ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಾದ್ಯಂತ ಸಂಭ್ರಮದ ಗಣೇಶೋತ್ಸವ

Last Updated 11 ಸೆಪ್ಟೆಂಬರ್ 2021, 13:06 IST
ಅಕ್ಷರ ಗಾತ್ರ

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಜನರು ಸಡಗರ–ಸಂಭ್ರಮದಿಂದ ಶುಕ್ರವಾರ ಆಚರಿಸಿದರು.

ಕೊರೊನಾ ವೈರಾಣು ಆತಂಕದ ನಡುವೆಯೂ ಅಲ್ಲಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಅದಕ್ಕೂ ಮುನ್ನ ಮೂರ್ತಿಗಳನ್ನು ಭಕ್ತರು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು. ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ‘ಗಣಪತಿ ಬಪ್ಪಾ...’ ಎಂಬ ಘೋಷಣೆಗಳು ಎಲ್ಲೆಡೆ ಕೇಳಿಬಂದವು.

ಬೆಳಿಗ್ಗೆಯಿಂದಲೂ ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಜಿಟಿ ಜಿಟಿ ಮಳೆ ಇತ್ತು. ಆದರೆ, ಅದು ಭಕ್ತರ ಉತ್ಸಾಹಕ್ಕೆ ತೊಂದರೆ ಉಂಟು ಮಾಡಲಿಲ್ಲ. ಮಾರುಕಟ್ಟೆಗಳಿಂದ ತಂದ ಗಣೇಶ ಮೂರ್ತಿಗಳನ್ನು ಪ್ರಮುಖ ವೃತ್ತ ಮತ್ತು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಿದರು. ಕೆಲವರು ವಾದ್ಯಮೇಳಗಳೊಂದಿಗೆ ಸ್ವಾಗತಿಸಿದರು. ಕೆಲವರು ಕಾರು, ದ್ವಿಚಕ್ರವಾಹನ, ಜೀಪ್, ಟ್ರ್ಯಾಕ್ಟರ್‌ ಮೊದಲಾದವುಗಳಲ್ಲಿ ವಿಗ್ರಹಗಳನ್ನು ತೆಗೆದುಕೊಂಡು ಹೋಗುತ್ತಿದ್ದುದು ಕಂಡುಬಂತು. ಮಹಾಮಂಡಳವರು ಹಾಗೂ ಕುಟುಂಬದವರು ಗಣಪನನ್ನು ಬರಮಾಡಿಕೊಂಡರು.

ಸಾರ್ವಜನಿಕ ಸ್ಥಳಗಳಲ್ಲಿ 370ಕ್ಕೂ ಹೆಚ್ಚು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಕೋವಿಡ್ ಕಾರಣದಿಂದಾಗಿ, ಕೆಲವು ಷರತ್ತುಗಳೊಂದಿಗೆ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಕಿರುವ ಮಂಟಪಗಳಲ್ಲಿನ ಮೂರ್ತಿಗಳು ಜನರನ್ನು ಆಕರ್ಷಿಸುತ್ತಿವೆ. ಮಂಟಪಗಳಲ್ಲಿ 20 ಮಂದಿಗಿಂತ ಹೆಚ್ಚಿನವರು ಸೇರುವಂತಿಲ್ಲ ಮತ್ತು ಅಂತರ ಕಾಯ್ದುಕೊಳ್ಳಬೇಕು ಎನ್ನುವ ನಿಯಮ ಬಹುತೇಕ ಕಡೆಗಳಲ್ಲಿ ಪಾಲನೆಯಾಗಲಿಲ್ಲ.

ಪ್ರಸ್ತುತ, ಸರ್ಕಾರದ ಮಾರ್ಗಸೂಚಿ ಪ್ರಕಾರ ಐದು ದಿನಗಳವರೆಗೆ ಅವಕಾಶವಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದವರಲ್ಲಿ ಕೆಲವರು ಮೊದಲ ದಿನವೇ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು. ಬಹುತೇಕರು, ಸರ್ಕಾರದಿಂದ ಮತ್ತೊಂದು ಮಾರ್ಗಸೂಚಿ ಬರಬಹುದೆಂದು ಕಾಯುತ್ತಿದ್ದಾರೆ. ಸಾರ್ವಜನಿಕ ಮಂಟಪಗಳಲ್ಲಿ ಮೂರ್ತಿಗಳಿಗೆ ಪೂಜೆ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT