ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ನಿಲ್ಲದು’

Last Updated 19 ಮಾರ್ಚ್ 2019, 12:08 IST
ಅಕ್ಷರ ಗಾತ್ರ

ಬೆಳಗಾವಿ: ‘ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ದೊರೆಯುವವರೆಗೆ ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟ ನಿಲ್ಲುವುದಿಲ್ಲ’ ಎಂದು ಬಸವ ಸಮಾಜದ ವಿವಿಧ ಕ್ಷೇತ್ರಗಳ ಮುಖಂಡರು ಹಾಗೂ ಮಠಾಧೀಶರು ಘೋಷಿಸಿದರು.

ನಾಗಮೋಹನ ದಾಸ್ ಉನ್ನತಾಧಿಕಾರ ಸಮಿತಿ ನೀಡಿರುವ ಲಿಂಗಾಯತ ಸ್ವತಂತ್ರ ಧರ್ಮದ ವರದಿಯ ವಾರ್ಷಿಕೋತ್ಸವ ಅಂಗವಾಗಿ ಬಸವ ಭೀಮ ಸೇನೆ ವತಿಯಿಂದ ಇಲ್ಲಿನ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ‘ಬಸವಾದಿ ಶರಣರ ಸ್ಮರಣಾರ್ಥ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ’ ಪ್ರದಾನ ಹಾಗೂ ಸ್ವತಂತ್ರ ಧರ್ಮದ ವರದಿ ನೀಡಿರುವ ಸಪ್ತರ್ಷಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು.

‘ಸ್ವತಂತ್ರ ಧರ್ಮದ ಹೋರಾಟವು ಹೊಟ್ಟೆ ಪಾಡಿನ ಹೋರಾಟವಲ್ಲ. ವಿಶ್ವದ ಧರ್ಮಗಳ ಸಾಲಿನಲ್ಲಿ ಕನ್ನಡ ನೆಲದ ಲಿಂಗಾಯತ ಧರ್ಮ ರಾರಾಜಿಸಬೇಕು. ಸ್ವತಂತ್ರ ಧರ್ಮವಾಗುವ ಮೂಲಕ ಅದು ವಿಶ್ವ ಧರ್ಮವಾಗಬೇಕು ಎಂಬುದು ಹೋರಾಟಗಾರರ ಗುರಿಯಾಗಿದೆ. ಈ ಗುರಿ ತಲುಪಲು ಯಾವುದೇ ತ್ಯಾಗ–ಬಲಿದಾನಕ್ಕೆ ಸಿದ್ಧವಿದ್ದೇವೆ’ ಎಂದು ತಿಳಿಸಿದರು.

‘ಧರ್ಮದ ಹೋರಾಟದಿಂದ ಧರ್ಮ ಒಡೆದಿಲ್ಲ. ಬಸವ ಸಮಾಜ ಮತ್ತೆ ಬಸವ ತತ್ವದ ಅಡಿಯಲ್ಲಿ ಒಂದಾಗುತ್ತಿದೆ. ಧರ್ಮ ಒಡೆಯಲಾಗುತ್ತಿದೆ ಎಂದು ಬೊಬ್ಬೆ ಹಾಕುತ್ತಿರುವವರಿಗೆ ಧರ್ಮವೇ ಇಲ್ಲ. ಬಸವ ಸಂಸ್ಕೃತಿಯನ್ನು ಅಳಿಸಲು ಯಾವ ಪರಿವಾರದಿಂದಲೂ ಸಾಧ್ಯವಿಲ್ಲ’ ಎಂದರು.

ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ, ನೇಗಿನಹಾಳದ ಬಸವ ಸಿದ್ಧಲಿಂಗ ಸ್ವಾಮೀಜಿ ಹಾಗೂ ಕಲಬುರ್ಗಿಯ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಸಾನ್ನಿಧ್ಯ ವಹಿಸಿದ್ದರು. ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ, ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷ ಶಂಕರ ಗುಡಸ, ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ರಾಮು ಗುಗವಾಡ, ಹೋರಾಟಗಾರ ಅಡಿವೇಶ ಇಟಗಿ, ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ, ರೈತ ಮುಖಂಡ ಸಿದಗೌಡ ಮೋದಗಿ ಮಾತನಾಡಿದರು. ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಅರವಿಂದ ಪರುಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದಕ್ಕೂ ಮುನ್ನ, ಲಿಂ. ಮಾತೆ ಮಹಾದೇವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT