ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಮಹಾನಗರಪಾಲಿಕೆ ಚುನಾವಣೆ: ಬಿಜೆಪಿ–ಕಾಂಗ್ರೆಸ್‌ ಪೈಪೋಟಿ, ಎಂಇಎಸ್ ಕಂಗಾಲು

ಅಭಿವೃದ್ಧಿ ಭರವಸೆ, ಆರೋಪ–ಪ್ರತ್ಯಾರೋಪಗಳಿಂದ ರಂಗೇರಿದ ಕಣ
Last Updated 30 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆಯ ಸಾರ್ವತ್ರಿಕ ಚುನಾವಣೆ ಸೆ.3ರಂದು ನಡೆಯಲಿದ್ದು, ಬಿಜೆಪಿ–ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಕಂಡುಬಂದಿದೆ. ಇದರಿಂದಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕಂಗಾಲಾಗಿದೆ.

ಈ ಪಾಲಿಕೆಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಕೀಯ ಪಕ್ಷಗಳ ಚಿಹ್ನೆಗಳ ಮೇಲೆ ಚುನಾವಣೆ ನಡೆಯುತ್ತಿರುವುದು ವಿಶೇಷ. ಹೀಗಾಗಿ, ಸಾಂಪ್ರದಾಯಿಕ ಮತದಾರರಿಗೂ ಇದು ಹೊಸ ಅನುಭವವೇ ಸರಿ. ಹಿಂದೆಲ್ಲಾ ಇಲ್ಲಿನ ಚುನಾವಣೆಯು ಪ್ರಮುಖವಾಗಿ ಭಾಷೆ ಆಧಾರದ ಮೇಲೆ ನಡೆಯುತ್ತಿತ್ತು. ಈ ಬಾರಿ ಬದಲಾದ ರಾಜಕೀಯ ವಿದ್ಯಮಾನವನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ರಾಜಕೀಯ ಪಕ್ಷಗಳು ಬೆವರಿಳಿಸುತ್ತಿವೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಆಮ್ ಆದ್ಮಿ ಪಕ್ಷ, ಎಸ್‌ಡಿಪಿಐ, ಎಐಎಂಐಎಂ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವುದರಿಂದಾಗಿ ಕಣ ರಂಗೇರಿದೆ.

ರಾಜಕೀಯ ಪಕ್ಷಗಳ ‘ಅಧಿಕೃತ ರಂಗಪ್ರವೇಶ’ವು, ಮರಾಠಿ ಭಾಷಿಕರೆಲ್ಲರೂ ತಮ್ಮವರು ಎನ್ನುತ್ತಿದ್ದ ಎಂಇಎಸ್‌ಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಬಿಜೆಪಿಯಿಂದ ಹೆಚ್ಚು ಸ್ಪರ್ಧಿಗಳು:

ಇದೇ ಮೊದಲ ಬಾರಿಗೆ ಬರೋಬ್ಬರಿ 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿಯು ಗರಿಷ್ಠ ಅಂದರೆ 55 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ಹಾಕಿದೆ. ಕಾಂಗ್ರೆಸ್‌ನ 45, ಜೆಡಿಎಸ್‌ನ 11, ಆಮ್ ಆದ್ಮಿ ಪಕ್ಷದ 27, ಎಸ್‌ಡಿಪಿಐ ಪಕ್ಷದ 1, ಉತ್ತಮ ಪ್ರಜಾಕೀಯದ 1 ಹಾಗೂ ಎಐಎಂಐಎಂ 7 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬಿಜೆಪಿಯವರು, ‘ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ನಮ್ಮನ್ನು ಬೆಂಬಲಿಸಿದರೆ ಅಭಿವೃದ್ಧಿಗೆ ಸಹಕಾರಿಯಾಗಲಿದೆ’ ಎಂದು ತಿಳಿಸಿ ಮತ ಕೇಳುತ್ತಿದ್ದಾರೆ. ಇಲ್ಲಿನ ಜ್ವಲಂತ ಸಮಸ್ಯೆ ಎಂದೇ ಬಿಂಬಿತವಾಗಿರುವ ‘ಬಾಂಡ್‌ ಮನೆಗಳ (ಬಾಂಡ್‌ಗಳ ಆಧಾರದ ಮೇಲೆ ನಿವೇಶನ ಖರೀದಿಸಿ ಕಟ್ಟಿದವು) ಸಕ್ರಮಕ್ಕೆ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿಜೆಪಿಯು ‘ಆಸೆ’ ಹುಟ್ಟಿಸಿದೆ. ವಿಶೇಷವಾಗಿ ದಕ್ಷಿಣ ಮತಕ್ಷೇತ್ರದಲ್ಲಿ ಈ ಸಮಸ್ಯೆ ಇದೆ. ಬಡ ಹಾಗೂ ಮಧ್ಯಮ ವರ್ಗದ ಸಾವಿರಾರು ಮಂದಿ ಇಂತಹ ‘ಬಾಂಡ್ ಮನೆ’ಗಳಲ್ಲಿ ವಾಸವಿದ್ದಾರೆ. ಚುನಾವಣೆ ವೇಳೆ ಭರವಸೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ‘ಈ ಬಗ್ಗೆ ಸರ್ಕಾರದಿಂದ ಅಧಿಕೃತವಾಗಿ ಘೋಷಣೆ ಮಾಡಿಸಲಿ’ ಎಂದು ಸವಾಲು ಹಾಕಿದೆ.

ಕಾಂಗ್ರೆಸ್ ಅಧಿಕೃತವಾಗಿ ಯಾವುದೇ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲ. ಆದರೆ, ‘ಗೆದ್ದರೆ ಆಸ್ತಿ ತೆರಿಗೆಯಲ್ಲಿ ಶೇ 50ರಷ್ಟು ರಿಯಾಯಿತಿ ನೀಡಲಾಗುವುದು’ ಎಂಬ ಅಚ್ಚರಿಯ ಘೋಷಣೆ ಮಾಡಿ ಮತದಾರರನ್ನು ಸೆಳೆಯಲು ಯತ್ನಿಸಿದೆ. ಆಮ್ ಆದ್ಮಿ ಪಕ್ಷವೂ ಅಭಿವೃದ್ಧಿಯ ಭರವಸೆಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಜಕೀಯ ಪಕ್ಷಗಳ ಅಬ್ಬರದ ನಡುವೆ ಕಳೆಗುಂದಿರುವ ಎಂಇಎಸ್, ತನ್ನ ಬೆಂಬಲಿತ ಅಭ್ಯರ್ಥಿಗಳು ಯಾರಾರು ಎನ್ನುವುದನ್ನು ಪ್ರಕಟಿಸುವುದಕ್ಕೂ ಸಾಧ್ಯವಾಗಿಲ್ಲ. ಆದರೆ, ಭಾಷೆ ವಿಚಾರದಲ್ಲಿ ರಾಜಕೀಯ ಮುಂದುವರಿಸಿದೆ.

ಮತ ಸೆಳೆಯಲು ರಣತಂತ್ರ

ಈ ನಡುವೆ, ಮರಾಠಿ ಪ್ಲಸ್ ಮುಸ್ಲಿಂ (ಎಂ ಪ್ಲಸ್ ಎಂ) ಎಂಬ ಸೂತ್ರದ ಅನುಷ್ಠಾನಕ್ಕೂ ಅಲ್ಲಲ್ಲಿ ಕಸರತ್ತು ನಡೆಸಿರುವ ಎಂಇಎಸ್, ಮತದಾರರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದೆ ಎಂಬ ಆರೋಪಗಳಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿಲ್ಲದ ವಾರ್ಡ್‌ಗಳಲ್ಲಿ ಎಂಇಎಸ್ ಪ್ರಾಬಲ್ಯ ಕಂಡುಬಂದಿದೆ. ಕೆಲವು ವಾರ್ಡ್‌ಗಳಲ್ಲಿ ಪಕ್ಷೇತರರು ಪ್ರಬಲ ಪೈಪೋಟಿ ಕೊಡುತ್ತಿದ್ದಾರೆ.

ವಾರ್ಡ್‌ಗಳ ಪುನರ್‌ವಿಂಗಡಣೆ ಬಳಿಕ ಕಣದ ಚಿತ್ರಣವೂ ಬದಲಾಗಿದೆ. ವಾರ್ಡ್‌ ವ್ಯಾಪ್ತಿ ತಿಳಿದುಕೊಳ್ಳುವುದು ಕೂಡ ಅಭ್ಯರ್ಥಿಗಳಿಗೆ ಸವಾಲಾಗಿಯೇ ಪರಿಣಮಿಸಿದೆ. ಎಲ್ಲರೂ ‘ಅಭಿವೃದ್ಧಿ’ ವಿಷಯ ಮುಂದಿಟ್ಟುಕೊಂಡು ಮತ ಯಾಚಿಸುತ್ತಿದ್ದಾರೆ. ಭರವಸೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

ಬಿಜೆಪಿಯು ತನ್ನೆಲ್ಲಾ ‘ಶಕ್ತಿ’ಯನ್ನೂ ಸಂಪೂರ್ಣ ವಿನಿಯೋಗಿಸಿ ಅಖಾಡಕ್ಕಿಳಿದಿದೆ. ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಮುಖಂಡರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು, ಪಾಲಿಕೆಯಲ್ಲಿ ಅಧಿಕಾರ ಪಡೆಯಲು ರಣತಂತ್ರ ರೂಪಿಸಿದೆ. ಯಾವ ವಾರ್ಡ್‌ನಲ್ಲಿ ಯಾವ ಸಮಾಜದವರು ಬಹುಸಂಖ್ಯಾತರೋ ಆ ಸಮಾಜಕ್ಕೆ ಸೇರಿದ ನಾಯಕರನ್ನು ಪ್ರಚಾರಕ್ಕೆ ಮುಂದೆ ಬಿಟ್ಟಿದೆ.

ಪಾಲಿಕೆ ವ್ಯಾಪ್ತಿಯ ದಕ್ಷಿಣ (ಅಭಯ ಪಾಟೀಲ) ಹಾಗೂ ಉತ್ತರ ಮತ ಕ್ಷೇತ್ರ (ಅನಿಲ ಬೆನಕೆ)ದಲ್ಲಿ ಬಿಜೆಪಿ ಶಾಸಕರಿದ್ದಾರೆ. ಐದು ವಾರ್ಡ್‌ಗಳು ಗ್ರಾಮೀಣ ಮತಕ್ಷೇತ್ರದಲ್ಲಿವೆ. ಅಲ್ಲಿ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳಕರ ಶಾಸಕಿಯಾಗಿದ್ದಾರೆ.

ಕ್ಷಮೆ ಯಾಚಿಸಿದ ಕಾರಜೋಳ

‘ಶವ ಸಂಸ್ಕಾರಕ್ಕೆ ಉಚಿತ ವ್ಯವಸ್ಥೆ ಮಾಡಲಾಗುವುದು’ ಎಂದು ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿಷಾದ ವ್ಯಕ್ತಪಡಿಸಿ, ‘ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದು ತಿಳಿಸಿ ತೇಪೆ ಹಾಕುವ ಕೆಲಸವನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT