ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆತಂಕದ ದಡ’ದಲ್ಲಿ ಅಡಿಬಟ್ಟಿ ಗ್ರಾಮಸ್ಥರು!

ಮನೆಗಳನ್ನು ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿಲ್ಲ: ಆರೋಪ
Last Updated 24 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಳಗಾವಿ: ಅಲ್ಲಿ ದುಃಸ್ಥಿತಿಯಲ್ಲಿರುವ ಮನೆಗಳೇ ಜಾಸ್ತಿ ಇವೆ. ಗೋಡೆಗಳು, ಮನೆಗಳ ಸಾಮಗ್ರಿಗಳ ಆವಶೇಷಗಳು ಪ್ರವಾಹದ ರೌದ್ರನರ್ತನಕ್ಕೆ ಸಾಕ್ಷಿಯಾಗಿವೆ. ಯಾವ ರಸ್ತೆಗಳಲ್ಲಿ ನೋಡಿದರೂ ಕೆಸರು ತುಂಬಿದೆ. ದೇವಸ್ಥಾನ, ಅಂಗನವಾಡಿ, ಶಾಲೆಯ ಸುತ್ತಮುತ್ತಲಿನ ವಾತಾವರಣದಲ್ಲೆಲ್ಲಾ ಗಲೀಜು. ಶೌಚಾಲಯಗಳು ಬಿದ್ದು ಹೋಗಿರುವುದರಿಂದ ಮಲ–ಮೂತ್ರ ವಿಸರ್ಜನೆಗಾಗಿ ಬಯಲನ್ನೇ ಆಶ್ರಯಿಸುವ ಸ್ಥಿತಿ.

– ಜಿಲ್ಲೆಯ ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಗ್ರಾಮದ ಸ್ಥಿತಿ ಇದು.

ಆಗಸ್ಟ್‌ನಲ್ಲಿ ಘಟಪ್ರಭಾ ನದಿ ಪ್ರವಾಹಕ್ಕೆ ಸಿಕ್ಕಿ ನಲುಗಿರುವ ಈ ಹಳ್ಳಿಯು ಇನ್ನೂ ಸುಧಾರಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಆಗ ನಾಲ್ಕೈದು ದಿನಗಳವರೆಗೆ ನೀರಿನಲ್ಲಿ ಮುಳುಗಿ ಹೋಗಿದ್ದ ಜನವಸತಿಯು ಮೂಲಸ್ವರೂಪವನ್ನೇ ಕಳೆದುಕೊಂಡಿದೆ. ಮಣ್ಣಿನಿಂದ ಕಟ್ಟಿದ್ದ ಮನೆಗಳೆಲ್ಲವೂ ಬಿದ್ದು ಹೋಗಿವೆ. ಸರ್ಕಾರಿ ಶಾಲೆಯ ಎರಡು ಕೊಠಡಿಗಳನ್ನು ‘ಅಸುರಕ್ಷಿತ’ ಎಂದು ಪರಿಗಣಿಸಿ ಬೀಗ ಹಾಕಲಾಗಿದೆ.

ಸುಧಾರಿಸಿಕೊಳ್ಳುವಾಗ:ಇನ್ನೇನು ಸುಧಾರಿಸಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಈಗ ಹಲವು ದಿನಗಳಿಂದ ಸತತ ಮಳೆಯಾಗುತ್ತಿರುವುದು ಅಲ್ಲಿನ ಜನರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ. ಘಟಪ್ರಭಾ ನದಿಯ ಪಕ್ಕದಲ್ಲೇ ಇರುವ ಇಲ್ಲಿನ ಜನರು ಜೋರು ಮಳೆ ಬಂತೆಂದರೆ ಹೆದರುತ್ತಿದ್ದಾರೆ! ನೆರೆಯಿಂದಾಗಿ ಬಹುತೇಕ ಊರಿಗೆ ಊರೇ ಮುಳುಗಿ ಹೋಗಿತ್ತು. ಪರಿಣಾಮ, ಮೂಲಸೌಲಭ್ಯಗಳೆಲ್ಲವೂ ಹಾಳಾಗಿ ಹೋಗಿರುವ ದೃಶ್ಯ ‘ಪ್ರಜಾವಾಣಿ’ ಪ್ರತಿನಿಧಿ ಗ್ರಾಮಕ್ಕೆ ಭೇಟಿ ನೀಡಿದಾಗ ಕಂಡುಬಂತು.

ಅನೈರ್ಮಲ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ.

ನದಿ ದಂಡೆಯಲ್ಲಿ ದೇವಸ್ಥಾನವಿದೆ. ಅದರ ಆವರಣದಲ್ಲೇ ಅಂಗನವಾಡಿ ಕೇಂದ್ರವಿದೆ. ಶಿಥಿಲಗೊಂಡು ದುಃಸ್ಥಿತಿಯಲ್ಲಿರುವ ಆ ಕೇಂದ್ರದಲ್ಲೇ ಮಕ್ಕಳನ್ನು ಕೂರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾಮಗಾರಿ ಶುರುವಾಗಿಲ್ಲ:ಮನೆಗಳು ಬಿದ್ದು ಎರಡೂವರೆ ತಿಂಗಳುಗಳೇ ಆಗಿದ್ದರೂ ಮನೆಗಳನ್ನು ದುರಸ್ತಿಪಡಿಸಿಕೊಳ್ಳುವ ಕೆಲಸವೇ ಆರಂಭವಾಗಿಲ್ಲ. ‘ಸರ್ಕಾರದಿಂದ ತಾತ್ಕಾಲಿಕವಾಗಿ ₹ 10ಸಾವಿರ ಪರಿಹಾರ ಸಿಕ್ಕಿದ್ದು ಬಿಟ್ಟರೆ ಬೇರೆ ಪರಿಹಾರ ಸಿಕ್ಕಿಲ್ಲ. ಮನೆಗಳ ದುರಸ್ತಿಗೆ ಅಥವಾ ನಿರ್ಮಾಣಕ್ಕೆ ಪರಿಹಾರ ಸಿಕ್ಕಿಲ್ಲ. ಸಮೀಕ್ಷೆ ನಡೆಸಿ ಹೋಗಿದ್ದಾರೆ. ಮನೆ ಕಳೆದುಕೊಂಡಿರುವ ಮಹಿಳೆಯರಿಬ್ಬರು ದೇವಸ್ಥಾನದ ಆವರಣದಲ್ಲಿ ಸೀರೆ ಕಟ್ಟಿಕೊಂಡು ಚಿಕ್ಕದಾದ ಗೂಡಿನ ರೀತಿ ಮಾಡಿಕೊಂಡಿದ್ದಾರೆ. ನನ್ನ ಜೀವನದಲ್ಲಿ ಇಂತಹ ಪ್ರವಾಹವನ್ನು ನೋಡಿರಲಿಲ್ಲ’ ಎಂದು 70 ವರ್ಷದ ಶಂಕರ ಮೂಡಲಗಿ ತಿಳಿಸಿದರು.

‘ಮನೆ ಕಳೆದುಕೊಂಡಿರುವವರು ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ. ಮನೆಗಳಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ’ ಎಂದು ಹಲವರು ತಿಳಿಸಿದರು.

ಹಿಂದೊಮ್ಮೆ ನೆರೆಬಾಧಿತವಾಗಿದ್ದ ಈ ಗ್ರಾಮವನ್ನು 5 ಕಿ.ಮೀ. ದೂರದಲ್ಲಿರುವ ಜಾಗಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಗ್ರಾಮಸ್ಥರಿಗೆ ಸೂಚನೆಯನ್ನೂ ನೀಡಲಾಗಿದೆ. ಆದರೆ, ಹುಟ್ಟಿದ ಊರು ಬಿಟ್ಟು ಹೋಗಲು ಅವರು ಸಿದ್ಧವಿಲ್ಲ ಎನ್ನಲಾಗುತ್ತಿದೆ.

ಸೂಚಿಸಲಾಗಿದೆ:‘ಪ್ರವಾಹ ಬಂದಾಗ ಜನರಿಗೆ ತೊಂದರೆಯಾಗುತ್ತದೆ ನಿಜ. ಆದರೆ, ನಂತರ ಸುಧಾರಿಸಿಕೊಳ್ಳುತ್ತಾರೆ. ಹೊಳೆ ಬಂದಾಗ ನೋಡಿಕೊಂಡರಾಯಿತು ಎಂದು ಸುಮ್ಮನಾಗುತ್ತಾರೆ. ಹುಟ್ಟಿ ಬೆಳೆದ ಊರು, ದೇವಸ್ಥಾನ, ಜಮೀನುಗಳನ್ನು ಬಿಟ್ಟು ಹೋಗಲು ಜನರು ಸಿದ್ಧವಿಲ್ಲ. ಪ್ರವಾಹ ಬಂದಾಗ ಚುರುಕಾಗುವ ಅಧಿಕಾರಿಗಳು ನಂತರ ಸುಮ್ಮನಾಗುತ್ತಾರೆ’ ಎಂದು ಮುಖಂಡರೊಬ್ಬರು ತಿಳಿಸಿದರು.

‘1996ರಲ್ಲಿ ನೆರೆ ಬಂದು ಊರು ಮುಳುಗಿತ್ತು. ಆಗ ಅಲ್ಲಿನ ಜನರಿಗೆ ಬೇರೆ ಕಡೆ ನಿವೇಶನಗಳನ್ನು ಹಂಚಿಕೆ ಮಾಡಿ ಹಕ್ಕುಪತ್ರಗಳನ್ನು ಕೊಡಲಾಗಿದೆ. ಆದರೆ, ಕೆಲವರಷ್ಟೇ ಸ್ಥಳಾಂತರಗೊಂಡಿದ್ದಾರೆ. ಬಹಳ ಮಂದಿ ಗ್ರಾಮದಲ್ಲೇ ಇದ್ದಾರೆ. ಅವರು ಈಗಲಾದರೂ ಎಚ್ಚೆತ್ತುಕೊಂಡು ತಮಗೆ ಹಂಚಿಕೆಯಾದ ಜಾಗಕ್ಕೆ ಹೋಗಿ, ಪರಿಹಾರದ ಹಣದಲ್ಲಿ ಮನೆಗಳನ್ನು ಕಟ್ಟಿಕೊಂಡರೆ ಮುಂದಿನ ದಿನಗಳಲ್ಲಿ ತೊಂದರೆಗೆ ಒಳಗಾಗುವುದು ತಪ್ಪುತ್ತದೆ. ಅದನ್ನು ಅವರಿಗೂ ತಿಳಿಸಲಾಗಿದೆ’ ಎಂದು ತಹಶೀಲ್ದಾರ್‌ ಪ್ರಕಾಶ್ ಹೊಳೆಪ್ಪಗೋಳ ಪ್ರತಿಕ್ರಿಯಿಸಿದರು.

*
ಅಡಿಬಟ್ಟಿ ಗ್ರಾಮ ನೆರೆಪೀಡಿತವಾಗಿದೆ. ಹೀಗಾಗಿ ಅಲ್ಲಿನ ಜನರಿಗೆ ಹಿಂದೆ ಹಂಚಿಕೆಯಾದ ಜಾಗಕ್ಕೆ ಹೋಗುವಂತೆ ಮತ್ತೊಮ್ಮೆ ಸೂಚಿಸಲಾಗುವುದು.
-ಪ್ರಕಾಶ್ ಹೊಳೆಪ್ಪಗೋಳ, ತಹಶೀಲ್ದಾರ್‌, ಗೋಕಾಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT