ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿಯಲ್ಲಿ ಸೊರಗಿದ ಬಾಪೂಜಿ ಚಿತಾಭಸ್ಮ ಸ್ಮಾರಕ

7
ನಿರ್ವಹಣೆಗೆ ನಿರ್ಲಕ್ಷ್ಯ

ಬೆಳಗಾವಿ ಜಿಲ್ಲೆ ಎಂ.ಕೆ. ಹುಬ್ಬಳ್ಳಿಯಲ್ಲಿ ಸೊರಗಿದ ಬಾಪೂಜಿ ಚಿತಾಭಸ್ಮ ಸ್ಮಾರಕ

Published:
Updated:
Deccan Herald

ಬೆಳಗಾವಿ: ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲ್ಲೂಕು ಎಂ.ಕೆ. ಹುಬ್ಬಳ್ಳಿಯಲ್ಲಿರುವ ಮಹಾತ್ಮಾ ಗಾಂಧೀಜಿ ಚಿತಾಭಸ್ಮ ಸ್ಮಾರಕ ಸ್ಥಳ ನಿರ್ವಹಣೆ ಕೊರತೆಯಿಂದ ಸೊರಗಿದೆ.

ರಾಷ್ಟ್ರಪಿತ ಬಾಪೂಜಿಗೂ ಬೆಳಗಾವಿ ಜಿಲ್ಲೆಗೂ ಅವಿನಾಭಾವ ನಂಟು ಇದೆ. ಅವರು ಇಲ್ಲಿಗೆ ಭೇಟಿ ನೀಡಿದ್ದರು; ತಂಗಿದ್ದರು. ಹೀಗಾಗಿ, ಅವರ ಹೆಜ್ಜೆ ಗುರುತುಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅವರು ಹುತಾತ್ಮರಾದ ನಂತರವೂ ಅವರ ಮೇಲಿನ ಪ್ರೀತಿ, ಅಭಿಮಾನ ಕಡಿಮೆಯಾಗಿಲ್ಲ.

1948ರಲ್ಲಿ ಗಾಂಧೀಜಿ ಅವರ ಚಿತಾಭಸ್ಮವನ್ನು ನದಿಯಲ್ಲಿ ವಿಸರ್ಜಿಸಲು ತಂದಾಗ, ಅದಕ್ಕೆ ಅವಕಾಶ ಕೊಡದ ಸ್ವಾತಂತ್ರ್ಯ ಹೋರಾಟಗಾರರು, ಚಿತಾಭಸ್ಮವಿದ್ದ ಕರಂಡಿಕೆಯನ್ನಿಟ್ಟು ಆ ಸ್ಥಳ ಸ್ಮಾರಕವಾಗಿ ನಿರ್ಮಾಣಗೊಳ್ಳಲು ಕಾರಣವಾದರು. ಅವರ ನೆನಪನ್ನು ಹಸಿರಾಗಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಯೋಧರು ಮುಂದಾಗಿದ್ದರಿಂದಾಗಿ ಅಲ್ಲೊಂದು ಸ್ಮಾರಕ ಮೈದಳೆದಿದೆ. ಗಾಂಧೀಜಿಯ ಪುತ್ಥಳಿಯೂ ಇದೆ. ಆ ಭಾಗದ ಸ್ವಾತಂತ್ರ್ಯ ಹೋರಾಟಗಾರರ ಹೆಸರುಗಳೂ ಅಲ್ಲಿವೆ.

 

ಹೋರಾಟಗಾರರ ಕಾರಣದಿಂದ

ಆರಂಭದಲ್ಲಿ ಆ ಸ್ಥಳದಲ್ಲಿ ಸಸಿಯನ್ನು ನೆಡಲಾಗಿತ್ತು. ನಂತರ, ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯವರು ಸ್ಮಾರಕವನ್ನು ನಿರ್ಮಿಸಿಕೊಟ್ಟಿದ್ದಾರೆ. ಇದರ ನಿರ್ವಹಣೆಯನ್ನು ಎಂ.ಕೆ. ಹುಬ್ಬಳ್ಳಿ ಗ್ರಾಮ ಪಂಚಾಯ್ತಿಗೆ ವಹಿಸಲಾಗಿತ್ತು. ಇದು ಇತ್ತೀಚೆಗೆ ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿದೆ. ಆದರೆ, ಸ್ಮಾರಕ ಸ್ಥಳ ಮಾತ್ರ ಅಭಿವೃದ್ಧಿ ಕಂಡಿಲ್ಲ. ಇದು ಆ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಗಾಂಧಿ ಅನುಯಾಯಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮೊದಲಾದ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಷ್ಟೇ ಸ್ಮಾರಕಕ್ಕೆ ಸ್ಥಳೀಯ ಸಂಸ್ಥೆಯವರು ಸುಣ್ಣ, ಬಣ್ಣ ಮಾಡುತ್ತಾರೆ. ಉಳಿದ ದಿನಗಳಲ್ಲಿ ಇತ್ತ ಗಮನಹರಿಸುವುದಿಲ್ಲ. ಇದರಿಂದಾಗಿ ಈ ಜಾಗ ಬೀದಿನಾಯಿಗಳ ಆವಾಸ ತಾಣವಾಗಿದೆ! ಪುತ್ಥಳಿಯ ಕನ್ನಡದ ಗಾಜುಗಳು ಒಡೆದು ಎರಡು ವರ್ಷಗಳು ಕಳೆದಿವೆ. ಆದರೆ, ಇದನ್ನು ಸರಿಪಡಿಸುವ ಕೆಲಸ ನಡೆದಿಲ್ಲ.

ರಸ್ತೆ ವಿಸ್ತರಣೆ ಸಂದರ್ಭ

ಹೆದ್ದಾರಿಗೆ ಹೊಂದಿಕೊಂಡಂತಿರುವ ಈ ಸ್ಮಾರಕದ ಬಳಿಯ ಜಾಗ, ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ಕಿರಿದಾಯಿತು. ಇದರಿಂದಾಗಿ ಸ್ಮಾರಕ ಕುಸಿಯುವ ಭೀತಿಯೂ ಇದೆ. ರಕ್ಷಣೆಯೂ ಇಲ್ಲದಂತಾಗಿದೆ. ದಿನೇ ದಿನೇ ಇದರ ಸೌಂದರ್ಯ ಹಾಳಾಗುತ್ತಿದೆ.

‘ಈ ಸ್ಥಳವನ್ನು ಪ್ರವಾಸಿ ತಾಣವಾಗಿ ರೂಪಿಸಬೇಕು. ಇಲ್ಲಿ ಇಂದಿನ ಪೀಳಿಗೆಯವರಿಗೆ ಮಹಾತ್ಮಾ ಗಾಂಧೀಜಿ ಕುರಿತು ಮಾಹಿತಿ ಒದಗಿಸಬೇಕು. ಉದ್ಯಾನ ಅಭಿವೃದ್ಧಿಪಡಿಸಿ, ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಕಾಂಪೌಂಡ್‌ ನಿರ್ಮಿಸಬೇಕು. ವಾಯುವಿಹಾರಕ್ಕೆ ಅನುಕೂಲವಾಗುವಂತಹ ವಾತಾವರಣ ನಿರ್ಮಾಣ ಮಾಡಬೇಕು’ ಎಂದು ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೆ, ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ ಇತ್ತ ಕ್ರಮ ಕೈಗೊಂಡಿಲ್ಲ ಎಂದು ಎಂ.ಕೆ. ಹುಬ್ಬಳ್ಳಿಯ ನಿವಾಸಿ ಶಿವಾನಂದ ತಿಳಿಸಿದರು.

ಪ್ರತಿಕ್ರಿಯೆಗೆ ಶಾಸಕ ಮಹಾಂತೇಶ ದೊಡ್ಡಗೌಡರ ಲಭ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !