ಮಂಗಳವಾರ, ಆಗಸ್ಟ್ 20, 2019
21 °C

‘ಶಾಶ್ವತ ಪರಿಹಾರಕ್ಕೆ ಸರ್ಕಾರ ಕ್ರಮ’

Published:
Updated:
Prajavani

ಅಥಣಿ: ‘ಪ್ರವಾಹಪೀಡಿತ ಪ್ರದೇಶಗಳನ್ನು ಸಮೀಕ್ಷೆ ಮಾಡುವ ಮೂಲಕ ಸಂತ್ರಸ್ತರನ್ನು ಪುನರ್ವಸತಿ ಕೇಂದ್ರಗಳಿಗೆ ಸ್ಥಳಾಂತರಿಸಲು ಸರ್ಕಾರ ಸಿದ್ಧವಿದೆ’ ಎಂದು ವಿಧಾನಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದರು.

‘ಶಾಶ್ವತ ಪರಿಹಾರ ಒದಗಿಸಲು ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ. ಹಕ್ಕುಪತ್ರ ಕೊಡುವುದಕ್ಕೂ ಕ್ರಮ ಕೈಗೊಳ್ಳಲಾಗುವುದು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಅಥಣಿ ಕ್ಷೇತ್ರ ಒಂದೆಡೆ ಬರಗಾಲ, ಇನ್ನೊಂದೆಡೆ ಪ್ರವಾಹ ಎದುರಿಸುತ್ತಿದೆ. ತಾಲ್ಲೂಕಿನ 24 ಗ್ರಾಮಗಳು ಸಂಪೂರ್ಣವಾಗಿ ಜಲಾವೃತಗೊಂಡು ಸಾವಿರಾರು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುವುದು ಎಲ್ಲರ ಜವಾಬ್ದರಿಯಾಗಿದೆ’ ಎಂದರು.

‘‌ಭಾಗಶಃ ಮುಳುಗಡೆಯಾದ ಮನೆಗಳಿಗೆ ₹ 1 ಲಕ್ಷ, ಸಂಪೂರ್ಣ ಮುಳುಗಿದ್ದರೆ ₹ 5 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ. ಪ್ರಾಥಮಿಕ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ₹ 3,800 ನೀಡಲಾಗುತ್ತಿದೆ’ ಎಂದು ಹೇಳಿದರು.

‘ಈ ಭೀಕರ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದಕ್ಕಿಂತ, ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ತರುವುದು ನಮ್ಮ ತುರ್ತು ಆದ್ಯತೆಯಾಗಿದೆ’ ಎಂದು ಪ್ರತಿಕ್ರಿಯಿಸಿದರು.

‘ದರೂರ ಹಾಗೂ ಮಾಂಜರಿ ಸೇತುವೆಗಳನ್ನು ಎಲಿವೇಟೆಡ್‌ ಕಾರಿಡಾರ್ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ’ ಎಂದರು.

ಸಭೆಗೆ ತಡವಾಗಿ ಬಂದ ಹಿಪ್ಪರಗಿ ಅಣೆಕಟ್ಟು ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಆರ್. ರಾಠೋಡ ಅವರನ್ನು ತರಾಟೆಗೆ ತೆಗೆದುಕೊಂಡರು.

 

Post Comments (+)