ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟದ ಕತೆ ಬಿಚ್ಚಿಟ್ಟ ಸ್ವಾತಂತ್ರ್ಯ ಸೇನಾನಿ

ಇಂಡೇನ್ ಗ್ಯಾಸ್ ವಿತರಕರಿಂದ ಬಸಪ್ಪಗೆ ಸತ್ಕಾರ
Last Updated 10 ಜನವರಿ 2019, 7:00 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ನಾಲ್ಕಾರು ದಿನಗಳಿಂದ ಆಹಾರ ಸ್ವೀಕರಿಸಿಲ್ಲ. ಸಲಾಯಿನ್ ಮೇಲೆಯೇ ದಿನ ಕಳೆಯುತ್ತಿದ್ದಾರೆ. ಆದರೂ ಅಂದಿನ ಹೋರಾಟದ ಕತೆಯನ್ನು ಯುವಕರಿಗೆ ಹೇಳಬೇಕೆಂಬ ತುಡಿತಕ್ಕೆ ಅನಾರೋಗ್ಯ ಅಡ್ಡ ಬರಲಿಲ್ಲ...

ಕಿತ್ತೂರಿನ ಗುರುವಾರ ಪೇಟೆಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಬಸಪ್ಪ ಅಮಾಸಿ ಅವರಿಗೆ ಸ್ವಾತಂತ್ರ್ಯ ಹೋರಾಟದ ಶಬ್ದ ಕೇಳಿದರೆ ಸಾಕು, ರೋಮಾಂಚನಗೊಳ್ಳುತ್ತಾರೆ. ಅಂದು ಕಂಡುಂಡ ನೋವು, ನಲಿವಿನ ಕತೆ ಹೇಳಲು ಪ್ರಾರಂಭಿಸುತ್ತಾರೆ. ಈಗ ಅವರಿಗೆ 92 ವಯಸ್ಸು. ಅನಾರೋಗ್ಯ ಕಾಡುತ್ತಿದ್ದರೂ ಅಜ್ಜನ ಉತ್ಸಾಹಕ್ಕೆ ಎಣೆಯಿಲ್ಲ. ಅಂದಿನ ಸ್ವಾತಂತ್ರ್ಯ ಹೋರಾಟದ ಕುತೂಹಲಕಾರಿ ಕತೆಯ ಎಳೆಯೊಂದನ್ನು ಬುಧವಾರ ಯುವಕರ ಮುಂದೆ ಬಿಚ್ಚಿಟ್ಟರು.

ಗ್ರಾಹಕರ ದಿನಾಚರಣೆ ಅಂಗವಾಗಿ ಇಂಡೇನ್ ಅಡುಗೆ ಅನಿಲ ಸಿಲಿಂಡರ್‌ ವಿತರಕ ಪ್ರಸಾದ್ ಬಸವರಾಜ್ ದೊಡಮನಿ ಹಾಗೂ ಸಿಬ್ಬಂದಿ ನೀಡಿದ ಸತ್ಕಾರ ಸ್ವೀಕರಿಸಿದ ಅವರು, ಹೋರಾಟದ ನೆನಪುಗಳಿಗೆ ಜಾರಿದರು. ಅದನ್ನು ಪರಿಚಯ ಮಾಡಿಕೊಟ್ಟರು. ನೇರ ಮತ್ತು ನಿಷ್ಠುರ ನುಡಿಗಳನ್ನು ಮುಲಾಜಿಲ್ಲದೆ ಹೇಳಿದರು.

ವಾಹನ ಸುಟ್ಟಿದ್ದೆವು:ತಿಗಡೊಳ್ಳಿಯವರಾದ ಅಮಾಸಿ ಕುಟುಂಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ವೀರಭದ್ರಪ್ಪ, ಅಡಿವೆಪ್ಪ, ಚನ್ನಪ್ಪ ಮತ್ತು ಬಸಪ್ಪ ನಾಲ್ವರು ಸಹೋದರರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು. ಕೊನೆಯವರಾದ ಬಸಪ್ಪ ಮಾತ್ರ ಈಗ ಇದ್ದಾರೆ.

‘ಸ್ವಾತಂತ್ರ್ಯ ಹೋರಾಟದಲ್ಲಿ ತಿಗಡೊಳ್ಳಿಯ ಶಿವಪ್ಪ ಮಲಶೆಟ್ಟಿ ನೇತೃತ್ವದಲ್ಲಿ ಅಸಹಕಾರ ಚಳವಳಿ ಪ್ರಾರಂಭ ಮಾಡಿದ್ದೆವು. ಸಹೋದರ ಚನ್ನಪ್ಪನ ಹತ್ತಿರ ದೇಸೀ ಪಿಸ್ತೂಲ್ ಇರುವ ವಿಷಯ ಬ್ರಿಟಿಷ್ ಅಧಿಕಾರಿಗಳಿಗೆ ಗೊತ್ತಾಗಿತ್ತು. ಹೀಗಾಗಿ ಮನೆ ಮೇಲೆ ದಾಳಿಗೆ ಬಂದಿದ್ದರು. ಗ್ರಾಮಕ್ಕೆ ರಸ್ತೆಯೂ ಚೆನ್ನಾಗಿರಲಿಲ್ಲ. ಕಿತ್ತೂರು-ಬೀಡಿ ಮಾರ್ಗದಲ್ಲಿ ವಾಹನ ನಿಲ್ಲಿಸಿ ಬ್ರಿಟಿಷ್ ಅಧಿಕಾರಿ ಸಿಬ್ಬಂದಿಯೊಂದಿಗೆ ಊರಿಗೆ ಹೊರಟರು. ಇದನ್ನು ದೂರದಿಂದಲೇ ಗಮನಿಸಿದ ನಾವು ಅಧಿಕಾರಿಗಳ ತಂಡ ಹೋದ ನಂತರ ವಾಹನದ ಬಳಿ ಬಂದೆವು. ಅದರಲ್ಲಿದ್ದ ಚಾಲಕನನ್ನು ಎಳೆದು ಮರಕ್ಕೆ ಕಟ್ಟಿದೆವು. ಆ ವಾಹನವನ್ನು ಸುಟ್ಟು ಹಾಕಿದೆವು’ ಎಂದು ತಿಳಿಸಿದರು.

‘ವಿಷಯ ತಿಳಿದ ಬ್ರಿಟಿಷ್ ಅಧಿಕಾರಿ ತಿಗಡೊಳ್ಳಿ ಬೀದಿಯಲ್ಲಿ ಕೂಗಾಡುತ್ತಾ ಓಡಾಡಿದ. ತಾಯಿಯನ್ನು ಬಂಧಿಸಿ ಕರೆದೊಯ್ದರು. ಚನ್ನಪ್ಪನ ಬಂಧನವಾದ ನಂತರ ತಾಯಿ ಬಿಟ್ಟು ಕಳುಹಿಸಿದರು. ಹಿಂಡಲಗಾ ಜೈಲಿಗೆ ತಳ್ಳಿದರು’ ಎಂದು ವಿವರಿಸಿದರು. ಇಂಥ ಹಲವಾರು ರೋಮಾಂಚಕಾರಿ ಕತೆಗಳು ಅಜ್ಜನ್ನ ನೆನಪಿನ ಗಂಟಿನಲ್ಲಿವೆ. ಅವರ ಕಾಲದಲ್ಲಿದ್ದ ಅನೇಕ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಿದರು.

ಕನ್ನಡ ಶಾಲೆ:ಸ್ವಾತಂತ್ರ್ಯ ದೊರೆತ ನಂತರ ಬೆಳಗಾವಿಗೆ ಹೋಗಿ ನೆಲೆಸಿದ್ದ ಅಮಾಸಿ ಕುಟುಂಬದ 3ನೇ ಸಹೋದರ ಚನ್ನಪ್ಪ ರುದ್ರಪ್ಪ ಅಮಾಸಿ ಕುಂದರವಾಡ ಸರ್ಕಾರಿ ಜೈಲು ಖರೀದಿಸಿ ಮರಾಠಿಮಯವಾಗಿದ್ದ ಬೆಳಗಾವಿಯಲ್ಲಿ ಮೊದಲ ಕನ್ನಡ ಶಾಲೆ ಪ್ರಾರಂಭಿಸಿದರು. ವಡಗಾವಿಯ 14ನೇ ನಂಬರ್‌ ಶಾಲೆಯೆಂದು ಅದನ್ನು ಕರೆಯುತ್ತಾರೆ. ಆಗ ಜೈಲ್‌ ಶಾಲೆ, ಅಮಾಸಿಯವರ ಶಾಲೆ ಎಂದು ಕರೆಯುತ್ತಿದ್ದರು. ಚನ್ನಪ್ಪ ತಮ್ಮ ಅಂತ್ಯ ಕಾಲದಲ್ಲಿ, ಶಾಲೆಯನ್ನು ಸರ್ಕಾರಕ್ಕೆ ಒಪ್ಪಿಸಿದರು’ ಎಂದು ಬಸಪ್ಪ ಅವರ ಪುತ್ರ ಸಂಗಮೇಶ್ ಅಮಾಸಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT