ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗಸೂಚಿ ಪ್ರಕಾರ ಬಕ್ರೀದ್ ಆಚರಿಸಿ: ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ

Last Updated 29 ಜುಲೈ 2020, 14:49 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಬಕ್ರೀದ್ ಹಬ್ಬ ಆಚರಿಸಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು.

ಆ.1ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಶಾಂತಿ ಹಾಗೂ ಕಾನೂನು‌ ಸುವ್ಯವಸ್ಥೆ ಕಾಪಾಡುವ ನಿಮಿತ್ತ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಪ್ರಮುಖವಾಗಿ ಮಸೀದಿಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದನ್ನು ನಿರ್ಬಂಧಿಸಲಾಗಿದೆ. ‌ಅಂದು ಮಸೀದಿಗಳಲ್ಲಿ ಏಕಕಾಲದಲ್ಲಿ 50 ಜನಕ್ಕಿಂತ ಹೆಚ್ಚಿನವರು ಸೇರುವಂತಿಲ್ಲ’ ಎಂದು ತಿಳಿಸಿದರು.

ಟೋಕನ್ ಮಾಡಿ

‘ಮಾರ್ಗಸೂಚಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಹೆಚ್ಚಾಗಿ ಜನರು ಬರುವ ಮಸೀದಿಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ಮುಖಂಡರು ಜವಾಬ್ದಾರಿ ತೆಗೆದುಕೊಳ್ಳಬೇಕು. ಆರೋಗ್ಯದ ದೃಷ್ಟಿಯಿಂದ ಮನೆಯಿಂದಲೇ ಪ್ರಾರ್ಥಿಸಲು ಕೋರಿಕೊಳ್ಳಬೇಕು. ಮಕ್ಕಳು, ಹಿರಿಯರು ಮನೆಯಿಂದ ಮಸೀದಿಗಳಿಗೆ ತೆರಳದಂತೆ ನೋಡಿಕೊಳ್ಳಬೇಕು. ಪ್ರಾರ್ಥನೆಗೆ ಬರುವರಿಗೆ ಸಮಯ ನಿಗದಿಪಡಿಸಬೇಕು’ ಎಂದು ನಿರ್ದೇಶನ ನೀಡಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ‘ಪ್ರಾರ್ಥನೆ ಮಾಡುವ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಸಿದ್ಧಪಡಿಸಬೇಕು. ಕಂಟೈನ್ಮೆಂಟ್ ಝೋನ್‌ನಲ್ಲಿರುವ ಮಸೀದಿಗಳಲ್ಲಿ ಪ್ರಾರ್ಥಿಸಲು ಯಾರಿಗೂ ಅವಕಾಶ ಇರುವುದಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ 10 ವರ್ಷಕ್ಕಿಂತ ಕೆಳಗಿನ ಹಾಗೂ 60 ವರ್ಷ ಮೇಲಿನವರು ಮಸೀದಿಗಳಿಗೆ ತೆರಳುವಂತಿಲ್ಲ. ರೋಗದ ಲಕ್ಷಣಗಳುಳ್ಳವರು ಕೂಡ ಮಸೀದಿಗೆ ಬಾರದಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.

ಧರ್ಮ ಗುರುಗಳು ತಿಳಿಸಲಿ

‘ಮಾರ್ಗಸೂಚಿಯನ್ನು ಧರ್ಮಗುರುಗಳ ಮುಖಾಂತರ ಪ್ರಚಾರ ಮಾಡಿ ಜನರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಪ್ರತಿ ಮಸೀದಿಗಳಿಗೆ ಸ್ವಯಂ ಸೇವಕರನ್ನು ನೇಮಿಸಬೇಕು. ಪ್ರಾರ್ಥನೆ ಸಂದರ್ಭದಲ್ಲಿ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಹ್ಯಾಂಡ್ ಗ್ಲೌಸ್‌ ವ್ಯವಸ್ಥೆ ಮಾಡಬೇಕು. ಮಸೀದಿ ಒಳಗಡೆ ಒಂದು ಸಮಯಕ್ಕೆ 50 ಜನರಿಗೆ ಮಾತ್ರವೇ ಅವಕಾಶ ಇರುವುದರಿಂದ ಪ್ರತಿ ಬ್ಯಾಚ್‌ಗಳಿಗೆ ಸಮಯ ನಿಗದಿಪಡಿಸಿಬೇಕು’ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್, ‘ಒಂದು ಬ್ಯಾಚ್ ಪ್ರಾರ್ಥನೆ ಮುಗಿಸಿದ ಬಳಿಕ ಮಸೀದಿ ಒಳಗಡೆ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ಒಂದು ಕುಟುಂಬದಿಂದ ಎಲ್ಲರೂ ಪ್ರಾರ್ಥನೆಗಾಗಿ ಮಸೀದಿಗೆ ಹೋಗುವುದಕ್ಕಿಂತ ಒಬ್ಬರು ಬರುವಂತೆ ನೋಡಿಕೊಳ್ಳುವುದು ಉತ್ತಮ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಎಚ್‌ಒ ಡಾ.ಶಶಿಕಾಂತ ಮುನ್ಯಾಳ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್. ತುಕ್ಕಾರ, ಮಹಾನಗರ ಪಾಲಿಕೆಯ ಆಯುಕ್ತ ಕೆ.ಎಚ್. ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT