ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ, ಜಮಖಂಡಿಯಲ್ಲಿ ಪ್ರವಾಹ ಪರಿಸ್ಥಿತಿ

Last Updated 28 ಜುಲೈ 2021, 17:48 IST
ಅಕ್ಷರ ಗಾತ್ರ

ಬೆಳಗಾವಿ/ಬಾಗಲಕೋಟೆ: ಮಹಾರಾಷ್ಟ್ರ ಮತ್ತು ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಮಳೆ ಪ್ರಮಾಣ ತಗ್ಗಿದ್ದು, ಕೃಷ್ಣಾ ಸೇರಿದಂತೆ ಉಪ ನದಿಗಳ ಹರಿವಿನ ಮಟ್ಟವೂ ಕೊಂಚ ಇಳಿಕೆಯಾಗಿದೆ. ಇದರಿಂದಾಗಿ ಪ್ರವಾಹದ ಆತಂಕವೂ ತುಸು ಕಡಿಮೆಯಾಗಿದೆ.

ಮಹಾರಾಷ್ಟ್ರದ ಕಡೆಯಿಂದ ಒಟ್ಟು 3.82 ಲಕ್ಷ ಕ್ಯುಸೆಕ್‌ ನೀರು ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಬಂದು ಸೇರುತ್ತಿದೆ. ಮಂಗಳವಾರಕ್ಕೆ ಹೋಲಿಸಿದರೆ 9 ಸಾವಿರ ಕ್ಯುಸೆಕ್‌ ನೀರು ಕಡಿಮೆಯಾಗಿದೆ. ಚಿಕ್ಕೋಡಿ, ಕಾಗವಾಡ, ರಾಯಬಾಗ,ಅಥಣಿ ತಾಲ್ಲೂಕು
ಗಳಲ್ಲಿನ ನದಿ ತೀರದ ಗ್ರಾಮಗಳು ಜಲಾವೃತವಾಗಿವೆ. ಸೇತುವೆಗಳು ಮತ್ತು ಬ್ರಿಜ್ ಕಂ ಬ್ಯಾರೇಜ್‌ಗಳು ಮುಳುಗಡೆ ಸ್ಥಿತಿಯಲ್ಲೇ ಇವೆ.

ಘಟಪ್ರಭಾ, ಮಲಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ ನದಿಗಳಹರಿವಿನ ಮಟ್ಟದಲ್ಲೂ ಇಳಿಕೆ ಕಂಡುಬಂದಿದೆ. ಜಲಾಶಯಗಳಿಗೆ ಒಳಹರಿವು ಕಡಿಮೆ ಆಗಿರುವುದರಿಂದಾಗಿ ಹೊರಹರಿವಿನಲ್ಲೂ ಇಳಿಕೆ ಮಾಡಲಾಗಿದೆ. ಗೋಕಾಕ ತಾಲ್ಲೂಕಿನ ಲೋಳಸೂರ ಸೇರಿದಂತೆ ಅಲ್ಲಲ್ಲಿ ಸೇತುವೆಗಳ ಮೇಲೆ ನೀರು ಬರುತ್ತಿಲ್ಲ. ಆದರೆ, ರಸ್ತೆ ಕೊಚ್ಚಿ ಹೋಗಿರುವುದರಿಂದ ಸಂಚಾರಕ್ಕೆ ಯೋಗ್ಯವಾಗಿಲ್ಲ.

ಕೂಡಲಸಂಗಮ ದೇವಸ್ಥಾನ ಸಂಕೀರ್ಣಕ್ಕೆ ನೀರು: ಹಿಪ್ಪರಗಿ ಜಲಾಶಯದಿಂದ ಕೃಷ್ಣಾ ನದಿಗೆ 4.50 ಲಕ್ಷ ಕ್ಯುಸೆಕ್ ನೀರು ಹರಿಯಬಿಡಲಾಗಿದೆ. ಇದರಿಂದಬುಧವಾರ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ಪ್ರವಾಹ ಪರಿಸ್ಥಿತಿ ತೀವ್ರಗೊಂಡಿದೆ. ನದಿ ದಂಡೆಯ 18 ಹಳ್ಳಿಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ.

ಮುಧೋಳ ಹಾಗೂ ಬಾಗಲಕೋಟೆ ತಾಲ್ಲೂಕುಗಳಲ್ಲಿ ಘಟಪ್ರಭಾ ನದಿಯಲ್ಲಿನ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಬಾದಾಮಿ ತಾಲ್ಲೂಕಿನಲ್ಲಿ ಮಲಪ್ರಭಾ ಪ್ರವಾಹ ಇಳಿಕೆಯಾಗಿದೆ. ಗೋವನಕೊಪ್ಪ–ಕೊಣ್ಣೂರು ನಡುವೆ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ವಾಹನ ಸಂಚಾರ ಬುಧವಾರ ಮಧ್ಯಾಹ್ನದಿಂದ ಪುನಃ ಆರಂಭವಾಗಿದೆ.

ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮಸ್ಥಾನ ಕೂಡಲಸಂಗಮದಲ್ಲಿ ಪ್ರವಾಹದ ನೀರು ಸಂಗಮೇಶ್ವರ ದೇವಸ್ಥಾನ ಹಾಗೂ ಬಸವಣ್ಣನ ಐಕ್ಯಮಂಟಪದ ಹೊರಭಾಗದ ಸಂಕೀರ್ಣಕ್ಕೆ ನುಗ್ಗಿದೆ.

ಘಟಪ್ರಭಾ ನದಿಯ ಪ್ರವಾಹದ ನೀರು ಚಿಂಚಖಂಡಿ ಸೇತುವೆ ಮೇಲೆ ಹರಿಯುತ್ತಿರುವುದರಿಂದ ಬಾಗಲಕೋಟೆ–ಮುಧೋಳ ನಡುವಿನ ನೇರ ಸಂಪರ್ಕ ನಾಲ್ಕನೇ ದಿನವೂ ಕಡಿತಗೊಂಡಿದೆ. ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿ ನೀರು ಸೇತುವೆ ಮೇಲೆ ಹರಿಯುತ್ತಿದೆ. ಹೀಗಾಗಿ ಜಮಖಂಡಿ–ವಿಜಯಪುರ ನಡುವಿನ ಸಂಪರ್ಕ ರಸ್ತೆ ಬಂದ್ ಆಗಿದೆ.

ಸಾಧಾರಣ ಮಳೆ: ಕೊಡಗು ಜಿಲ್ಲೆಯ ಕೆಲವೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಮಂಗಳವಾರ ರಾತ್ರಿ ಮಡಿಕೇರಿ, ಭಾಗಮಂಡಲ, ತಲಕಾವೇರಿ, ಕಾಟಕೇರಿ, ಮದೆ, ಮಾದಾಪುರ ಭಾಗದಲ್ಲಿ ಗಾಳಿ ಸಹಿತ ಜೋರು ಮಳೆಯಾಗಿತ್ತು.

ಪ್ರವಾಹ: ಕೃಷ್ಣಾದಲ್ಲಿ ಏರಿಕೆ, ತುಂಗಭದ್ರಾದಲ್ಲಿ ಇಳಿಕೆ

ಕಲಬುರ್ಗಿ: ನಾರಾಯಣಪುರ ಜಲಾಶಯದಿಂದ 3.80 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನುಕೃಷ್ಣಾ ನದಿಗೆ ಹರಿಸಲಾಗುತ್ತಿದ್ದು, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಯಾದಗಿರಿ ಜಿಲ್ಲೆಶಹಾಪುರ, ವಡಗೇರಾ ತಾಲ್ಲೂಕಿನ ಕೆಲ ಹಳ್ಳಿಗಳ ಜಮೀನುಗಳಿಗೆ ನೀರು ನುಗ್ಗಿದೆ. ಸುರಪುರ ತಾಲ್ಲೂಕಿನ ಅರಳಹಳ್ಳಿ, ಮುಷ್ಟಳ್ಳಿ ಹಾಗೂ ಶೆಳ್ಳಗಿ ಗ್ರಾಮಗಳ ಒಟ್ಟಾರೆ 24 ಮಂದಿಯನ್ನು ಸುರಕ್ಷಿತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ಸಮೀಪದ ಹೂವಿನಹೆಡಗಿ ಸೇತುವೆ ಪಕ್ಕದಲ್ಲಿದ್ದ ಹೋಟೆಲ್‌ಗಳಿಗೆ ನೀರು ನುಗ್ಗಿದೆ. ತುಂಗಭದ್ರಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT