ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈಹಿಕ ಶಿಕ್ಷಣ ಶಿಕ್ಷಕರ ಪುಸ್ತಕ ಪ್ರೀತಿ...

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತಾಸೆಯಾದ ಸದಾಶಿವಯ್ಯ ಎಸ್. ಪಲ್ಲೇದ್
Last Updated 26 ಏಪ್ರಿಲ್ 2018, 12:03 IST
ಅಕ್ಷರ ಗಾತ್ರ

ಕುಶಾಲನಗರ: ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ 21ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವ ದೈಹಿಕ ಶಿಕ್ಷಣ ಶಿಕ್ಷಕರೂ ಆದ ಲೇಖಕ ಸದಾಶಿವಯ್ಯ ಎಸ್. ಪಲ್ಲೇದ್ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತಾಸೆಯಾಗಿದ್ದಾರೆ.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸದಾಶಿವಯ್ಯ ಎಸ್. ಪಲ್ಲೇದ್ ಅವರು, ದೇಸಿ ಕ್ರೀಡೆಗಳು ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳ ಬಗ್ಗೆ ಪುಸ್ತಕಗಳನ್ನು ಬರೆಯುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.

ಸದಾಶಿವಯ್ಯ ಎಸ್. ಪಲ್ಲೇದ್ ಅವರು ಡಾಕ್ಟರೇಟ್ ಪದವಿಗೂ ಭಾಜನರಾಗಿದ್ದು, ಆಂಧ್ರಪ್ರದೇಶದ ದ್ರಾವಿಡ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಶಾಮಲಾ ಅವರ ಮಾರ್ಗದರ್ಶನದಲ್ಲಿ ‘ಜಾನಪದ ಆಟಗಳು ಮತ್ತು ಸಾಮಾಜಿಕ ಮೌಲ್ಯಗಳು ಕರ್ನಾಟಕದ ಕೊಡಗು– ಬಾಗಲಕೋಟೆ ಜಿಲ್ಲೆಗಳು ತೌಲನಿಕ ಅಧ್ಯಯನ’ ಎಂಬ ಮಹಾ ಪ್ರಬಂಧಕ್ಕೆ ದ್ರಾವಿಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 11 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪಲ್ಲೇದ್ ಅವರು ಭಾಗಕೋಟೆ ಜಿಲ್ಲೆಯ ಹೊದ್ದೂರು ಗ್ರಾಮದ ಸಂಗಯ್ಯ ಪಲ್ಲೇದ್‌ ಮತ್ತು ಗಂಗಮ್ಮ ಪುತ್ರ.

ಹೊದ್ದೂರು ಗ್ರಾಮದಲ್ಲಿ ಜನಿಸಿದ ಇವರು ಸ್ವಗ್ರಾಮದಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದರು. ನಂತರ, ಬಾಗಲಕೋಟೆಯ ಬಸವೇಶ್ವರ ಕಲಾ ಹಾಗೂ ದೈಹಿಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿಎ ಮತ್ತು ಬಿಪಿ.ಇಡಿ ಪದವಿ ಪಡೆದರು.

ಮೈಸೂರು ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಬಿಎ, ಬಿ.ಇಡಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎ ಹಾಗೂ ಎಂಇಡಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಮುಕ್ತ ವಿಶ್ವವಿದ್ಯಾಲಯದಲ್ಲಿ ಡಿಪ್ಲೊಮಾ ಇನ್ ಯೋಗ, ಎಂಸಿಜೆ, ಡಿಪ್ಲೊಮಾ ಇನ್ ಸ್ಪೋರ್ಟ್ ಮ್ಯಾನೇಜ್‌ಮೆಂಟ್ ಸೇರಿದಂತೆ ಇನ್ನಿತರ ವ್ಯಾಸಂಗ ಮಾಡಿದ್ದಾರೆ.

ಈ ಹಿಂದೆ ಹಂಡ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದು, ನಂತರ ಕೂಡಿಗೆ ಡಯಟ್‌ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ಬಾಗಲಕೋಟೆಯ ಲಕ್ಷ್ಮೇಶ್ವರ ಕರ್ನಾಟಕ ಮಲ್ಲ ಕಂಬ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲರಾಗಿ ಹಾಗೂ ಸಿಬಿಎಸ್ಐ ಪಬ್ಲಿಕ್ ಸ್ಕೂಲ್‌ನಲ್ಲಿ ದೈಹಿಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಬಿಪಿ.ಇಡಿ ಪಠ್ಯಕ್ರಮದ ಸದಸ್ಯರಾಗಿ, ವಿವಿಧ ತರಬೇತಿಯಲ್ಲಿ ರಾಜ್ಯಮಟ್ಟದ ಸಂಪನ್ಮೂಲ ಹಾಗೂ ಸ್ಪರ್ಧಾಚೈತ್ರ ಮಾಸಪತ್ರಿಕೆ ಸಂಪಾದಕ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಕ್ರೀಡಾ ಕ್ಷೇತ್ರದ ಬಗ್ಗೆ ಸ್ಪರ್ಧಾಪ್ರೇರಣೆ ಪತ್ರಿಕೆಗೂ ಅಂಕಣ ಬರೆಯುತ್ತಿದ್ದಾರೆ. ಅಲ್ಲದೆ ಕೆಲವು ವಾರ ಪತ್ರಿಕೆ, ಜಿಲ್ಲಾ ಪತ್ರಿಕೆಗಳು ಹಾಗೂ ರಾಜ್ಯಪತ್ರಿಕೆಗಳಿಗೂ ಕ್ರೀಡಾ ವಿಚಾರ ಕುರಿತು ಲೇಖನಗಳನ್ನು ಬರೆಯುವ ಹವ್ಯಾಸ ಮಾಡಿಕೊಂಡಿದ್ದಾರೆ.

ಅಂದಿನಿಂದಲೇ ನಿರಂತರ ಅಧ್ಯಯನ ಹಾಗೂ ಬರವಣಿಗೆಯನ್ನು ಆರಂಭಿಸಿದರು. ಕನ್ನಡದಲ್ಲಿಯೇ ಕ್ರೀಡೆಗಳ ಬಗ್ಗೆ ಹೆಚ್ಚು ಮಾಹಿತಿ ದೊರೆಯಬೇಕು. ಪತ್ರಿಕೆಗಳಲ್ಲಿ ದೊರೆಯುವ ಪ್ರಚಲಿತ ವಿದ್ಯಾಮಾನದ ಜೊತೆಗೆ ಹಲವು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳಿಗೆ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸುಲಭವಾಗಿ ಮಾಹಿತಿ ದೊರೆಯುವಂತೆ ಮಾಡಿದ್ದಾರೆ.

ಪಲ್ಲೇದ್ ಅವರು ಉತ್ತಮ ಕ್ರೀಡಾಪಟು ಕೂಡ ಆಗಿದ್ದು, ಇವರು ಕಾಲೇಜು ವ್ಯಾಸಂಗದ ಸಂದರ್ಭದಲ್ಲಿ ಅಂತರ್ ವಿವಿ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಓಟ ಸ್ಪರ್ಧೆ ಸೇರಿದಂತೆ ಇನ್ನಿತರ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಸ್ತಿಯನ್ನು ಪಡೆದಿದ್ದಾರೆ.
**
ಕ್ರೀಡೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಶಾಲೆಯಲ್ಲಿ ಕ್ರೀಡೆಯನ್ನು ಕಡ್ಡಾಯಗೊಳಿಸಬೇಕು
ಡಾ.ಸದಾಶಿವಯ್ಯ ಎಸ್. ಪಲ್ಲೇದ್,ದೈಹಿಕ ಶಿಕ್ಷಣ ಶಿಕ್ಷಕ, ಕುಶಾಲನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT