ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ ಹಣ

ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿದ ಮುಖ್ಯ ಕಾರ್ಯದರ್ಶಿ
Last Updated 18 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಬೆಳಗಾವಿ/ ಚಿಕ್ಕೋಡಿ: ‘‌ಪ್ರವಾಹ ಮತ್ತು ಮಳೆಯಿಂದ ಮನೆ ಸಂಪೂರ್ಣ ಕುಸಿದಿದ್ದರೆ ನಿರ್ಮಾಣಕ್ಕೆ ₹ 5ಲಕ್ಷ ಪರಿಹಾರ ನೀಡಲಾಗುವುದು. ಮನೆ ನಿರ್ಮಾಣ ಮಾಡುವವರೆಗೆ ಪ್ರತ ತಿಂಗಳು ₹ 5ಸಾವಿರ ಬಾಡಿಗೆ (10 ತಿಂಗಳವರೆಗೆ) ಅಥವಾ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ತಕ್ಷಣ ₹ 50ಸಾವಿರ ಕೊಡಲಾಗುವುದು’ ಎಂದು ಮುಖ್ಯ ಕಾರ್ಯದರ್ಶಿ ಟಿ‌.ಎಂ. ವಿಜಯಭಾಸ್ಕರ್ ತಿಳಿಸಿದರು.

ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಪರಿಹಾರ ಕೇಂದ್ರಕ್ಕೆ ಭಾನುವಾರ ಭೇಟಿ ನೀಡಿ ಅವರು ಮಾತನಾಡಿದರು.

‘ಬಾಡಿಗೆ ಮನೆಯಲ್ಲಿದ್ದವರಿಗೂ ತಕ್ಷಣವೇ ₹ 50ಸಾವಿರ ನೀಡಲಾಗುವುದು. ಸಂತ್ರಸ್ತರು ಜಮೀನು ಹೊಂದಿದ್ದರೆ ಮನೆ ನಿರ್ಮಾಣಕ್ಕೆ ಹಣ ನೀಡಲಾಗುವುದು. ಜಮೀನು ಇಲ್ಲದವರಿಗೆ ಸರ್ಕಾರದಿಂದಲೇ ಮನೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ಬಾಡಿಗೆ ಮನೆಯಲ್ಲಿದ್ದರೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ₹ 50ಸಾವಿರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

ಎತ್ತರದ ಸೇತುವೆ ನಿರ್ಮಾಣಕ್ಕೆ ಮನವಿ:

‘ಪ್ರವಾಹ ಸಂದರ್ಭದಲ್ಲಿ ರಾಯಬಾಗ, ಚಿಕ್ಕೋಡಿ ಹಾಗೂ ಮಹಾರಾಷ್ಟ್ರದ ಸಂಪರ್ಕ ಕಡಿತಗೊಳ್ಳುವುದರಿಂದ ಜನ-ಜಾನುವಾರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲ ಆಗುವಂತೆ ಫ್ಲೈ ಓವರ್ ಮಾದರಿಯಲ್ಲಿ ಎತ್ತರದ ಸೇತುವೆ ನಿರ್ಮಾಣ ಅಗತ್ಯವಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಒತ್ತಾಯಿಸಿದರು. ಅಂಕಲಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದರು.

‘ಪ್ರತಿ ವರ್ಷ ಮಳೆ ಹೆಚ್ಚಾದರೆ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ಮುಳುಗಡೆಯಾಗುವ ಗ್ರಾಮಗಳಿಗೆ ರಸ್ತೆ ಸಂಪರ್ಕ ಸುಲಭವಾಗುವಂತೆ ಸೇತುವೆಗಳ ಎತ್ತರ ಹೆಚ್ಚಿಸಬೇಕು. ಜುಗೂಳ, ಮಂಗಾವತಿ, ಶಹಾಪುರ ಗ್ರಾಮಗಳ ಸ್ಥಳಾಂತರ ಅತ್ಯಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.

‘ಕೃಷ್ಣಾ ನದಿಗೆ 3.5 ಲಕ್ಷ ಕ್ಯುಸೆಕ್‌ ನೀರು ಬಂದರೆ ಈಗಿರುವ ಸೇತುವೆಗಳು ಮುಳುಗಡೆಯಾಗುತ್ತವೆ’ ಎಂದು ಹಿಡಕಲ್ ಜಲಾಶಯದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ ಸಿ.ಡಿ. ಪಾಟೀಲ ವಿವರಿಸಿದರು.

ಬೇರೆ ಕಡೆ ಜಾಗ ಕೊಡಿ:‘ಬೇರೆ ಕಡೆ ಜಾಗೆ ನೀಡಿದರೆ ನಾವು ಮನೆ ಕಟ್ಟಿಕೊಳ್ಳುತ್ತೇವೆ. ಮಣ್ಣಿನ ಮನೆಗಳು ಸಂಪೂರ್ಣ ಕುಸಿದಿವೆ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ನೀಡಲಾಗುತ್ತಿರುವ ಊಟ, ಉಪಹಾರ, ಔಷಧಿ ಮತ್ತಿತರ ಸೌಲಭ್ಯದ ಬಗ್ಗೆ ಮುಖ್ಯ ಕಾರ್ಯದರ್ಶಿ ಮಾಹಿತಿ ‍ಪಡೆದರು. ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಕೂಡ ನೀಡಲಾಗುವುದು ಎಂದು ತಿಳಿಸಿದರು.

ಎಷ್ಟು ಜನರಿಗೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಯಾವ ರೀತಿಯ ಔಷಧ ಕೊಡಲಾಗಿದೆ. ಗರ್ಭಿಣಿಯರು ಎಷ್ಟು ಜನರಿದ್ದಾರೆ. ಅವರಿಗೆ ಯಾವ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ ಎಂಬ ಮಾಹಿತಿ ಪಡೆದರು.

‘ಅಗತ್ಯ ಔಷಧಿಗಳನ್ನು ತಕ್ಷಣ ಪೂರೈಸಲು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ವಿವರಿಸಿದರು.

ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ್‌ ಸಂತೋಷ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT