ಎಫ್‌ಎಂ ರೇಡಿಯೊ: ಭರವಸೆಗೆ ವರ್ಷ!

7
ಕೇಂದ್ರ ಸಚಿವ ರಾಜ್ಯವರ್ಧನ ಸಿಂಗ್‌ ಆಶ್ವಾಸನೆ ನೀಡಿದ್ದರು

ಎಫ್‌ಎಂ ರೇಡಿಯೊ: ಭರವಸೆಗೆ ವರ್ಷ!

Published:
Updated:

ಬೆಳಗಾವಿ: ನಗರದಲ್ಲಿ ಎಫ್‌ಎಂ ರೇಡಿಯೊ ಕೇಂದ್ರ ಸ್ಥಾಪನೆಯ ಭರವಸೆ ಈಡೇರಿಲ್ಲ.

ಹೋದ ವರ್ಷ ಜೂನ್‌ 13ರಂದು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಫೌಂಡ್ರಿ ಕ್ಲಸ್ಟರ್‌ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿಜಿಎಫ್‌ಟಿ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ ಸಿಂಗ್‌ ರಾಥೋಡ್‌ ಈ ಭರವಸೆ ನೀಡಿದ್ದರು. ಉದ್ಯಮಿಗಳ ಒತ್ತಡಕ್ಕೆ ಮಣಿದಿದ್ದ ಅವರು, ‘ನೀವು ಇಷ್ಟು ಕೇಳಿಕೊಂಡ ಮೇಲೆ ಸುಮ್ಮನಿರಲಾಗುವುದಿಲ್ಲ. ಆದರೆ, ಒಂದು ವರ್ಷ ಸಮಯ ಬೇಕಾಗುತ್ತದೆ. ಡಿಸೆಂಬರ್‌ ಒಳಗೆ ಇದಕ್ಕೆ ಬೇಕಾದ ಪೂರಕ ಕೆಲಸಗಳೆಲ್ಲವನ್ನೂ ಪೂರ್ಣಗೊಳಿಸಲಾಗುವುದು. ಮುಂದಿನ ವರ್ಷದ ವೇಳೆಗೆ ಕೇಂದ್ರ ಆರಂಭಿಸಲಾಗುವುದು’ ಎಂದು ಪ್ರಕಟಿಸಿದ್ದರು.

ವಾಣಿಜ್ಯ ಚಟುವಟಿಕೆಗಳಿಂದ ಗುರುತಿಸಿಕೊಂಡಿರುವ ಹಾಗೂ ಐದು ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿರುವ ನಗರದಲ್ಲಿ ಪ್ರಸ್ತುತ ರೇಡಿಯೊ ಕೇಂದ್ರಗಳಿಲ್ಲ. ಕೆಎಲ್‌ಇ ಸಂಸ್ಥೆಯು ‘ವೇಣುಧ್ವನಿ’ ಎನ್ನುವ ಸಮುದಾಯ ರೇಡಿಯೊ ಕೇಂದ್ರವನ್ನು ನಡೆಸುತ್ತಿದೆ. ಕೆಲವೇ ಪ್ರದೇಶಗಳ ವ್ಯಾಪ್ತಿಯನ್ನು ಅದು ಒಳಗೊಂಡಿದೆ. ಹೀಗಾಗಿ, ಬೆಂಗಳೂರು, ಮೈಸೂರು ರೀತಿಯಲ್ಲಿ ಹೆಚ್ಚಿನ ಪ್ರದೇಶಕ್ಕೆ ಪ್ರಸಾರ ವ್ಯಾಪ್ತಿ ಹೊಂದಿರುವ ರೇಡಿಯೊ ಕೇಂದ್ರ ಬೇಕು ಎನ್ನುವ ಬೇಡಿಕೆ ಜನರದ್ದಾಗಿದೆ.

ಸಿದ್ಧತೆಯೇ ನಡೆದಿಲ್ಲ:

ಸಚಿವರು ನೀಡಿದ್ದ ಭರವಸೆ ಕುರಿತು ಫೇಸ್‌ಬುಕ್‌ ಮತ್ತಿತರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಚರ್ಚೆಯಾಗಿತ್ತು. ಬಹುತೇಕರು ಇದನ್ನು ಸ್ವಾಗತಿಸಿದ್ದರು. ಆದರೆ, ವರ್ಷ ಕಳೆದರೂ ಕೇಂದ್ರ ಆರಂಭಿಸುವ ಕುರಿತು ಯಾವುದೇ ಚಟುವಟಿಕೆಗಳು ನಡೆದಿಲ್ಲ ಎನ್ನುವುದು ಜಿಲ್ಲಾಡಳಿತದಿಂದ ಮೂಲಗಳಿಂದ ತಿಳಿದುಬಂದಿದೆ.

ಕೇಂದ್ರ ಸ್ಥಾಪನೆಗೆ ಕೈಗೊಳ್ಳಬೇಕಾದ ಪೂರಕ ಕೆಲಸಗಳ ಬಗ್ಗೆ ಸಂಬಂಧಿಸಿದ ಸಚಿವಾಲಯದಿಂದ ಇಲ್ಲಿನ ಜಿಲ್ಲಾಡಳಿತಕ್ಕಾಗಲೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಾಗಲೀ ಪತ್ರ ವ್ಯವಹಾರ ನಡೆದಿಲ್ಲ. ಪರಿಣಾಮ, ಭರವಸೆಯು ಈ ವರ್ಷದಲ್ಲಿ ಈಡೇರುವ ಲಕ್ಷಣಗಳು ಕಂಡುಬರುತ್ತಿಲ್ಲ ಎನ್ನಲಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಸುರೇಶ ಅಂಗಡಿ, ‘ಕೇಂದ್ರ ಸಚಿವರು ಭರವಸೆ ನೀಡಿದ್ದ ಕುರಿತು ನೆನಪಿಸಲಾಗುವುದು. ಆ ವಿಷಯದ ಕುರಿತು ಮತ್ತೆ ಚರ್ಚೆಯಾಗಿರಲಿಲ್ಲ. ಫಾಲೋಅಪ್‌ ಮಾಡುವುದಕ್ಕೆ ಆಗಿಲ್ಲ. ಶೀಘ್ರವೇ ಅವರಿಗೆ ವಿವರವಾದ ಪತ್ರ ಬರೆದು, ಇಲ್ಲಿಗೆ ಎಫ್‌ಎಂ ಕೇಂದ್ರ ಬೇಕಾಗಿರುವ ಕುರಿತು ಮನವರಿಕೆ ಮಾಡಿಕೊಡಲಾಗುವುದು’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !