ಬುಧವಾರ, ಫೆಬ್ರವರಿ 26, 2020
19 °C
11 ವರ್ಷಗಳ ನಂತರ ಮತ್ತೆ ಅಣ್ಣ– ತಮ್ಮಂದಿರ ನಡುವೆ ಸ್ಪರ್ಧೆ l ಕುತೂಹಲ ಹೆಚ್ಚಿಸಿದ ಕ್ಷೇತ್ರ

ಗೋಕಾಕ: ಸಹೋದರರ ಸವಾಲ್‌– ರಮೇಶ–ಲಖನ್ ಜಿದ್ದಾಜಿದ್ದಿ ಸ್ಪರ್ಧೆ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಗ್ರೀನ್‌ ಸಿಗ್ನಲ್‌ ಪಡೆದು ಲಖನ್‌ ಜಾರಕಿಹೊಳಿ ಸೋಮವಾರ ಗೋಕಾಕ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿಯಿಂದ ಸ್ಪರ್ಧಿಸಿರುವ, ಅನರ್ಹ ಶಾಸಕ, ಅವರ ಹಿರಿಯಣ್ಣ ರಮೇಶ ಜಾರಕಿಹೊಳಿ ವಿರುದ್ಧ ತೊಡೆತಟ್ಟಿದ್ದಾರೆ. ಸಹೋದರರ ಸವಾಲ್‌ನಿಂದಾಗಿ ಗೋಕಾಕ ಕ್ಷೇತ್ರವೀಗ ರಾಜ್ಯದ ಗಮನ ಸೆಳೆದಿದೆ.

11 ವರ್ಷಗಳ ಹಿಂದೆ (2008) ಜಾರಕಿಹೊಳಿ ಸಹೋದರರು ಚುನಾವಣೆಗೆ ಸ್ಪರ್ಧಿಸಿದ್ದರು. ಆಗ, ರಮೇಶ ಜಾರಕಿಹೊಳಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರೆ ಅವರ ಮತ್ತೊಬ್ಬ ಸಹೋದರ ಭೀಮಶಿ ಜಾರಕಿಹೊಳಿ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ತೀವ್ರ ಪೈಪೋಟಿ ನೀಡಿದ್ದ ರಮೇಶ ಜಯದ ನಗೆ ಬೀರಿದ್ದರು.

ಇದಕ್ಕೂ ಮುಂಚೆ ರಮೇಶ, ಎರಡು ಬಾರಿ (1999, 2004) ಶಾಸಕರಾಗಿದ್ದರು. ಆಗ ಕ್ಷೇತ್ರವು ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಮೀಸಲಾತಿಯಿಂದಾಗಿ ಎಸ್‌.ಟಿ ಸಮುದಾಯದವರು ಶಾಸಕರಾಗುತ್ತಿದ್ದರು. 2008‌ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದ ನಂತರ ಸಾಮಾನ್ಯ ಕ್ಷೇತ್ರವಾಗಿ ಮಾರ್ಪಟ್ಟಿತ್ತು.
ಇದರಿಂದಾಗಿ, ತಮ್ಮ ಸಮುದಾಯದವರು ಏಕೆ ಶಾಸಕರಾಗಬಾರದೆಂದು ಲಿಂಗಾಯತ ಸಮುದಾಯದಲ್ಲಿ ಚರ್ಚೆ ನಡೆಯಿತು. ಇದರ ಫಲವಾಗಿ ಪಂಚಮಸಾಲಿ ಲಿಂಗಾಯತ ಸಮುದಾಯದ ಮುಖಂಡ, ಜೆಡಿಎಸ್‌ನ ಅಶೋಕ ಪೂಜಾರಿ ಕಣಕ್ಕಿಳಿದಿದ್ದರು.

ಸಹೋದರರಲ್ಲಿ ಭಿನ್ನಾಭಿಪ್ರಾಯ:

ಇದೇ ಸಮಯದಲ್ಲಿ ರಮೇಶ ಹಾಗೂ ಕಿರಿಯ ಸಹೋದರ ಭೀಮಶಿ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡಿದ್ದವು. ಹಿರೇನಂದಿಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ಸಂಬಂಧ ಇಬ್ಬರ ನಡುವೆ ಮನಸ್ತಾಪವಾಗಿತ್ತು. ಇದರಿಂದ ಸಿಟ್ಟಿಗೆದ್ದ ಭೀಮಶಿ, ಬಿಜೆಪಿಯಿಂದ ಕಣಕ್ಕಿಳಿದರು. ಇವರಿಗೆ ಸತೀಶ ಬೆಂಬಲ ಕೊಟ್ಟಿದ್ದರು. ಇದರೊಂದಿಗೆ ರಮೇಶ– ಪೂಜಾರಿ ನಡುವಿನ ನೇರ ಸ್ಪರ್ಧೆ, ತ್ರಿಕೋನ ಸ್ಪರ್ಧೆಯಾಗಿ ಮಾರ್ಪಟ್ಟಿತ್ತು.

ಪೂಜಾರಿ ಮತಗಳಿಕೆ ಹೆಚ್ಚಳ: ಅಶೋಕ ಪೂಜಾರಿ, ಪ್ರತಿ ಚುನಾವಣೆಯಲ್ಲಿ ಮತ ಗಳಿಕೆ ಪ್ರಮಾಣ ಹೆಚ್ಚಿಸಿಕೊಳ್ಳುತ್ತಿದ್ದಾರೆ. 2008ರಲ್ಲಿ 37,229, 2013ರಲ್ಲಿ 51,170 ಮತಗಳನ್ನು ಪಡೆದಿದ್ದರು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 75,969 ಮತಗಳನ್ನು ಪಡೆದು, ರಮೇಶ ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ್ದರು.

ಪೂಜಾರಿ ಈಗ ಜೆಡಿಎಸ್‌ ಅಭ್ಯರ್ಥಿಯಾಗಿದ್ದು, ಸಹೋದರರ ಸ್ಪರ್ಧೆಯು ಈಗ ಜಿಲ್ಲೆಯಲ್ಲಿ ಕುತೂಹಲ ಕೆರಳಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು