ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ: ಶರಣ ಸಂಸ್ಕೃತಿ ಉತ್ಸವ ಫೆ.1ರಿಂದ

ಪೂರ್ವಭಾವಿ ಸಭೆಯಲ್ಲಿ ಮುರುಘರಾಜೇಂದ್ರ ಸ್ವಾಮೀಜಿ
Last Updated 14 ಡಿಸೆಂಬರ್ 2020, 14:20 IST
ಅಕ್ಷರ ಗಾತ್ರ

ಗೋಕಾಕ: ‘ಪ್ರತಿ ವರ್ಷ ಶೂನ್ಯ ಸಂಪಾದನಾ ಮಠದಿಂದ ಆಯೋಜಿಸಿರುವ ಶರಣ ಸಂಸ್ಕೃತಿ ಉತ್ಸವವನ್ನು ಫೆ.1ರಿಂದ 4 ದಿನಗಳವರೆಗೆ ಶ್ರೀಮಠದ ಚನ್ನಬಸವೇಶ್ವರ ವಿದ್ಯಾಪೀಠದ ಆವರಣದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ನಡೆಸಲಾಗುವುದು’ ಎಂದು ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಮಠದ ಅವರಣದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶ್ರೀಮಠದ ಕಾಯಕಯೋಗಿ ಲಿಂ. ಬಸವ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಅಂಗವಾಗಿ 15 ವರ್ಷಗಳಿಂದ ಮಠದಿಂದ ಉತ್ಸವ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ 16ನೇ ಉತ್ಸವಕ್ಕೆ ಸಿದ್ಧತೆ ನಡೆದಿದೆ’ ಎಂದರು.

‘ಫೆ.1ರಂದು ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ್ ಗುರೂಜಿ ಅವರಿಗೆ ‘'ಕಾಯಕಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಫೆ.2ರಂದು ನಡೆಯುವ ಯುವ ಗೋಷ್ಠಿಯಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣವರ ಮಾರ್ಗದರ್ಶನ ಮಾಡುವರು. ಫೆ. 3ರಂದು ಮಹಿಳಾ ಗೋಷ್ಠಿ ನಡೆಯಲಿದೆ. ಐಪಿಎಸ್ ಅಧಿಕಾರಿ ಡಿ.ರೂಪಾ ಭಾಗವಹಿಸಲಿದ್ದಾರೆ. ಉತ್ಸವವು ತಾಲ್ಲೂಕಿನ ಹಬ್ಬವಾಗಿ ಪರಿವರ್ತನೆಯಾಗುತ್ತಿದೆ. ಯುವ ಜನರಿಗೆ ಅನುಕೂಲವಾಗುವ ಸದುದ್ದೇಶ ಹಾಗೂ ತಾಲೂಕಿನಲ್ಲೆಡೆ ಆಧ್ಯಾತ್ಮಿಕ ಚಿಂತನೆ ಹಬ್ಬಲಿ ಎಂಬ ಆಶಯದಿಂದ ಸಂಘಟಿಸಲಾಗುತ್ತಿದೆ’ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಪ್ರತಿ ವರ್ಷ ಅತ್ಯಂತ ಅರ್ಥಪೂರ್ಣವಾಗಿ ನಡೆಯುವ ಉತ್ಸವ ತಾಲ್ಲೂಕಿನ ಆಧ್ಯಾತ್ಮಿಕ ವೇದಿಕೆಯಾಗಿ ಹೊರ ಹೊಮ್ಮಿದೆ. ಕೊರೊನಾ ಆತಂಕ ನಮ್ಮೆಲ್ಲರನ್ನೂ ಆವರಿಸಿರುವ ಕಾರಣ ಈ ಬಾರಿ ಸರಳವಾಗಿ ಆಚರಿಸೋಣ’ ಎಂದರು.

16ನೇ ಶರಣ ಸಂಸ್ಕೃತಿ ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹಾಗೂ ಕಾರ್ಯದರ್ಶಿಯಾಗಿ ವಿವೇಕ ಜತ್ತಿ ಅವರನ್ನು ಪುನರಾಯ್ಕೆ ಮಾಡಲಾಯಿತು.

ಬಟಕುರ್ಕಿಯ ಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಮಲ್ಲಿಕಾರ್ಜುನ ಚುನಮರಿ, ಡಾ.ಸಿ.ಕೆ. ನಾವಲಗಿ, ವಕೀಲ ಶಶಿಧರ ದೇಮಶೆಟ್ಟಿ, ನೋಟರಿ ಶಂಕರ ಗೊರೋಶಿ, ಚಂದ್ರಶೇಖರ ಕೊಣ್ಣೂರ, ಅಡಿವೆಪ್ಪ ಕಿತ್ತೂರ, ಬಸವರಾಜ ಖಾನಪ್ಪನವರ, ಮಲ್ಲಿಕಾರ್ಜುನ ಈಟಿ, ಪ್ರಕಾಶ ಭಾಗೋಜಿ, ಶಂಕರ ಬೆಳಕೂಡ, ಮಲ್ಲಿಕಾರ್ಜುನ ಬೀರನಗಡ್ಡಿ ಮಾತನಾಡಿದರು.

ಶಿಕ್ಷಕ ರಮೇಶ ಮಿರ್ಜಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT