ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಉತ್ಸಾಹ ಇಮ್ಮಡಿಗೊಳಿಸಿದ ಭರ್ಜರಿ ಮಳೆ

ಶೇ 82ರಷ್ಟು ಬಿತ್ತನೆ ಪೂರ್ಣ;
Last Updated 3 ಆಗಸ್ಟ್ 2019, 13:52 IST
ಅಕ್ಷರ ಗಾತ್ರ

ಬೆಳಗಾವಿ: ಜೂನ್‌ ತಿಂಗಳ ಆರಂಭದಲ್ಲಿ ಮುಂಗಾರು ಮಳೆ ಮಂಕಾಗಿದ್ದರಿಂದ ಆವರಿಸಿದ್ದ ಆತಂಕ ದೂರವಾಗುವಂತೆ ಜುಲೈ ತಿಂಗಳಲ್ಲಿ ಮಳೆ ಸುರಿದಿದೆ. ಕೃಷಿ ಚಟುವಟಿಕೆಗಳಿಗೆ ಚೇತೋಹಾರಿ ಶಕ್ತಿ ತುಂಬಿದೆ. ಇದರ ಫಲವಾಗಿ ಜಿಲ್ಲೆಯಲ್ಲಿ ಶೇ 82ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ರೈತಾಪಿ ಜನರಲ್ಲಿ ಹರ್ಷ ಮೂಡಿಸಿದೆ. ಜಿಲ್ಲೆಯಲ್ಲಿ ಒಟ್ಟು 7,18,351 ಹೆಕ್ಟೇರ್‌ ಪ್ರದೇಶದಲ್ಲಿ 5,91,829 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಜೂನ್‌ ಆರಂಭದಲ್ಲಿ ರೈತರು ಭೂಮಿ ಹದ ಮಾಡಿಕೊಂಡು ಕಾಯುತ್ತಿದ್ದರು. ಆಗ ಮಳೆ ನಿಧಾನವಾಗಿ ಸುರಿಯಿತು. ಜೂನ್‌ ತಿಂಗಳ ಕೊನೆಯ ವಾರದಿಂದ ಮಳೆ ಜೋರು ಹಿಡಿಯಿತು. ಜುಲೈನಲ್ಲಿ ಹಿಂದಿನ ಕೊರತೆಯನ್ನು ಮೀರಿಸುವಂತೆ ಸುರಿಯಿತು. ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿದಿದೆ. ಜೂನ್‌ 1ರಿಂದ ಜುಲೈ 31ರವರೆಗೆ 436.8 ಮಿ.ಮೀ ಮಳೆಯಾಗಿದೆ. ಇದು 331 ಮಿ.ಮೀ ವಾಡಿಕೆ ಮಳೆಗಿಂತ ಶೇ 32ರಷ್ಟು ಹೆಚ್ಚು ಮಳೆಯಾಗಿದೆ.

ಉತ್ತಮ ಮಳೆಯ ಲಾಭ ಪಡೆದ ರೈತರು, ತಮ್ಮ ಹೊಲಗಳಲ್ಲಿ ಭತ್ತ, ಜೋಳ, ರಾಗಿ, ಗೋವಿನಜೋಳ, ಹೆಸರು, ಕಡಲೆ, ಬಿತ್ತನೆ ಮಾಡಿದ್ದಾರೆ.

ಹುಕ್ಕೇರಿ, ಖಾನಾಪುರದಲ್ಲಿ ಹೆಚ್ಚು:ಹುಕ್ಕೇರಿ ತಾಲ್ಲೂಕಿನಲ್ಲಿ ಶೇ 99ರಷ್ಟು ಹಾಗೂ ಖಾನಾಪುರ ತಾಲ್ಲೂಕಿನಲ್ಲಿ ಶೇ 96ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಖಾನಾಪುರದಲ್ಲಿ ಉತ್ತಮ ಮಳೆಯಾಗಿದ್ದರಿಂದ ಗದ್ದೆಗಳಲ್ಲಿ ನೀರು ತುಂಬಿಕೊಂಡಿದ್ದು, ಭತ್ತದ ನಾಟಿಗೆ ಹೇಳಿ ಮಾಡಿಸಿದಂತಹ ವಾತಾವರಣ ಸೃಷ್ಟಿಯಾಗಿತ್ತು. ಇದರ ಫಲವಾಗಿ 30,000ಹೆಕ್ಟೇರ್‌ ಪ್ರದೇಶದ ಪೈಕಿ 27,449 ಹೆಕ್ಟೇರ್‌ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ.

ಬೈಲಹೊಂಗಲದಲ್ಲಿ ಕಡಿಮೆ:ಬೈಲಹೊಂಗಲ ಹಾಗೂ ಸುತ್ತಮುತ್ತಲು ಸೋಯಾಬಿನ್‌ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ. ಆದರೆ, ಈ ಸಲ ಮುಂಗಾರು ವಿಳಂಬವಾಗಿದ್ದರಿಂದ, ಅಲ್ಲಿ ಸೋಯಾಬಿನ್‌ ಬೆಳೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅಲ್ಲಿ 79,255 ಹೆಕ್ಟೇರ್‌ ಪ್ರದೇಶದ ಪೈಕಿ 53,460 ಹೆಕ್ಟೇರ್‌ (ಶೇ 67) ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಈಗ ಗೋವಿನಜೋಳ ಬಿತ್ತನೆ ಮಾಡಲು ಇನ್ನೂ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಬಿತ್ತನೆಯಾಗುವ ಸಾಧ್ಯತೆ ಇದೆ.

ಗೋವಿನ ಜೋಳ ಹೆಚ್ಚು:ಜಿಲ್ಲೆಯಲ್ಲಿ ಅತಿ ಹೆಚ್ಚು ಗೋವಿನಜೋಳ ಬಿತ್ತನೆ ಮಾಡಲಾಗಿದೆ. 1,30,604 ಹೆಕ್ಟೇರ್‌ ಪ್ರದೇಶದ ಪೈಕಿ 1,08,279 ಹೆಕ್ಟೇರ್‌ (ಶೇ 82.9) ಪ್ರದೇಶದಲ್ಲಿ ಬೆಳೆಯಲಾಗಿದೆ. ನಂತರದ ಸ್ಥಾನವು ಭತ್ತಕ್ಕೆ ಲಭಿಸಿದೆ. 62,533 ಹೆಕ್ಟೇರ್‌ ಪ್ರದೇಶದ ಪೈಕಿ 54,639 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ.

ಕಬ್ಬು:67,298 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ನಾಟಿ ಮಾಡಲಾಗಿದೆ. 1,60,380 ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಕುಳೆ ಇದೆ. 2,54,403 ಹೆಕ್ಟೇರ್‌ ಪ್ರದೇಶದ ಪೈಕಿ 2,27,678 ಹೆಕ್ಟೇರ್‌ (ಶೇ 87.65) ಪ್ರದೇಶದಲ್ಲಿ ಕಬ್ಬು ಇದೆ.

ಶೇ 100ರಷ್ಟು ಬಿತ್ತನೆ– ವಿಶ್ವಾಸ:‘ಈಗ ತುಂಬಾ ಚೆನ್ನಾಗಿ ಮಳೆ ಸುರಿಯುತ್ತಿದ್ದು, ರೈತರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ. ಈಗಾಗಲೇ ಶೇ 82ರಷ್ಟು ಬಿತ್ತನೆಯಾಗಿದ್ದು, ಇನ್ನುಳಿದ ಪ್ರದೇಶದಲ್ಲೂ ಬಿತ್ತನೆಯಾಗಿ ಶೇ 100ರ ಗುರಿ ಸಾಧಿಸಲಿದ್ದೇವೆ’ ಎಂದು ಕೃಷಿ ಜಂಟಿ ನಿರ್ದೇಶಕ ಮೊಕಾಶಿ ಜಿಲಾನಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT