ಟನ್‌ ಕಬ್ಬಿಗೆ ₹3,100 ದರ ನಿಗದಿಗೆ ಬೆಳೆಗಾರರ ಆಗ್ರಹ

7

ಟನ್‌ ಕಬ್ಬಿಗೆ ₹3,100 ದರ ನಿಗದಿಗೆ ಬೆಳೆಗಾರರ ಆಗ್ರಹ

Published:
Updated:

ಬೆಳಗಾವಿ: ‘ಸಕ್ಕರೆ ಕಾರ್ಖಾನೆಗಳು ಟನ್‌ ಕಬ್ಬಿಗೆ ₹3,100 ದರ ನಿಗದಿ‍ಪಡಿಸಬೇಕು. ನಂತರವಷ್ಟೇ ಕಬ್ಬು ನುರಿಸುವಿಕೆ ಆರಂಭಿಸಬೇಕು’ ಎಂದು ಭಾರತೀಯ ಕೃಷಿಕ ಸಮಾಜ ರಾಜ್ಯ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ ಆಗ್ರಹಿಸಿದರು.

‘ಹಿಂದಿನ ಸಾಲಿನಲ್ಲಿ ಉಳಿಸಿಕೊಂಡಿರುವ ಬಾಕಿಯನ್ನು ಕೂಡಲೇ ಪಾವತಿಸಬೇಕು. ಇಲ್ಲದಿದ್ದರೆ ಕಾರ್ಖಾನೆಗಳ ಪುನರಾರಂಭಕ್ಕೆ ಅವಕಾಶ ಕೊಡುವುದಿಲ್ಲ’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರೈತರು ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ನ್ಯಾಯಸಮ್ಮತ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ಅವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಾಕಿ ಕೊಡಿಸುವಲ್ಲಿ ಜಿಲ್ಲಾಡಳಿತ ಕೂಡ ವಿಫಲವಾಗಿದೆ‌. ರೈತ ಮುಖಂಡ ಬಾಬಗೌಡ ಪಾಟೀಲ ಅವರು ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರೂ ಆಗಿದ್ದಾರೆ. ಆದರೆ, ಅವರು ರೈತರ ನೆರವಿಗೆ ಬರುತ್ತಿಲ್ಲವೇಕೆ’ ಎಂದು ಪ್ರಶ್ನಿಸಿದರು.

‘ಜಿಲ್ಲೆಯಲ್ಲಿ ಉತ್ತಮ ಇಳುವರಿ ಬರುವ ಟನ್ ಕಬ್ಬಿಗೆ ₹ 3,500 ದರ ನೀಡಬೇಕಾಗುತ್ತದೆ. ಉತ್ಪಾದನಾ ವೆಚ್ಚ ಆಧರಿಸಿ ವೈಜ್ಞಾನಿಕ ದರ ಕೊಡಬೇಕು’ ಎಂದು ಒತ್ತಾಯಿಸಿದರು.

‘ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಎಂದು ಹೇಳಿಕೊಳ್ಳುವ ಕೆಲವರು, ಸಕ್ಕರೆ ಕಾರ್ಖಾನೆಗಳೊಂದಿಗೆ ಶಾಮೀಲಾಗಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಹೋರಾಟ ತೀವ್ರಗೊಳ್ಳದಂತೆ ನೋಡಿಕೊಳ್ಳುತ್ತಿದ್ದಾರೆ. ಸರ್ಕಾರವೂ ಸಕ್ಕರೆ ಕಾರ್ಖಾನೆಗಳವರ ಲಾಬಿಗೆ ಮಣಿಯುತ್ತಿದೆ’ ಎಂದು ಆರೋಪಿಸಿದರು.

‘ಮುಂದಿನ ಹೋರಾಟದ ಕುರಿತು ರೂಪರೇಷೆ ಸಿದ್ಧಪಡಿಸುವ ಕುರಿತು ಕಬ್ಬು ಬೆಳೆಗಾರರ ಹಿತರಕ್ಷಣಾ ವೇದಿಕೆ ಹಾಗೂ ಭಾರತೀಯ ಕೃಷಿಕ ಸಮಾಜದ ವತಿಯಿಂದ ನ. 5ರಂದು ಮಧ್ಯಾಹ್ನ 3ಕ್ಕೆ ಮೂಡಲಗಿಯ ಬಸವ ಮಂಟಪದಲ್ಲಿ ರೈತರ ಸಮಾವೇಶ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಮುಖಂಡರಾದ ಮಹಾದೇವ ದಾನನ್ನವರ, ವಿ.ಜಿ. ಶೀನನ್ನವರ, ಬಸವರಾಜ ಸಸಾಲಟ್ಟಿ, ರಾಮಲಿಂಗ ಕಾಡಪ್ಪನವರ, ಟಿ.ಎ. ಪಾಟೀಲ, ಬಿ.ಎಸ್. ಪಾಟೀಲ, ಬಿ.ಎಸ್. ಕಾಕತಕರ, ಗುರುಪುತ್ರಪ್ಪ ತುರಮುರಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !