ಶನಿವಾರ, ಡಿಸೆಂಬರ್ 14, 2019
21 °C

ತ್ರಿಕೋನ ಸ್ಪರ್ಧೆಯ ಕಣವಾದ ಗೋಕಾಕ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಬಿಜೆಪಿ ಮುಖಂಡರ ಒತ್ತಾಯಕ್ಕೆ ಮಣಿಯದ ಅಶೋಕ ಪೂಜಾರಿ, ಜೆಡಿಎಸ್‌ನಿಂದ ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್‌ ಪಡೆಯಲಿಲ್ಲ. ಇದರೊಂದಿಗೆ ಗೋಕಾಕ ಕ್ಷೇತ್ರವೀಗ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಬಿಜೆಪಿಯ ರಮೇಶ ಜಾರಕಿಹೊಳಿ, ಕಾಂಗ್ರೆಸ್‌ನ ಲಖನ್‌ ಜಾರಕಿಹೊಳಿ ಜೊತೆ ಪೂಜಾರಿ ಸೆಣಸಾಡಲಿದ್ದಾರೆ. ಇವರ ಜೊತೆ ಪಕ್ಷೇತರರು ಸೇರಿದಂತೆ ಒಟ್ಟು 11 ಜನರು ಕಣದಲ್ಲಿದ್ದಾರೆ.

ವಾಲ್ಮೀಕಿ ಸಮುದಾಯದ, ಬಿಜೆಪಿಯ ರಮೇಶ ಜಾರಕಿಹೊಳಿ ಹಾಗೂ ಕಾಂಗ್ರೆಸ್ಸಿನಿಂದ, ಸಹೋದರ ಲಖನ್‌ ಜಾರಕಿಹೊಳಿ ಕಣದಲ್ಲಿದ್ದಾರೆ. ಸಹೋದರರ ನಡುವಿನ ಕಾಳಗದಿಂದ ಕ್ಷೇತ್ರವು ರಾಜ್ಯದ ಗಮನ ಸೆಳೆದಿತ್ತು. ಈ ನಡುವೆ ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲವೆಂದು ಬಿಜೆಪಿಯಿಂದ ಹೊರಬಂದ ಲಿಂಗಾಯತ ಸಮುದಾಯದ ಅಶೋಕ ಪೂಜಾರಿ, ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ.

ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಶೋಕ ಪೂಜಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಗಮನಾರ್ಹವಾಗಿ 75 ಸಾವಿರ ಮತಗಳನ್ನು ಪಡೆದು ಗೆಲುವಿನ ಹೊಸ್ತಿಲಲ್ಲಿ ಮುಗ್ಗರಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಮೇಶ ಜಾರಕಿಹೊಳಿ 90 ಸಾವಿರ ಮತ ಪಡೆದು, ಜಯಗಳಿಸಿದ್ದರು. ಪೂಜಾರಿ ಅವರಿಗೆ ಅವರದ್ದೆ ಆದ ಬೆಂಬಲಿಗರು, ಹಿತೈಷಿಗಳು ಇದ್ದಾರೆ. 2008 ಹಾಗೂ 2013ರಲ್ಲಿ ಜೆಡಿಎಸ್‌ನಿಂದ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅಶೋಕ ಪೂಜಾರಿ ಕಳೆದ ಮೂರು ಚುನಾವಣೆಗಳಲ್ಲಿ ಪರಾಜಿತರಾಗುತ್ತಿದ್ದರೂ, ಮತಗಳಿಕೆಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ.

ಕೈಗೂಡದ ಸಂಧಾನ:

ಪೂಜಾರಿ ಅವರ ಸ್ಪರ್ಧೆಯಿಂದ ತಮ್ಮ ಪಕ್ಷದ ಅಭ್ಯರ್ಥಿಗೆ ಹಿನ್ನಡೆಯುಂಟಾಗಬಹುದು ಎನ್ನುವ ಮುಂಜಾಗ್ರತೆಯಿಂದ ಬಿಜೆಪಿಯ ಮುಖಂಡರಾದ ಮಹಾಂತೇಶ ಕವಟಗಿಮಠ ಹಾಗೂ ಉಮೇಶ ಕತ್ತಿ ಅವರು ಪೂಜಾರಿ ಅವರ ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೆ, ಪೂಜಾರಿ ಅವರ ಬೆಂಬಲಿಗರು ಇದಕ್ಕೆ ಆಸ್ಪದ ನೀಡದ್ದರಿಂದ ಖಾಲಿ ಕೈಯಿಂದ ವಾಪಸ್ಸಾದರು. ಬಿಜೆಪಿ– ಕಾಂಗ್ರೆಸ್ ನಡುವೆ ನೇರ ಸ್ಪರ್ಧೆಯಾಗಿದ್ದ ಚುನಾವಣೆಯು ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿದೆ.

ಬೆಂಬಲಿಗರ ಒತ್ತಾಯ:

ರಮೇಶ ಜಾರಕಿಹೊಳಿ ಬಿಜೆಪಿಗೆ ಸೇರ್ಪಡೆಯಾದ ನಂತರ ಆ ಪಕ್ಷದಲ್ಲಿಯೇ ಇರಬೇಕೋ, ಬೇಡವೋ ಎನ್ನುವುದರ ಬಗ್ಗೆ ಪೂಜಾರಿ ಅವರಿಗೆ ಗೊಂದಲವಿತ್ತು. ಹಲವು ಬಾರಿ ತಮ್ಮ ಹಿತೈಷಿ ಹಾಗೂ ಬೆಂಬಲಿಗರ ಜೊತೆ ಸಭೆ ನಡೆಸಿ, ಚರ್ಚಿಸಿದರು. ಪಕ್ಷದಿಂದ ಹೊರಬಂದು, ಜಾರಕಿಹೊಳಿ ವಿರುದ್ಧ ಸ್ಪರ್ಧಿಸುವಂತೆ ಬಹಳಷ್ಟು ಜನರು ಸಲಹೆ ನೀಡಿದ್ದರು.

ಇದಕ್ಕೆ ಪೂರಕವಾಗಿ ಕೆಲವು ಕಾಂಗ್ರೆಸ್ಸಿಗರು ಟಿಕೆಟ್‌ ನೀಡುವ ಬಗ್ಗೆಯೂ ಪ್ರಸ್ತಾಪಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ ಟಿಕೆಟ್‌ ಲಖನ್‌ ಅವರ ಪಾಲಾಯಿತು. ಆ ನಂತರ ಜೆಡಿಎಸ್‌ ವರಿಷ್ಠ ಎಚ್‌.ಡಿ. ಕುಮಾರಸ್ವಾಮಿ ಪಕ್ಷದ ಟಿಕೆಟ್‌ ನೀಡುವುದಾಗಿ ಪ್ರಕಟಿಸಿದರು. ಪೂಜಾರಿ ಜೆಡಿಎಸ್‌ನಿಂದ ಕಣಕ್ಕಿಳಿದರು.

‘20 ವರ್ಷಗಳಿಂದ ಚುನಾವಣಾ ರಾಜಕಾರಣದಲ್ಲಿ ಇದ್ದೀರಿ. ಇದರಿಂದ ದೂರ ಹೋಗಬೇಡಿ. ಗೋಕಾಕದಲ್ಲಿರುವ ರಾಜಕೀಯ ಸರ್ವಾಧಿಕಾರ ಕೊನೆಗಾಣಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ನನ್ನ ಹಿತೈಷಿಗಳು, ಬೆಂಬಲಿಗರು ಹೇಳಿದ್ದರು. ಅವರ ಮಾತಿಗೆ ಮನ್ನಣೆ ನೀಡಿ, ಸ್ಪರ್ಧೆಗೆ ಇಳಿದಿದ್ದೇನೆ’ ಎಂದು ಅಶೋಕ ಪೂಜಾರಿ ಹೇಳಿದರು.

ಪೂಜಾರಿಯ ಪುತ್ರನೂ ಸ್ಪರ್ಧೆ:

ಅಶೋಕ ಪೂಜಾರಿ ಅವರ ಪುತ್ರ ಸತೀಶ ಪೂಜಾರಿ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿದೆ. ಎಲ್‌.ಎಲ್‌.ಬಿ ಈಗಷ್ಟೇ ಮುಗಿಸಿರುವ ಅವರು, ಚುನಾವಣಾ ಕಣಕ್ಕೆ ಧುಮಕ್ಕಿದ್ದಾರೆ. ಕಳೆದ ವರ್ಷದ ಚುನಾವಣೆಯಲ್ಲೂ ನಾಮಪತ್ರ ಸಲ್ಲಿಸಿದ್ದರು. ನಂತರ ಕೊನೆಯ ಕ್ಷಣದಲ್ಲಿ ವಾಪಸ್‌ ಪಡೆದಿದ್ದರು.

‘ಚುನಾವಣೆ ಪ್ರಕ್ರಿಯೆ ಅರಿತುಕೊಳ್ಳಲು ನಾಮಪತ್ರ ಸಲ್ಲಿಸಿದ್ದೇನೆ. ಹೊರತು, ಗಂಭೀರವಾಗಿ ಸ್ಪರ್ಧಿಸಲು ಅಲ್ಲ. ತಂದೆಯವರ ಪರವಾಗಿಯೇ ಮತ ಕೇಳುತ್ತೇನೆ. ಈ ಸಲ ಕ್ಷೇತ್ರದಲ್ಲಿ ಒಳ್ಳೆಯ ವಾತಾವರಣ ಇದೆ. ತಂದೆಯವರ ಪರವಾಗಿ ಒಂದಷ್ಟು ಮತದಾರರು ಕಾಯಂ ಆಗಿ ಇದ್ದಾರೆ. ಯಾವುದೇ ಪಕ್ಷದಿಂದ ಕಣಕ್ಕಿಳಿದರೂ ತಂದೆಯವರ ಪರವಾಗಿಯೇ ಅವರು ಮತ ಚಲಾಯಿಸುತ್ತಾರೆ’ ಎಂದು ಸತೀಶ ಪೂಜಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು