ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಮುಳುಗಿದ ಬೆಳೆ: ₹ 2,341 ಕೋಟಿ ಹಾನಿ

ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿದ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮಾಹಿತಿ
Last Updated 15 ಆಗಸ್ಟ್ 2019, 14:14 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದಾಗಿ ಮುಂಗಾರು ಬೆಳೆಗಳು ಜಲಾವೃತವಾಗಿರುವುದರಿಂದ ₹ 2,341 ಕೋಟಿ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 73ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಜಿಲ್ಲೆಯ 6.09 ಲಕ್ಷ ಹೆಕ್ಟೇರ್ ಕ್ಷೇತ್ರದ ಪೈಕಿ 2.35 ಲಕ್ಷ ಹೆಕ್ಟೇರ್‌ಗಿಂತಲೂ ಜಾಸ್ತಿ ಪ್ರದೇಶದ ಬೆಳೆಗಳು ಮುಳುಗಿವೆ. ನೀರು ಇಳಿದ ನಂತರ ಜಂಟಿ ಸಮೀಕ್ಷೆ ನಡೆಸಿ ನಿಖರವಾದ ಕ್ಷೇತ್ರವನ್ನು ಹಾಗೂ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು.

‘ಪೂರ್ವ ಮುಂಗಾರಿನಲ್ಲಿ ಶೇ 71ರಷ್ಟು ಮಳೆ‌ ಕೊರತೆಯಾಗಿದ್ದರಿಂದ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಪ್ರಾರಂಭವಾಗಲು ಹಿನ್ನಡೆಯಾಗಿತ್ತು. ಜೂನ್ ಹಾಗೂ ಜುಲೈನಲ್ಲಿ ಬಂದ ಮಳೆ ಅನುಕೂಲಕರವಾಗಿತ್ತು. ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ 490ರಷ್ಟು ಮಳೆಯಾಗಿ, ಹಾನಿ ಸಂಭವಿಸಿದೆ’ ಎಂದು ವಿವರ ನೀಡಿದರು.

ಪುನರ್ವಸತಿ ಕಲ್ಪಿಸಲು ಕ್ರಮ:‘ಜಿಲ್ಲೆಯು ಹಿಂದೆಂದೂ ಕಂಡರಿಯದಂತಹ ಪ್ರವಾಹದ ಹೊಡೆತಕ್ಕೆ ಸಿಲುಕಿದ್ದು, ಸಾವಿರಾರು ಕುಟುಂಬಗಳು ಪುನರ್ವಸತಿಯ ನಿರೀಕ್ಷೆಯಲ್ಲಿವೆ. ಜನರು ಜೀವ ರಕ್ಷಣೆಗಾಗಿ, ಉಟ್ಟ ಬಟ್ಟೆಯಲ್ಲಿಯೇ ಮನೆಗಳನ್ನು ಬಿಟ್ಟು ಬಂದಿರುವ ಸಂದಿಗ್ಧ ಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವು ಸಂತ್ರಸ್ತರ ನೆರವಿಗೆ ಸಮರೋಪಾದಿಯಲ್ಲಿ ಶ್ರಮಿಸುತ್ತಿದೆ. ಪ್ರವಾಹಕ್ಕೆ ಸಿಲುಕಿದವರ ರಕ್ಷಣೆ, ಆಶ್ರಯ, ಪರಿಹಾರ ಹಾಗೂ ‍‍ಪುನರ್ವಸತಿ ಕಾರ್ಯ ತಕ್ಷಣವೇ ಆರಂಭಿಸಿ ಭಾರಿ ಪ್ರಮಾಣದ ಸಾವು–ನೋವು ಮತ್ತು ಆಸ್ತಿಪಾಸ್ತಿ ನಷ್ಟ ತಡೆಗಟ್ಟಿದ್ದೇವೆ’ ಎಂದರು.

‘ಮನೆ ಕಳೆದುಕೊಂಡ ಕುಟುಂಬಕ್ಕೆ ತಲಾ ₹ 5 ಲಕ್ಷ, ದುರಸ್ತಿಗೆ ₹ 1 ಲಕ್ಷ ನೆರವನ್ನು ಸರ್ಕಾರ ಘೋಷಿಸಿದೆ. ತಕ್ಷಣದ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ₹ 10ಸಾವಿರ ನೀಡುವ ಕೆಲಸ ಚುರುಕಿನಿಂದ ನಡೆಯುತ್ತಿದೆ. ಬೆಳೆ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವು ದೊರೆಯಲಿದೆ’ ಎಂದು ತಿಳಿಸಿದರು.

ಎಲ್ಲರ ಜವಾಬ್ದಾರಿ ಇದೆ:‘ಪ್ರವಾಹಕ್ಕೆ ಸಿಲುಕಿದ್ದ 374 ಗ್ರಾಮಗಳ 4.14 ಲಕ್ಷ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಈ ನಡುವೆಯೂ ನೆರೆಗೆ ಸಿಲುಕಿ ಹಾಗೂ ಮನೆ ಕುಸಿದು ಒಟ್ಟು 13 ಜನರು ಮೃತಪಟ್ಟಿದ್ದಾರೆ. 274 ಜಾನುವಾರು ಸತ್ತಿವೆ. ಸಂತ್ರಸ್ತರಿಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ 493 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಅಲ್ಲಿ 1,84,966 ಮಂದಿ ಆಶ್ರಯ ಪಡೆದಿದ್ದಾರೆ’ ಎಂದು ವಿವರಿಸಿದರು.

‘ಪ್ರವಾಹದಿಂದ ಸಂತ್ರಸ್ತರಾಗಿರುವ ನಮ್ಮ ಸಹೋದರ–ಸಹೋದರಿಯರಿಗೆ ಪುನರ್ವಸತಿ ಕಲ್ಪಿಸುವುದು ಮತ್ತು ಬೆಳೆ ಹಾನಿಯಿಂದ ತತ್ತರಿಸಿರುವ ರೈತರಿಗೆ ಸೂಕ್ತ ನೆರವು ಒದಗಿಸಿ ಅವರ ಮೊಗದಲ್ಲಿ ಮಂದಹಾಸ ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತರಾಗಿ ಪ್ರಯತ್ನಿಸಬೇಕಾಗಿದೆ’ ಎಂದರು.

ಸ್ವಾತಂತ್ರ್ಯ ಹೋರಾಟಗಾರರನ್ನು ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ ಹಾಗೂ ಅಧಿಕಾರಿಗಳು ಸನ್ಮಾನಿಸಿದರು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡಿ ಗಮನಸೆಳೆದರು.

ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್, ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್, ಡಿಸಿಪಿ ಸೀಮಾ ಲಾಟ್ಕರ್‌ ಇದ್ದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿಯು ಸುವರ್ಣ ವಿಧಾನಸೌಧ, ಪ್ರಾದೇಶಿಕ ಆಯುಕ್ತರ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಬಳಿ ಧ್ವಜಾರೋಹಣ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT