ಶುಕ್ರವಾರ, ಮೇ 14, 2021
32 °C
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಆರೋಪ

ಕೋವಿಡ್ ನಿಯಂತ್ರಣ: ಸರ್ಕಾರ ವಿಫಲ -ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಕೋವಿಡ್-19 ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿ ನಾಲ್ವರು ಮಂತ್ರಿಗಳಿದ್ದರೂ ಏನು ಪ್ರಯೋಜನ? ಇಲ್ಲಿಯವರೆಗೂ ಒಂದು ಸಭೆಯನ್ನೂ ಅವರು ನಡೆಸಿಲ್ಲ. ಸೋಂಕು ಹರಡದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ಕೊಟ್ಟಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಮಂತ್ರಿಯೇ ಬೇಕು ಅಂತಿಲ್ಲ. ಇತರ ನಾಲ್ವರು ಸಚಿವರು ಜಿಲ್ಲೆಯವರೇ ಆಗಿದ್ದಾರೆ. ಅವರ ಮೇಲೆ ಜವಾಬ್ದಾರಿ ಇದೆ. ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲವೆಂದು ಕೈಚೆಲ್ಲಿ ಕುಳಿತುಕೊಳ್ಳದೆ ಜಿಲ್ಲೆಯ ಬಗ್ಗೆ ಕಾಳಜಿ ವಹಿಸಬೇಕು. ಒಮ್ಮತದಿಂದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದರು.

ಕರ್ಫ್ಯೂನಿಂದ ಪ್ರಯೋಜನವಿಲ್ಲ:

‘ರಾಜ್ಯ ಸರ್ಕಾರವು ರಾತ್ರಿ ಕರ್ಫ್ಯೂ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸರ್ಕಾರ ಏನು ಸಾಧನೆ ಮಾಡಲು ಹೊರಟಿದೆ ಎನ್ನುವುದು ತಿಳಿಯುತ್ತಿಲ್ಲ. ನೈಟ್ ಕರ್ಫ್ಯೂನಿಂದ ಕೋವಿಡ್ ನಿಯಂತ್ರಣ ಕಷ್ಟ ಸಾಧ್ಯ. 144 ಸೆಕ್ಷನ್ ಜಾರಿ ಮಾಡಿ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಸಲಹೆ ನೀಡಿದರು.

‘ಲಾಕ್‌ಡೌನ್ ಜಾರಿಗೊಳಿಸಬಾರದು. ಲಾಕ್‌ಡೌನ್‌ನಿಂದ ಕಾರ್ಖಾನೆಗಳು ಸೇರಿದಂತೆ ಎಲ್ಲವೂ ಬಂದ್ ಆಗಲಿವೆ. ಯುವಕರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಳೆದುಕೊಳ್ಳುತ್ತಾರೆ. ಈಗಾಗಲೇ ಕೋವಿಡ್ ಒಂದನೇ ಅಲೆಯಿಂದ ಜನರು ಚೇತರಿಸಿಕೊಂಡಿಲ್ಲ. ಮತ್ತೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡರೆ ಜನಸಾಮಾನ್ಯರು ಬದುಕು ನಡೆಸುವುದು ಕಷ್ಟವಾಗಲಿದೆ’ ಎಂದು ಪ್ರತಿಕ್ರಿಯಿಸಿದರು.

ಗೆಲುವು ನಿಶ್ಚಿತ:

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತದಾನ ಮುಗಿದಿದೆ. ಎರಡೂ ಪ್ರಮುಖ ಪಕ್ಷದವರು, ಕಾರ್ಯಕರ್ತರು ಎಲ್ಲರೂ ಲೆಕ್ಕಾಚಾರ ಮಾಡುತ್ತಿದ್ದಾರೆ. ಅಧಿಕಾರಿಗಳು, ಕಾರ್ಯಕರ್ತರು ಚುನಾವಣೆ ವೇಳೆ ಒಳ್ಳೆಯ ರೀತಿ ಕೆಲಸ ಮಾಡಿದ್ದಾರೆ. 20 ವರ್ಷಗಳ ಬಳಿಕ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಗೆಲ್ಲುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‌‘ಸಾರಿಗೆ ನೌಕರರ ಮುಷ್ಕರವೂ ಗಂಭೀರವಾಗಿದೆ. ಅವರಿಗೆ ಇರುವ ಸಂಬಳ ಕಡಿಮೆ. 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ಆಗ್ರಹಿಸುತ್ತಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸುತ್ತಿದ್ದಾರೆ. ಅವರ ಬೆಂಬಲಕ್ಕೆ ಪಕ್ಷ ನಿಂತಿದೆ. ಸರ್ಕಾರ ಅವರ ಹೋರಾಟ ಹತ್ತಿಕ್ಕದೆ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ನಗರ ಘಟಕದ ಕಾಂಗ್ರೆಸ್ ಅಧ್ಯಕ್ಷ ರಾಜು ಸೇಠ್, ಜಿಲ್ಲಾ ‍ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ಮುಖಂಡ ಸುನೀಲ ಹನಮನ್ನವರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು