ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋ–ಶಿವಾಪುರ: ಜನಸ್ನೇಹಿ ಕ್ರಮಕ್ಕೆ ಗೌರವ

ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕಾರಕ್ಕೆ ಭಾಜನ
Last Updated 3 ಅಕ್ಟೋಬರ್ 2019, 9:29 IST
ಅಕ್ಷರ ಗಾತ್ರ

ಸವದತ್ತಿ: (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೋಟೂರು ಶಿವಾಪುರ ಗ್ರಾಮ ಪಂಚಾಯ್ತಿಯು ಜನಸ್ನೇಹಿ ಕ್ರಮಗಳ ಅನುಷ್ಠಾನದಿಂದಾಗಿ ಸರ್ಕಾರದಿಂದ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಭಾಜನವಾಗಿದೆ.

ಗ್ರಾಮದ ಪ್ರಗತಿ ಹಾಗೂ ಗ್ರಾಮಸ್ಥರ ಅನುಕೂಲಕ್ಕಾಗಿ ಸರ್ಕಾರ ಕೊಡಮಾಡುವ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಪಾರದರ್ಶಕ ಆಡಳಿತದ ಕಾರ್ಯಗಳನ್ನು ಗುರುತಿಸಿ ಈ ಪಂಚಾಯ್ತಿಗೆ 2018–19ನೇ ಸಾಲಿನ ಪುರಸ್ಕಾರ ದೊರೆತಿದೆ.

2019–11ರಲ್ಲಿ ಕೇಂದ್ರ ಸರ್ಕಾರದಿಂದ ‘ನಿರ್ಮಲ ಗ್ರಾಮ ಪುರಸ್ಕಾರ’ ತನ್ನದಾಗಿಸಿಕೊಂಡ ಪಂಚಾಯ್ತಿ ಇದು. 814 ಕುಟುಂಬಗಳಿವೆ. 5ಸಾವಿರ ಜನಸಂಖ್ಯೆ ಹೊಂದಿದೆ. ಶೌಚಾಲಯ ನಿರ್ಮಾಣ ಪ್ರಮಾಣ ಶೇ. 100ರಷ್ಟಿದೆ. ಬಯಲು ಶೌಚ ಮುಕ್ತ ಪಂಚಾಯ್ತಿ ಎಂಬ ಗೌರವ ಪಡೆದಿದೆ.

2018–19ರಲ್ಲಿ ಶಿವಾಪುರ ಗ್ರಾಮವನ್ನು ಸಂಪೂರ್ಣ ಅಂಚೆ ಜೀವವಿಮಾ ಗ್ರಾಮವಾಗಿ ಘೋಷಿಸಲಾಗಿದೆ. ಇಡೀ ಪಂಚಾಯ್ತಿ ವ್ಯಾಪ್ತಿಯಲ್ಲಿ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆಗಳು, ಗಟಾರಗಳು, ಬೀದಿದೀಪಗಳು ಮೊದಲಾದ ಮೂಲಸೌಲಭ್ಯ ಕಲ್ಪಿಸಲಾಗಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹ 50 ಲಕ್ಷ, 12ನೇ ಹಣಕಾಸು ಯೋಜನೆಯಲ್ಲಿ ದೊರೆತ ₹ 18 ಲಕ್ಷ, ಕರ ಸಂಗ್ರಹದಿಂದ ಬಂದ ₹ 7.40 ಲಕ್ಷದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾಡಲಾಗಿದೆ’ ಎಂದು ಪಿಡಿಒ ಈರಪ್ಪ ಹವಳಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದ ಯಾವುದೇ ಜನಪರ ಯೋಜನೆಗಳು ಜಾರಿಯಾದಾಗ ಆ ಕುರಿತು ಪಂಚಾಯ್ತಿ ವ್ಯಾಪ್ತಿಯಲ್ಲಿ ಡಂಗೂರ ಸಾರುವ ಮೂಲಕ ತಿಳಿಸಲಾಗುತ್ತಿದೆ. ಎಲ್ಲರನ್ನೂ ಒಂದಡೆ ಸೇರಿಸಿ ಗ್ರಾಮ ಸಭೆ ನಡೆಸುವ ಮೂಲಕ ತಿಳಿವಳಿಕೆ ನೀಡಲಾಗುತ್ತಿದೆ. ಶಾಲಾ ಮಕ್ಕಳು, ಪೋಷಕರೊಂದಿಗೆ ಸಭೆ ನಡೆಸಲಾಗುತ್ತಿದೆ. ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿಸಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಎಲ್ಲರ‌ನ್ನೂ ಒಳಗೊಳಿಸಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಅವರು.

‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ವೀರ ಯೋಧ ಶಾಂತಪ್ಪ ಟೋಪಣ್ಣವರ ಜನಿಸಿದ ಪುಣ್ಯಭೂಮಿಯಲ್ಲಿ ನಾನು ಪಂಚಾಯ್ತಿ ಅಧ್ಯಕ್ಷನಾಗಿರುವುದು ಹೆಮ್ಮೆ ಮೂಡಿಸಿದೆ. ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಆಡಳಿತ ನಡೆಸೇವ್ರೀ. ಭ್ರಷ್ಟಾಚಾರ ಇಲ್ಲದಂಗ್‌ ಕೆಲಸಾ ಮಾಡಾಕ್‌ ಹತ್ತೇವ್ರೀ. ನಾನು ಸಾಲಿ ಕಲತಿಲ್ಲಾ. ಆದ್ರೂ ಪಿಡಿಒನಿಂದ್‌ ತಿಳಕೊಂಡ ಎಲ್ಲಾ ಸದಸ್ಯರ್‌ ಕೂಡ ಚರ್ಚೆ ಮಾಡಿ ಮುಂದುವರಿತೇವಿ. ಒಟ್ಟಾರೆ ನಮ್ಮಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕು ಅಷ್ಟೇರೀ’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮಪ್ಪ ಶಿವರಾಯಪ್ಪ ದಾಸಯ್ಯಗೋಳ ತಿಳಿಸಿದರು.

ಮುಂದಿನ ದಿನಗಳಲ್ಲಿ ಜನರಿಗೆ ಮತ್ತಷ್ಟು ಅನುಕೂಲ ಮಾಡಕೊಡಬೇಕು ಎನ್ನುವ ಯೋಜನೆಗಳಿವೆ. ಇದಕ್ಕಾಗಿ ಹೆಚ್ಚಿನ ಅನುದಾನ ಅಗತ್ಯವಿದೆ ಎನ್ನುವುದು ಸದಸ್ಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT