ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಕೊರತೆ; ಐಸ್‌ಕ್ರೀಂ ಘಟಕ ಸ್ಥಾಪನೆ ಮುಂದೂಡಿಕೆ ?

Last Updated 10 ಜನವರಿ 2019, 15:31 IST
ಅಕ್ಷರ ಗಾತ್ರ

ಬೆಳಗಾವಿ: ಎರಡು ವರ್ಷಗಳ ಹಿಂದೆ ಐಸ್‌ಕ್ರೀಂ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿದ್ದ ಇಲ್ಲಿನ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು, ಹಣದ ಕೊರತೆಯಿಂದಾಗಿ ಘಟಕ ಸ್ಥಾಪನೆಯನ್ನು ಮುಂದೂಡಿದೆ.

ಪ್ರತಿದಿನ 2.45 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಇದರಲ್ಲಿ ಸುಮಾರು 80,000ದಿಂದ 1 ಲಕ್ಷ ಲೀಟರ್‌ವರೆಗೆ ಹಾಲನ್ನು ಮಾರಾಟ ಮಾಡಲಾಗುತ್ತದೆ. ಇನ್ನುಳಿದ ಹಾಲನ್ನು ಸಿಹಿ ಪದಾರ್ಥ, ಡೈರಿ ಉತ್ಪನ್ನಗಳನ್ನು ತಯಾರಿಸಲು ಬಳಸಲಾಗುತ್ತಿದೆ. ಮೊಸರು, ಮಜ್ಜಿಗೆ, ತುಪ್ಪ, ಲಸ್ಸಿ, ಕುಂದಾ, ಪೇಡೆ, ಮೈಸೂರು ಪಾಕ್‌ ತಯಾರಿಸಲು ಬಳಕೆಯಾಗುತ್ತಿದೆ.

ಇನ್ನೂ ಹೆಚ್ಚುವರಿಯಾಗಿ ಉಳಿಯುವ ಹಾಲನ್ನು ಬಳಸಿ ಐಸ್‌ಕ್ರೀಂ ತಯಾರಿಸಬಹುದು ಎನ್ನುವ ಆಲೋಚನೆಯು ಎರಡು ವರ್ಷಗಳ ಹಿಂದೆ ಡೈರಿಯ ಹಿರಿಯ ಅಧಿಕಾರಿಗಳಿಗೆ ಬಂದಿತ್ತು. ಅದಕ್ಕೆ ಪೂರಕವಾಗಿ ಪ್ರಾಥಮಿಕ ಹಂತದ ಸಭೆಗಳು ಹಾಗೂ ಚರ್ಚೆಗಳು ಉನ್ನತ ಮಟ್ಟದಲ್ಲಿ ನಡೆದಿದ್ದವು ಎಂದು ಮೂಲಗಳು ಹೇಳಿವೆ.

ಮುಂದಿನ ವರ್ಷ: ‘ಹೌದು, ಒಂದೆರಡು ವರ್ಷಗಳ ಹಿಂದೆ ಐಸ್‌ಕ್ರೀಂ ತಯಾರಿಸುವ ಘಟಕ ಸ್ಥಾಪಿಸುವ ಬಗ್ಗೆ ಚರ್ಚೆ ನಡೆದಿತ್ತು. ಸುಮಾರು ₹ 3 ಕೋಟಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಲಾಗಿತ್ತು. ಆದರೆ, ಅಷ್ಟು ಹಣ ನಮ್ಮ ಬಳಿ ಇಲ್ಲ. ಹೀಗಾಗಿ ಈ ಯೋಜನೆಯನ್ನು ಮುಂದಕ್ಕೆ ಹಾಕಿದ್ದೇವೆ. ಹಣವನ್ನು ಸಂಗ್ರಹಿಸಿದ ನಂತರ ಮುಂದಿನ ವರ್ಷಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಯಬಾಗದಲ್ಲಿ ಡೇರಿ ನಿರ್ಮಾಣ:

‘ಕಳೆದ ವರ್ಷ ₹ 10 ಕೋಟಿ ವೆಚ್ಚದಲ್ಲಿ ಫ್ಲೆಕ್ಸಿ ಪ್ಯಾಕ್‌ ಘಟಕವನ್ನು ಸ್ಥಾಪಿಸಿದೇವು. ಈ ವರ್ಷ ರಾಯಬಾಗದಲ್ಲಿ 60,000 ಲೀಟರ್‌ದಿಂದ 1 ಲಕ್ಷ ಲೀಟರ್‌ ಸಾಮರ್ಥ್ಯದ ಡೇರಿಯನ್ನು ನಿರ್ಮಿಸಲಾಗುತ್ತಿದೆ. ಜೂನ್‌– ಜುಲೈ ವೇಳೆಗೆ ಪೂರ್ಣಗೊಳ್ಳಲಿದೆ. ರಾಯಬಾಗ, ಚಿಕ್ಕೋಡಿ, ಅಥಣಿ ಸೇರಿದಂತೆ ದಕ್ಷಿಣ ಮಹಾರಾಷ್ಟ್ರದ ಕಡೆ ಹಾಲು ಸಂಗ್ರಹಿಸಲು ಹಾಗೂ ಸಂಸ್ಕರಣೆ ಮಾಡಿ ಮಾರಾಟ ಮಾಡಲು ಅನುಕೂಲವಾಗಲಿದೆ. ಬೆಳಗಾವಿಯಿಂದ ಅಲ್ಲಿಯವರೆಗಿನ ಸಾಗಾಟ ವೆಚ್ಚ ಉಳಿತಾಯವಾಗಲಿದೆ’ ಎಂದು ಹೇಳಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT