ಶನಿವಾರ, ಆಗಸ್ಟ್ 24, 2019
21 °C
ಕಣ್ಣೀರಲ್ಲಿ ಕೈತೊಳೆಯುತ್ತಿರುವ ಮೌಲಾಸಾಬ್ ಕುಟುಂಬ

ಮದುವೆ ಸಂಭ್ರಮ ಕಿತ್ತುಕೊಂಡ ಮಳೆ

Published:
Updated:
Prajavani

ಬೆಳಗಾವಿ: ಮಗಳ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದ ಇಲ್ಲಿನ ಪಾಟೀಲ ಮಾಳದ ಮೌಲಾಸಾಬ್ ನದಾಫ್ ಅವರ ಕನಸನ್ನು ಮಹಾ ಮಳೆ ಛಿದ್ರಗೊಳಿಸಿದೆ. ಅವರಿದ್ದ ಬಾಡಿಗೆ ಮನೆಗೆ ನೀರು ನುಗ್ಗಿದ್ದರಿಂದ ಗೋಡೆಗಳೆಲ್ಲವೂ ಕುಸಿದು ಬಿದ್ದಿವೆ. ಅದರಲ್ಲಿದ್ದ ವಸ್ತುಗಳೆಲ್ಲವೂ ನೀರು ಪಾಲಾಗಿವೆ. ದಿಕ್ಕು ತೋಚದಂತಹ ಸ್ಥಿತಿಯಲ್ಲಿ ಈ ಕುಟುಂಬವಿದೆ.

ಇದೇ 25ರಂದು ಅವರ 2ನೇ ಪುತ್ರಿ ಆಸಿಯಾ ಅವರ ಮದುವೆ ಹುಬ್ಬಳ್ಳಿಯ ವರನೊಂದಿಗೆ ನಿಶ್ಚಯವಾಗಿತ್ತು. ಇದಕ್ಕಾಗಿ ಅಗತ್ಯ ತಯಾರಿಯನ್ನೂ ಅವರು ಮಾಡಿಕೊಳ್ಳುತ್ತಿದ್ದರು. ಈಗ ಎಲ್ಲವನ್ನೂ ಕಳೆದುಕೊಂಡಿರುವ ಅವರಿಗೆ ಆಕಾಶವೇ ಕಳಚಿ ಬಿದ್ದಂತಹ ಅನುಭವ. ಸೋಮವಾರ ಬಕ್ರೀದ್ ಹಬ್ಬವನ್ನೂ ಆಚರಿಸಲಾಗದ ಸ್ಥಿತಿಯಲ್ಲಿ ಅವರು ಕಣ್ಣೀರಿಡುತ್ತಾ ಕುಳಿತಿದ್ದರು. ಮದುವೆ ಸಂಭ್ರಮ ಇರಬೇಕಿದ್ದ ಮನೆಯಲ್ಲಿ ಮೌನ ಆವರಿಸಿತ್ತು.

‘ಖಾಸಗಿ ಕಂಪನಿಯೊಂದರಲ್ಲಿ ವೈರ್‌ಮನ್‌ ಕೆಲಸ ಮಾಡುತ್ತೇನೆ. ತಿಂಗಳಿಗೆ ₹8 ಸಾವಿರ ಸಂಬಳ. ಬಹಳ ವರ್ಷಗಳಿಂದಲೂ ಈ ಮನೆಯಲ್ಲಿ ಬಾಡಿಗೆಗೆ ಇದ್ದೆವು. ಪತ್ನಿಗೆ ಹೃದಯದ ಸಮಸ್ಯೆ ಇದ್ದು, ತಿಂಗಳಿಗೆ ಔಷಧಕ್ಕಾಗಿಯೇ ₹3,500 ಬೇಕು. ಮಗ ಮಾನಸಿಕವಾಗಿ ಸದೃಢವಾಗಿಲ್ಲ. ನಾನೊಬ್ಬನೇ ಕುಟುಂಬ ನಿರ್ವಹಿಸುತ್ತಿದ್ದೇನೆ. ಮಗಳ ಮದುವೆಗಾಗಿ ಖಾಸಗಿಯವರಿಂದ ಶೇ 5ರ ಬಡ್ಡಿದರದಲ್ಲಿ ₹ 4 ಲಕ್ಷ ಸಾಲ ಪಡೆದಿದ್ದೆ. ಆ ಹಣದಲ್ಲಿ ಖರೀದಿಸಿದ್ದ ಹೊಸ ಬಟ್ಟೆ, ₹70 ಸಾವಿರ ನಗದು ನೀರು ಪಾಲಾಗಿದೆ. ಎರಡೂವರೆ ತೊಲ ಬಂಗಾರದ ಆಭರಣವೂ ಕಾಣುತ್ತಿಲ್ಲ’ ಎಂದು ಮೌಲಾಸಾಬ್‌ ‘‍ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ಮನೆಗೆ ನೀರು ನುಗ್ಗಿದ್ದರಿಂದ ನಾವು ಅಲ್ಲಿಂದ ಹೊರ ಬಂದೆವು. ಬೇರೊಬ್ಬರ ಮನೆಯಲ್ಲಿದ್ದೆವು. ಸೋಮವಾರ ಬಂದು ನೋಡಿದರೆ, ಮನೆಯೆಲ್ಲವೂ ಕುಸಿದಿದೆ. ಒಳಗಿದ್ದ ಸಾಮಗ್ರಿಗಳೆಲ್ಲವೂ ಹಾಳಾಗಿವೆ. ಮಗಳ ಮದುವೆಗೆ ಏನು ಮಾಡುವುದು? ಈಗ ಉಜ್ವಲ ನಗರದಲ್ಲಿ ತಾತ್ಕಾಲಿಕವಾಗಿ ಬಾಡಿಗೆ ಮನೆಯೊಂದನ್ನು ಮಾಡಿದ್ದೇನೆ. ₹8 ಸಾವಿರ ಬಾಡಿಗೆ ಕಟ್ಟಬೇಕು. ಹಣ ಎಲ್ಲಿಂದ ತರುವುದು ಎನ್ನುವುದೇ ತಿಳಿಯುತ್ತಿಲ್ಲ’ ಎಂದು ಕಣ್ಣೀರಿಟ್ಟರು.

‘ದೇವರೆಲ್ಲಿದ್ದಾನೆ? ಇದ್ದಿದ್ದರೆ ನಮ್ಮ ಬಾಳು ಈ ರೀತಿಯಾಗುತ್ತಿರಲಿಲ್ಲ. ನಾವೀಗ ಇರುವುದೆಲ್ಲಿ, ಬಾಡಿಗೆ ಕಟ್ಟಲು ಹಣ ತರುವುದೆಲ್ಲಿ? ಯಾರಿಗೂ ಇಂತಹ ಸ್ಥಿತಿ ಬರಬಾರದು. ಮುಂದೇನು ಎನ್ನುವುದೇ ನಮಗೆ ತಿಳಿಯುತ್ತಿಲ್ಲ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಸರ್ಕಾರದವರು ನಮಗೆ ಮನೆ ಕಟ್ಟಿಸಿಕೊಡಬೇಕು’ ಎಂದು ಮೌಲಾಸಾಬ್‌ ಅವರ ಅಕ್ಕ ಆಶಾಬಿ ಬೆಂಗೇರಿ ಮನವಿ ಮಾಡಿದರು.

ಸಂಪರ್ಕಕ್ಕೆ ಮೊ:73383 87466 (ಮೌಲಾಸಾಬ್).

Post Comments (+)