ಗುರುವಾರ , ನವೆಂಬರ್ 21, 2019
20 °C
ಆಕರ್ಷಿಸಿದ ಮೆರವಣಿಗೆ; ನಾಳೆ ಸಂಜೆವರೆಗೂ ನಡೆಯುವ ಸಾಧ್ಯತೆ

ವಿನಾಯಕನಿಗೆ ಶ್ರದ್ಧಾ–ಭಕ್ತಿಯ ‘ವಿದಾಯ’

Published:
Updated:
Prajavani

ಬೆಳಗಾವಿ: ಗಣೇಶ ಚತುರ್ಥಿ ಅಂಗವಾಗಿ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೆ ಗುರುವಾರ ಸಂಭ್ರಮದ ಚಾಲನೆ ನೀಡಲಾಯಿತು.

ಹುತಾತ್ಮ ಚೌಕದಲ್ಲಿ ಸಂಜೆ ಆರಂಭವಾದ ಮೆರವಣಿಗೆಯನ್ನು ಶಾಸಕರಾದ ಅನಿಲ ಬೆನಕೆ ಮತ್ತು ಅಭಯ ಪಾಟೀಲ ಗಣಪತಿ ಮೂರ್ತಿಗೆ ಆರತಿ ಬೆಳಗಿ ಉದ್ಘಾಟಿಸಿದರು.

ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌, ನಗರಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ಡಾ.ಕವಿತಾ ಯೋಗಪ್ಪನವರ, ತಹಶೀಲ್ದಾರ್‌ ಮಂಜುಳಾ ನಾಯಕ, ಡಿಸಿಪಿಗಳಾದ ಯಶೋದಾ, ಸೀಮಾ ಲಾಟ್ಕರ್‌, ಪಾಲಿಕೆ ಆರೋಗ್ಯಾಧಿಕಾರಿ ಡಾ.ಶಶಿಧರ ನಾಡಗೌಡ, ಮುಖಂಡರಾದ ರಂಜಿತ್ ಪಾಟೀಲ, ವಿಕಾಸ ಕಲಘಟಗಿ, ಲೋಕಮಾನ್ಯ ತಿಲಕ ಗಣೇಶೋತ್ಸವ ಮಂಡಳದ ಪದಾಧಿಕಾರಿಗಳು ಇದ್ದರು.

ಎಲ್ಲ ಬಡಾವಣೆಯವರೂ ಪ್ರತ್ಯೇಕವಾಗಿ ಮೂರ್ತಿಗಳನ್ನು ಮೆರವಣಿಗೆಯಲ್ಲಿ ತರುವುದರಿಂದ, ವಿಸರ್ಜನೆ ಕಾರ್ಯವು ಶುಕ್ರವಾರ (ಸೆ. 13) ಸಂಜೆವರೆಗೂ ಮುಂದುವರಿಯುವ ಸಾಧ್ಯತೆ ಇದೆ.

ಶಾಸಕ ಅಭಯ ಪಾಟೀಲ ಟ್ರ್ಯಾಕ್ಟರ್‌ ಚಲಾಯಿಸಿದರು. ಅಕ್ಕಪಕ್ಕದ ಸೀಟಿನಲ್ಲಿ ಶಾಸಕ ಅನಿಲ ಬೆನಕೆ ಹಾಗೂ ಪೊಲೀಸ್ ಆಯುಕ್ತ ಲೋಕೇಶ್‌ಕುಮಾರ್‌ ಇದ್ದರು.

ವಿವಿಧೆಡೆ ವಿಸರ್ಜನೆ:

ಮುಖ್ಯ ಮೆರವಣಿಗೆಯು ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ವನಿತಾ ವಿದ್ಯಾಲಯ ವೃತ್ತ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ್‌ ಗಲ್ಲಿ, ಹೇಮು ಕಾಲೊನಿ ಚೌಕ, ಪಾಟೀಲ ಗಲ್ಲಿ, ಕಪಿಲೇಶ್ವರ ರೈಲ್ವೆ ಮೇಲ್ಸೇತುವೆಯಿಂದ ಕೆಳಗಿಳಿದು ಕಪಿಲೇಶ್ವರ ದೇವಸ್ಥಾನದ ಬಳಿಗೆ ಸಾಗಿತು. ಅಲ್ಲಿನ ಎರಡು ಹೊಂಡಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಜಕ್ಕೇರಿ ಹೊಂಡ, ಕೋಟೆ ಕೆರೆ ಹೊಂಡ, ಕಣಬರಗಿ, ಅನಗೊಳ, ಹಳೆ ಬೆಳಗಾವಿ, ವಡಗಾವಿಯ ಕೆರೆಗಳಲ್ಲೂ ವಿಸರ್ಜನೆ ಮಾಡಿದರು. ಆಯಾ ಭಾಗದ ಮಂಡಳದವರು ಮೂರ್ತಿಗಳನ್ನು ತಂದು ವಿದಾಯ ಹೇಳಿದರು.

ಝಾಂಜ್‌ ಪಥಕ್, ಡೋಲ್‌–ತಾಷಾ ತಂಡಗಳ ಕಾರ್ಯಕ್ರಮಗಳು ಕಣ್ಣು ಕೋರೈಸಿದವು. ಮಕ್ಕಳು, ಯುವತಿಯರು ಹಾಗೂ ಮಹಿಳೆಯರು ಡೋಲು ಬಾರಿಸುತ್ತಾ, ಘೋಷಣೆ ಹಾಕುತ್ತಾ ಹೆಜ್ಜೆ ಹಾಕಿದರು. ಸಾರ್ವಜನಿಕರು ಮೆರವಣಿಗೆ ವೀಕ್ಷಿಸಲು ಅನುಕೂಲವಾಗುವಂತೆ ಸಂಭಾಜಿ ವೃತ್ತದಲ್ಲಿ ಗ್ಯಾಲರಿ ವ್ಯವಸ್ಥೆ ಮಾಡಲಾಗಿತ್ತು.

ತಮ್ಮ ಬಡಾವಣೆಗಳಲ್ಲಿ ಸ್ಥಾಪಿಸಿದ್ದ ಮೂರ್ತಿಗಳನ್ನು ಮಂಡಳದ ಪದಾಧಿಕಾರಿಗಳು, ಸದಸ್ಯರು ಮತ್ತು ಸ್ಥಳೀಯರು ವಿಶೇಷವಾಗಿ ಸಿದ್ಧಪಡಿಸಿದ ವಾಹನಗಳಲ್ಲಿ ತರುತ್ತಿದ್ದರು.

‘ಗಣಪತಿ ಬಪ್ಪಾ ಮೋರಯಾ’, ‘ಮುಂದಿನ ವರ್ಷ ಬೇಗ ಬಾ’,‘ಜಯದೇವ ಜಯದೇವ ಜೈ ಮಂಗಳಮೂರ್ತಿ’... ಮತ್ತಿತರ ಘೋಷಣೆಗಳು ಮೊಳಗಿದವು. ಅಲ್ಲಲ್ಲಿ ಪಟಾಕಿಗಳನ್ನು ಸುಡಲಾಯಿತು. ಕತ್ತಲಾಗುತ್ತಿದ್ದಂತೆಯೇ ಉತ್ಸವದ ರಂಗು ಹೆಚ್ಚಾಯಿತು. ಜನರು ಕುಟುಂಬ ಸಮೇತ ಬಂದು ಮೆರವಣಿಗೆ ವೀಕ್ಷಿಸಿದರು.

ಕ್ರೇನ್‌ಗಳ ಬಳಕೆ:

ಮನೆಗಳಲ್ಲಿಟ್ಟಿದ್ದ ಚಿಕ್ಕ ಗಣೇಶ ಮೂರ್ತಿಗಳನ್ನು ಕೆಲವರು ಪಲ್ಲಕ್ಕಿಗಳಲ್ಲಿ ತಂದು ವಿಸರ್ಜಿಸಿದ್ದು ವಿಶೇಷವಾಗಿತ್ತು.

ಎಲ್ಲ ಮೂರ್ತಿಗಳೂ ಬಂದು ಕೂಡುತ್ತಿದ್ದ ಸಂಭಾಜಿ ವೃತ್ತದಲ್ಲಿ ಹೆಚ್ಚಿನ ಜನರು ಸೇರಿದ್ದರು. ರಾತ್ರಿಯಾಗುತ್ತಿದ್ದಂತೆ ಜನರ ಸಂಖ್ಯೆಯೂ ದುಪ್ಪಟ್ಟಾಯಿತು. ಗೋವಾ ಹಾಗೂ ಮಹಾರಾಷ್ಟ್ರದಿಂದಲೂ ಭಕ್ತರು ಬಂದಿದ್ದರು. ಕಲಾತಂಡಗಳೊಂದಿಗೆ ಸಾಗುತ್ತಿದ್ದ ಮೆರವಣಿಗೆ ಮೈಸೂರು ದಸರಾ ನೆನಪಿಸಿತು.

ಸಣ್ಣ ಮೂರ್ತಿಗಳನ್ನು ಮಂಡಳದವರು, ಕುಟುಂಬದವರೇ ವಿಸರ್ಜಿಸಿದರು. ಎತ್ತರದ ಮೂರ್ತಿಗಳನ್ನು ಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದ ಕ್ರೇನ್‌ಗಳನ್ನು ಬಳಸಿ ವಿಸರ್ಜಿಸಲಾಯಿತು.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)