಿಹಾರ ನೀಡಲಾಗಿತ್ತು. 5 ಪ್ರಕರಣಗಳಲ್ಲಿ ಪರಿಹಾರ ತಿರಸ್ಕರಿಸಲಾಗಿತ್ತು. 2015–16ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ ನೂರರ (103) ಗಡಿ ದಾಟಿತ್ತು.

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !