ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಖರ ಅಂಕಿ-ಅಂಶ ಸಂಗ್ರಹಿಸಲು ಸೂಚನೆ

7ನೇ ಆರ್ಥಿಕ ಗಣತಿ ಶೀಘ್ರವೇ ಆರಂಭ
Last Updated 18 ಜೂನ್ 2019, 14:22 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಸ್ವಂತ ಉಪಯೋಗಕ್ಕಲ್ಲದ ಕೃಷಿ ಮತ್ತು ಕೃಷಿಯೇತರ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವೆ ಮತ್ತಿತರ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟಿತ ಮತ್ತು ಅಸಂಘಟಿತ ವಲಯದ ಎಲ್ಲ ಉದ್ಯಮಗಳ ಗಣತಿ ಕಾರ್ಯ ಆರಂಭಿಸಲಾಗುತ್ತಿದ್ದು, ಮೂರು ತಿಂಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದರು.

7ನೇ ಆರ್ಥಿಕ ಗಣತಿ ಕುರಿತು ಮಂಗಳವಾರ ನಡೆದ ಜಿಲ್ಲಾ ಉಸ್ತುವಾರಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಗಣತಿದಾರರ ನೇಮಕಾತಿ ಪ್ರಕ್ರಿಯೆ ಮತ್ತು ತರಬೇತಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕು. ಈ ಮೂಲಕ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಗಣತಿ ಆರಂಭಿಸಬೇಕು’ ಎಂದು ಗಣತಿ ಕಾರ್ಯದ ಹೊಣೆಗಾರಿಕೆ ಹೊಂದಿರುವ ಸಾಮಾನ್ಯ ಸೇವಾ ಸಂಸ್ಥೆ (ಸಿಎಸ್‌ಸಿ) ಪ್ರತಿನಿಧಿಗಳಿಗೆ ಸೂಚನೆ ನೀಡಿದರು.

‘ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಪ್ರತಿ ಕಟ್ಟಡಕ್ಕೂ ಭೇಟಿ ನೀಡಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಮತ್ತು ಅಸಂಘಟಿತ ವಿಭಾಗಗಳ ವಿವಿಧ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಕೃಷಿ ಹಾಗೂ ಕೃಷಿಯೇತರ ಉದ್ಯಮಗಳ ಪಟ್ಟಿಯನ್ನು ತಯಾರಿಸುವುದು ಗಣತಿಯ ಮುಖ್ಯ ಉದ್ದೇಶವಾಗಿದೆ’ ಎಂದು ಮಾಹಿತಿ ನೀಡಿದರು.

‘ಉದ್ಯಮಗಳ ಗಣತಿಯ ಕ್ಷೇತ್ರ ಕಾರ್ಯವನ್ನು ಮತ್ತು ಮೊದಲನೇ ಹಂತದ ಮೇಲ್ವಿಚಾರಣೆಯನ್ನು ಇದೇ ಪ್ರಥಮ ಬಾರಿಗೆ ಸಾಮಾನ್ಯ ಸೇವಾ ಕೇಂದ್ರ, ಇ- ಆಡತಳಿ ಸೇವಾ ಲಿಮಿಟೆಡ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ವತಿಯಿಂದ ಮೊಬೈಲ್ ಆ್ಯಪ್‌ ಮೂಲಕ ಕೈಗೊಳ್ಳಲಾಗುವುದು. ಈ ಕಾರ್ಯ ಇದೇ ತಿಂಗಳಲ್ಲಿ ಆರಂಭಗೊಳ್ಳಲಿದೆ. ಸೆಪ್ಟೆಂಬರ್ ಅಂತ್ಯದವರೆಗೆ ಸಮರ್ಪಕವಾಗಿ ನಡೆಸಬೇಕು. ಉದ್ದಿಮೆದಾರರು ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಕೋರಿದರು.

‘ದೇಶದಲ್ಲಿ ಭವಿಷ್ಯದ ಆರ್ಥಿಕ ಯೋಜನೆ ಹಾಗೂ ಕಾರ್ಯಕ್ರಮಗಳ ರೂಪಿಸುವಿಕೆ ಮತ್ತು ಅನುಷ್ಠಾನಕ್ಕೆ ಇದೇ ಗಣತಿಯ ಅಂಕಿ-ಅಂಶಗಳನ್ನು, ವರದಿಯನ್ನು ಆಧಾರವಾಗಿ ಇಟ್ಟುಕೊಳ್ಳುವುದರಿಂದ ನಿಖರವಾಗಿ ಗಣತಿ ಕೈಗೊಳ್ಳಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಮತ್ತುನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಗಣತಿ ಕಾರ್ಯ ನಡೆಸಲಿರುವ ಸಿಎಸ್‌ಸಿ ಸಿಬ್ಬಂದಿಗೆ ಸಹಕಾರ ನೀಡಬೇಕು’ ಎಂದು ಸೂಚಿಸಿದರು.

‌ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಕೆ.ವಿ. ರಾಜೇಂದ್ರ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್‌.ಬಿ. ಬೂದೆಪ್ಪ, ಉಪವಿಭಾಗಾಧಿಕಾರಿ ಡಾ. ಕವಿತಾ ಯೋಗಪ್ಪನವರ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ರೇಖಾ ಶೆಟ್ಟರ್, ಸಹಾಯಕ ಸಾಂಖ್ಯಿಕ ಅಧಿಕಾರಿ ಪಿ.ಜಿ. ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT