ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಸ್ತಿ ಕಾಮಗಾರಿಗಳಿಗೆ ಆದ್ಯತೆ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್ ಸೂಚನೆ
Last Updated 20 ಅಕ್ಟೋಬರ್ 2020, 11:07 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಮೂಲಸೌಕರ್ಯಗಳ ದುರಸ್ತಿ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡವರು, ಪರಿಹಾರ ಪಡೆದಿದ್ದರೂ ನಿರ್ಮಾಣ ಕಾರ್ಯ ಆರಂಭಿಸದಿದ್ದಲ್ಲಿ ನೋಟಿಸ್ ಜಾರಿಗೊಳಿಸಬೇಕು’ ಎಂದು ತಿಳಿಸಿದರು.

ನೀರಿನ ಸಂಪರ್ಕ ಕಲ್ಪಿಸಿ:‘ಮಳೆ ಮತ್ತು ಕೋವಿಡ್ ಕಾರಣದಿಂದ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಗಳು ವಿಳಂಬವಾಗಿವೆ. ಇವುಗಳ ಪ್ರಗತಿಗಾಗಿ ಸಂಬಂಧಿಸಿದ ಅಧಿಕಾರಿಗಳು ಹೆಚ್ಚಿನ ಸಮಯ ಕಾರ್ಯನಿರ್ವಹಿಸಬೇಕು. ತಕ್ಷಣ ಟೆಂಡರ್ ಕರೆದು‌ ಪ್ರಗತಿ ಸಾಧಿಸಬೇಕು. ಜಲಜೀವನ್ ಮಿಷನ್‌ನಲ್ಲಿ ಪ್ರತಿ ಮನೆಗೂ ನಳದಿಂದ ನೀರಿನ ಸಂಪರ್ಕ ಕಲ್ಪಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರಿ ಜಮೀನುಗಳನ್ನು ಬಳಸಿಕೊಂಡು ಜನರಿಗೆ ಕುಡಿಯುವ ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು. ಪ್ರತಿ ವರ್ಷವೂ ಎದುರಾಗುವ ಜಲ ಕ್ಷಾಮ ನೀಗಿಸಲು ಅಂತರ್ಜಲ ಮಟ್ಟ ವೃದ್ಧಿಗೆ ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು’ ಎಂದು ಸೂಚಿಸಿದರು.

ಕೋವಿಡ್-19 ಇಳಿಮುಖ:‘ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ ಅತಿವೃಷ್ಟಿಯಿಂದ ನಾಲ್ವರು, 13 ಜಾನುವಾರು ಮೃತಪಟ್ಟಿದ್ದು, ಪರಿಹಾರ ನೀಡಲಾಗಿದೆ. ಪೂರ್ಣ ಹಾಗೂ ಭಾಗಶಃ ಸೇರಿದಂತೆ ಒಟ್ಟು 4,619 ಮನೆಗಳಿಗೆ ಹಾನಿಯಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.

‘ಕೋವಿಡ್-19 ಪರಿಸ್ಥಿತಿ ಕ್ರಮೇಣ ನಿಯಂತ್ರಣಕ್ಕೆ ಬಂದಿದೆ. ಆಕ್ಸಿಜನ್ ಸಿಲಿಂಡರ್‌ ಬೇಡಿಕೆ ಇಳಿಮುಖವಾಗಿದೆ’ ಎಂದು ತಿಳಿಸಿದರು.

ಮೇವಿಗೆ ಕೊರತೆ ಇಲ್ಲ:‘ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸುವಾಗ ವಿಟ್ರಿಫೈಡ್ ಟೈಲ್ಸ್‌ಗಳನ್ನು ಬಳಸಲು ತೀರ್ಮಾನಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ. ತಿಳಿಸಿದರು.

‘25 ವಾರದವರೆಗೆ ಸಾಕಾಗುವಷ್ಟು ಮೇವು ದಾಸ್ತಾನಿದೆ. ಜಾನುವಾರು ಲಸಿಕೆ ಕಾರ್ಯಕ್ರಮ ಜಾರಿಯಲ್ಲಿದೆ’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕ ಡಾ.ಅಶೋಕ ಕೊಳ್ಳಾ ತಿಳಿಸಿದರು.

ಮನೆ ನಿರ್ಮಾಣಕ್ಕೆ ಮನವೊಲಿಕೆ:‘ನಗರದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ 628ರ ಪೈಕಿ 104 ಮನೆಗಳ ನಿರ್ಮಾಣ ಕಾರ್ಯ ಇದುವರೆಗೂ ಆರಂಭವಾಗಿಲ್ಲ. ನಿರ್ಮಿಸಿಕೊಳ್ಳುವಂತೆ ಸಂಬಂಧಿಸಿದವರ ಮನವೊಲಿಸಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್‌ಕುಮಾರ್,ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT