ಖಾಸಗಿ ಶಾಲೆಗೆ ಸರ್ಕಾರಿ ಶಾಲೆಯ ಸೆಡ್ಡು

7
ಆಕರ್ಷಕ ಕಟ್ಟಡ: ಕ್ರೀಡಾ ಸಾಧನೆಯಲ್ಲೂ ವಿದ್ಯಾರ್ಥಿಗಳ ಮೇಲುಗೈ

ಖಾಸಗಿ ಶಾಲೆಗೆ ಸರ್ಕಾರಿ ಶಾಲೆಯ ಸೆಡ್ಡು

Published:
Updated:
Deccan Herald

ಹಿರೇಬಾಗೇವಾಡಿ: ಖಾಸಗಿ ಪ್ರಾಥಮಿಕ ಶಾಲೆಗಳ ಪೈಪೋಟಿಯಲ್ಲೂ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬಂದಿರುವ ಶಾಲೆ ಎಂಬ ಕೀರ್ತಿಗೆ ಇಲ್ಲಿಯ ಗಾಂಧಿನಗರ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಪಾತ್ರವಾಗಿದೆ.

2003ರಲ್ಲಿ ಕೇವಲ ಒಬ್ಬರೇ ಶಿಕ್ಷಕರ ನೇಮಕಾತಿಯೊಂದಿಗೆ ಆರಂಭವಾದ ಶಾಲೆಯಲ್ಲಿ ಈಗ 9 ಶಿಕ್ಷಕರು ಇದ್ದಾರೆ. 1ನೇ ತರಗತಿಯಿಂದ 7ನೇ ತರಗತಿ ವರೆಗೆ ಇಲ್ಲಿದೆ. ಪ್ರಸ್ತುತ 160 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಬಿಸಿಯೂಟ ವ್ಯವಸ್ಥೆ ವಿಶೇಷವಾಗಿದೆ.

ವಾರಕ್ಕೊಮ್ಮೆ ವಿಶೇಷ ಸಿಹಿ ತಿಂಡಿಯೊಂದಿಗೆ ಮಕ್ಕಳಿಗೆ ಶುಚಿಯಾದ ರುಚಿಯಾದ ಊಟ ಬಡಿಸಲಾಗುತ್ತದೆ. ಜಿಲ್ಲಾ ಪಂಚಾಯ್ತಿಯ ಹಿಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌತಮ ಬಗಾದಿಯವರೂ ಕೂಡ ಭೇಟಿ ನೀಡಿ  ಇಲ್ಲಿನ ಬಿಸಿಯೂಟ ಸವಿದಿದ್ದರು. ಊಟದ ಶುಚಿತ್ವ ಹಾಗೂ ರುಚಿಯನ್ನು ಕೊಂಡಾಡಿದ್ದರು.

ಇಲ್ಲಿಯ ಮಕ್ಕಳು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಮೊರಾರ್ಜಿ, ನವೋದಯ ಶಾಲೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿ ವರ್ಷ ಈ ಶಾಲೆಯ ಒಂದಿಬ್ಬರು ಮಕ್ಕಳು ಆಯ್ಕೆಯಾಗುತ್ತಿದ್ದಾರೆ. ಸಮುದಾಯದ ಸಹಕಾರದಿಂದ ಶಾಲೆಗೆ ಅಂದವಾಗಿ ಬಣ್ಣ ಬಳಿಯಲಾಗಿದ್ದು, ನೋಡಲು ಆಕರ್ಷಕವಾಗಿದೆ.

ಸಾಧನೆ: ಶಾಲೆಯ ಮಕ್ಕಳು ಪಠ್ಯಕ್ರಮದ ಜತೆಗೆ ಪಠ್ಯೇತರ ಕಾರ್ಯಕ್ರಮಗಳಲ್ಲಿಯೂ ಉತ್ತಮ ಸಾಧನೆ ತೋರಿದ್ದಾರೆ. ಪ್ರತಿಭಾ ಕಾರಂಜಿಯ ಕೋಲಾಟದಲ್ಲಿ ರಾಜ್ಯ ಮಟ್ಟದಲ್ಲಿ ಮೂರು ಬಾರಿ ಪ್ರದರ್ಶನ ಮಾಡಿದ್ದಾರೆ. ಪ್ರಾಥಮಿಕ ಶಾಲಾ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಾಲೆಯೆಂದು 2013ರಲ್ಲಿ ಅಂದಿನ ಶಾಸಕ ಸಂಜಯ ಪಾಟೀಲ ಪ್ರಶಸ್ತಿ ನೀಡಿದ್ದಾರೆ.

’ಆವರಣ ಗೋಡೆ ನಿರ್ಮಿಸಬೇಕು’

ಶಾಲೆಯು ಒಟ್ಟು 5,850 ಚದರ ಅಡಿಗಳ ಜಾಗವನ್ನು ಹೊಂದಿದೆ. ಇದರಲ್ಲಿ ಆರು ಕೊಠಡಿಗಳು ಮಾತ್ರ ಇವೆ. ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಪ್ರತ್ಯೇಕವಾಗಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನೂ ಮೂರು ಕೊಠಡಿಗಳು ಬೇಕು. ಆಟದ ಮೈದಾನ ಅಷ್ಟಕ್ಕಷ್ಟೇ ಇದೆ. ಹೆಚ್ಚುವರಿ ಕೊಠಡಿಗಳನ್ನು ನಿರ್ಮಾಣಕ್ಕಾಗಿ ಜಾಗವಿಲ್ಲ. ಸದ್ಯ ಇರುವ ಕೊಠಡಿಗಳ ಮೇಲೆಯೇ ಹೊಸ ಕೊಠಡಿಗಳನ್ನು ನಿರ್ಮಿಸಬೇಕಿದೆ. ಸರ್ಕಾರ ಇಲ್ಲಿ ಅವಶ್ಯವಿರುವ ಕೊಠಡಿಗಳ ನಿರ್ಮಾಣ ಮಾಡಬೇಕಿದೆ. ಜ್ಞಾನಾರ್ಜನೆಗೆ ಅನುಕೂಲವಾಗುವಂತಹ ಪರಿಕರಗಳನ್ನು ಪೂರೈಕೆ ಮಾಡಬೇಕು. ಮೈದಾನವನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ. ಇಡೀ ಶಾಲಾ ಆವರಣಕ್ಕೆ ಗೋಡೆ ನಿರ್ಮಿಸಬೇಕಾಗಿದೆ.
-ಸುಭಾಷ ಪಾಟೀಲ, ಮುಖ್ಯ ಶಿಕ್ಷಕ

ಶಾಲೆಗೆ ಜಾಗದ ಕೊರತೆ ಇದೆ. ಇದ್ದ ಕೊಠಡಿಗಳ ಮೇಲೆಯೇ ಮೂರು ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕಾಗಿ ಸರ್ಕಾರ ಅನುಮತಿ ನೀಡಬೇಕು.
ಬಾಬು ಎಮ್ಮಿನಕಟ್ಟಿ. ಎಸ್‌ಡಿಎಂಸಿ ಅಧ್ಯಕ್ಷ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !