ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಗಣೇಶೋತ್ಸವ: ಮಾರ್ಗಸೂಚಿ ಪ್ರಕಾರ ಅವಕಾಶ

ಸಂಪೂರ್ಣ ನಿಷೇಧ ಬೇಡ: ಮಹಾಮಂಡಳ ಮನವಿ
Last Updated 24 ಜುಲೈ 2020, 11:44 IST
ಅಕ್ಷರ ಗಾತ್ರ

ಬೆಳಗಾವಿ: ‘ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು.

ಇಲ್ಲಿ ಶುಕ್ರವಾರ ನಡೆದ ನಗರದ ಗಣೇಶೋತ್ಸವ ಮಂಡಳಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗಣೇಶೋತ್ಸವ ಮಂಡಳಿಗಳ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಐಸಿಎಂಆರ್ ಮಾರ್ಗಸೂಚಿ ಬಂದ ಬಳಿಕ ಮತ್ತೊಮ್ಮೆ ಎಲ್ಲ ಮಂಡಳಿಗಳ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ ಸಹಕರಿಸಬೇಕು’ ಎಂದು ತಿಳಿಸಿದರು.

‘ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಿರುವುದರಿಂದ ಇದನ್ನು ತಡೆಗಟ್ಟುವ ಬಗ್ಗೆ ನಾವು ಎಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಸರ್ಕಾರದ ನಿರ್ದೇಶನದ ಮೇರೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ಹೇಳಿದರು.

‘ಹಬ್ಬಗಳ ಸಾಲು ಆರಂಭಗೊಂಡಿದ್ದು, ಇದರೊಂದಿಗೆ ಕೋವಿಡ್ ನಿಯಂತ್ರಣದ ಕಡೆಯೂ ಎಲ್ಲರೂ ಗಮನಹರಿಸಬೇಕಿದೆ. ಎರಡು ಮೂರು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆ ಆಗಲಿದೆ. ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು 5ಸಾವಿರ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಆಗಲಿದೆ. ಆದ್ದರಿಂದ ಮಾರ್ಗಸೂಚಿ ಏನೇ ಇರಲಿ; ಎಲ್ಲರೂ ಸಹಕರಿಸಬೇಕು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

‘ಕೋವಿಡ್ ಇರುವುದರಿಂದ ಈ ವರ್ಷ ಸರಳ ರೀತಿಯಲ್ಲಿ ಆಚರಿಸಲು ಗಣೇಶೋತ್ಸವ ಮಂಡಳಗಳ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ. ಅಂತರ ಕಾಯ್ದುಕೊಂಡು ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಣ್ಣ ವೇದಿಕೆಗಳಲ್ಲಿ ಚಿಕ್ಕ ಗಾತ್ರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಕೆಲವು ಮಂಡಳಗಳು ಮುಂಚಿತವಾಗಿಯೇ ಬೃಹತ್ ಮೂರ್ತಿ ಆರ್ಡರ್ ನೀಡಿವೆ. ಜಿಲ್ಲಾಡಳಿತದ ಮಾರ್ಗದರ್ಶನ ಮೇರೆಗೆ ಆಚರಣೆಗೆ ಸಹಕಾರ ನೀಡಲಿದ್ದೇವೆ’ ಎಂದು ಪದಾಧಿಕಾರಿಗಳು ಹೇಳಿದರು.

‘ಗಣೇಶೋತ್ಸವ ಆಚರಿಸದಂತೆ ಏಕಪಕ್ಷೀಯವಾಗಿ ನಿರ್ಬಂಧಿಸಿದರೆ ಅದಕ್ಕೆ ಆಕ್ಷೇಪವಿದೆ’ ಎಂದು ತಿಳಿಸಿದರು.

‘ಪ್ರಮುಖ ಧಾರ್ಮಿಕ ಹಬ್ಬ ಇದಾಗಿರುವುದರಿಂದ ಸಂಪೂರ್ಣ ನಿಷೇಧ ಬೇಡ. ಸೂಕ್ತ ಮಾರ್ಗಸೂಚಿ ಜೊತೆಗೆ ಅನುಮತಿ ನೀಡಬೇಕು’ ಎಂದು ಕೋರಿದರು.

‘ಮಹಾರಾಷ್ಟ್ರ ರಾಜ್ಯದಲ್ಲೂ ಗಣೇಶೋತ್ಸವ ಆಚರಣೆಗೆ ಸರ್ಕಾರ ಕೆಲವು ಮಾರ್ಗಸೂಚಿ ನೀಡಿದೆ. ಅದೇ ಪ್ರಕಾರ ಇಲ್ಲಿಯೂ ಆದಷ್ಟು ಬೇಗನೇ ಮಾರ್ಗಸೂಚಿ ಬಿಡುಗಡೆ ಮಾಡಿದರೆ ಆಚರಣೆಗೆ ಅನುಕೂಲ ಆಗಲಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಉಪ ವಿಭಾಗಾಧಿಕಾರಿ ಅಶೋಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT