ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮ ಸೇನೆ ಮುಖಂಡರ ಮೇಲೆ ಗುಂಡಿನ ದಾಳಿ: ತನಿಖೆಗೆ ನಾಲ್ಕು ತಂಡ

ನಗರದಲ್ಲಿ ಹೆಚ್ಚಿದ ಭದ್ರತೆ, ಸುತ್ತಲೂ ನಾಕಾಬಂದಿ: ಗಾಳಿಮಾತಿಗೆ ಕಿವಿಗೊಡದಂತೆ ಕಮಿಷನರ್‌ ಮನವಿ
Last Updated 8 ಜನವರಿ 2023, 6:33 IST
ಅಕ್ಷರ ಗಾತ್ರ

ಬೆಳಗಾವಿ: ಸಮೀಪದ ಹಿಂಡಲಗಾ ಕೇಂದ್ರ ಕಾರಾಗೃಹದ ಬಳಿ ಶನಿವಾರ ರಾತ್ರಿ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತ್ಕರ್‌ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ದೇಸೂರಕರ್‌ ಮೇಲೆ ಗುಂಡಿನ ದಾಳಿಯ ತನಿಖೆಗೆ ನಾಲ್ಕು ತಂಡ ರಚಿಸಲಾಗಿದೆ.

ನಗರದ ಒಳಗೆ ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಭಾನುವಾರ ರಾತ್ರಿಯಿಂದಲೇ ನಗರದ ಸುತ್ತ ನಾಕಾಬಂದಿ ಹಾಕಲಾಗಿದೆ. ಘಟನೆಯು ಸಮೀಪದ ಹಿಂಡಲಗಾ ಕೇಂದ್ರ ಕಾರಾಗೃಹದ ಹತ್ತಿರದಲ್ಲೇ ನಡೆದಿದ್ದು, ಕಾರಾಗೃಹ ಹಾಗೂ ಸುತ್ತಲಿನ ಪ್ರದೇಶಗಳ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆದಿದೆ.

ಘಟನೆ ಖಂಡಿಸಿ ಭಾನುವಾರ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ಆಯೋಜಿಸಲಾಗಿದೆ. ಹೀಗಾಗಿ, ಹೆಚ್ಚಿನ ಭದ್ರತೆ ಮಾಡಲಾಗಿದೆ.

ಶನಿವಾರ ರಾತ್ರಿ ಪರಿಶೀಲನೆ ನಡೆಸಿದ ನಗರ ಪೊಲೀಸ್‌ ಕಮಿಷನರ್‌ ಡಾ.ಎಂ.ಬಿ. ಬೋರಲಿಂಗಯ್ಯ, ‘ಗುಂಡು ಬಿದ್ದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗಬೇಕಿಲ್ಲ. ಊಹಾಪೋಹಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

‘ದಾಳಿ ಯಾವ ಕಾರಣಕ್ಕೆ ನಡೆದಿದೆ ಎಂಬುದುನ್ನು ಸ್ಪಷ್ಟವಾಗಿ ಈಗಲೇ ಹೇಳಲಾಗುವುದಿಲ್ಲ. ವೈಯಕ್ತಿಕ ಕಾರಣಕ್ಕೆ, ವ್ಯವಹಾರದ ದ್ವೇಷಕ್ಕೆ ಅಥವಾ ಇನ್ನಾವ ಕಾರಣಕ್ಕೆ ಗುಂಡು ಹಾರಿಸಿದ್ದಾರೆ ಎಂಬುದರ ಬಗ್ಗೆ ದಾಳಿಗೆ ಒಳಗಾದವರಲ್ಲೂ ಸಂದೇಹಗಳಿವೆ’ ಎಂದರು.

‘ಶನಿವಾರ ರಾತ್ರಿ ರವಿ ಅವರು ತಮ್ಮ ಮನೆಗೆ ಕಾರಿನಲ್ಲಿ ಮರಳುತ್ತಿದ್ದರು. ಅವರೊಂದಿಗೆ ಚಾಲಕ ಹಾಗೂ ಹಿಂಬದಿ ಸೀಟಿನಲ್ಲಿ ಇನ್ನೂ ಇಬ್ಬರು ಇದ್ದರು. ಆದರೆ, ರವಿ ಅವರ ಮೇಲೆ ಮಾತ್ರ ಒಂದು ಸುತ್ತಿನ ಗುಂಡು ಹಾರಿಸಲಾಗಿದೆ. ಅವರ ಗದ್ದಕ್ಕೆ ಯಾಗಿದ ಗುಂಡು, ಪಕ್ಕದ ಚಾಲಕನ ಕೈಗೆ ಸಿಕ್ಕಿಕೊಂಡಿದೆ. ಹೀಗಾಗಿ, ಈ ದಾಳಿ ರವಿ ಅವರನ್ನೇ ಗುರಿಯಾಗಿಸಿ ನಡೆದಿದೆ ಎಂಬುದು ಸ್ಪಷ್ಟವಾಗಿದೆ. ದಾಳಿಕೋರರು ಬೈಕ್‌ ಮೇಲೆ ಬಂದಿದ್ದರು ಎಂಬ ಮಾಹಿತಿ ಮಾತ್ರ ಗಾಯಗೊಂಡವರಿಗೆ ಗೊತ್ತಾಗಿದೆ. ಅವರು ಯಾರು ಎಂದು ಗುರುತಿಸಲು ಅಥವಾ ಅನುಮಾನಿಸಲು ಆಗಿಲ್ಲ. ತನಿಖೆ ನಡೆಸಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT