ಮಂಗಳವಾರ, ಜನವರಿ 28, 2020
23 °C
ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ

ಸರ್ಕಾರಿ ಜಾಗ ಅತಿಕ್ರಮಣ; ಮಾ.30ರೊಳಗೆ ವರದಿ ಸಲ್ಲಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ತಾಲ್ಲೂಕು ಪಂಚಾಯ್ತಿ ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸರ್ಕಾರಿ ಆಸ್ತಿಪಾಸ್ತಿಗಳ ಬಗ್ಗೆ ಮಾಹಿತಿ ಫಲಕಗಳನ್ನು ಅಳವಡಿಸಬೇಕು. ಸರ್ಕಾರಿ ಜಾಗ ಅತಿಕ್ರಮಣವಾಗಿದ್ದರೆ ಬಗ್ಗೆ ಮಾರ್ಚ್ 30ರೊಳಗೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರಿ ಜಾಗೆಯಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸುತ್ತಿರುವ ಬಗ್ಗೆ ಸದಸ್ಯರು ಪ್ರಸ್ತಾಪಿಸಿದಾಗ ಅವರು ಈ ರೀತಿಯ ಎಚ್ಚರಿಕೆ ನೀಡಿದರು.

‘ಸರ್ಕಾರಿ ಜಾಗೆಯಲ್ಲಿ ಅಕ್ರಮವಾಗಿ ವಸತಿ ಯೋಜನೆಯ ಮನೆಗಳನ್ನು ನಿರ್ಮಿಸಿದರೆ ಸಂಬಂಧಿಸಿದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು  ಎಚ್ಚರಿಕೆ ನೀಡಿದರು.

‘ಪ್ರವಾಹದ ಸಂದರ್ಭದಲ್ಲಿ ಶಾಲೆ ಅಥವಾ ಅಂಗನವಾಡಿಗಳಿಗೆ ಹಾನಿಯಾಗಿದ್ದರೆ ಈಗಾಗಲೇ ಬಿಡುಗಡೆಯಾಗಿರುವ ಹಣದ ಜತೆಗೆ ಹೆಚ್ಚುವರಿಯಾಗಿ ₹ 2 ಲಕ್ಷವರೆಗೆ ಬಿಡುಗಡೆ ಮಾಡಬಹುದಾಗಿದೆ. ಸೂಕ್ತ ಪ್ರಸ್ತಾವ ಸಲ್ಲಿಸಬಹುದು’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಹೆಸ್ಕಾಂ ಅಧಿಕಾರಿ ವಿರುದ್ಧ ಕ್ರಮಕ್ಕೆ ಒತ್ತಾಯ

ಸುಟ್ಟು ಹೋಗಿರುವ ವಿದ್ಯುತ್ ಟ್ರಾನ್ಸಫಾರ್ಮ್ ಬದಲಿಸಲು ರೈತರಿಂದ ಲಂಚಕ್ಕಾಗಿ ಪೀಡಿಸುತ್ತಿರುವ ರಾಯಬಾಗ ತಾಲ್ಲೂಕಿನ ಮಂಟೂರು ಹೆಸ್ಕಾಂ ಶಾಖಾಧಿಕಾರಿ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಸದಸ್ಯರು ಧರಣಿ ನಡೆಸಿದರು.

ಸದಸ್ಯ ನಿಂಗಪ್ಪ ಪಕಾಂಡಿ ಮಾತನಾಡಿ, ‘ಸೆಪ್ಟೆಂಬರ್ ತಿಂಗಳಲ್ಲಿ ಕಟಕಬಾಂವಿ ಗ್ರಾಮದಲ್ಲಿಯ ವಿದ್ಯುತ್ ಟ್ರಾನ್ಸಫಾರ್ಮ್ ಬದಲಿಸುವಂತೆ ಅನೇಕ ಸಲ ಶಾಖಾಧಿಕಾರಿಗಳ ಗಮನಕ್ಕೆ ತಂದಿದ್ದೆ. ಆಗ ಅವರು ನನ್ನ ಹತ್ತಿರ ₹ 10 ಸಾವಿರ ಲಂಚ ನೀಡುವಂತೆ ಕೇಳಿದ್ದರು’ ಎಂದು ಗಂಭೀರ ಆರೋಪ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜೇಂದ್ರ ಕೆ.ವಿ., ‘ರಾಯಬಾಗದ ಹೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ ಆನಂದ ನಾಯಕ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜ ಯಳಕರ ಅವರು ಕೂಡಲೇ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ತಪ್ಪಿತಸ್ಥರು ಎಂದು ಸಾಬೀತಾದರೆ ಶಾಖಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ವರದಿಗೆ ಸೂಚನೆ

ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಇತರೆ ಅನುದಾನದಡಿ ನೀಡಲಾಗುವ ಕೊಳವೆ ಬಾವಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಲವು ಸದಸ್ಯರು ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಓ ರಾಜೇಂದ್ರ ಅವರು, ‘ಕೊಳವೆ ಬಾವಿಗಳ ಕಾರ್ಯನಿರ್ವಹಣೆ ಬಗ್ಗೆ ವಿಸ್ತೃತ ವರದಿ ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಿಷ್ಟಾಚಾರ ನಿರ್ಲಕ್ಷ್ಯ– ಆರೋಪ
‘ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ. ಅಧಿಕಾರಿಗಳು ತಮ್ಮನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದಾರೆ. ಸಮಸ್ಯೆಗಳನ್ನು ಗಮನಕ್ಕೆ ತಂದಾಗಲೂ ಸ್ಪಂದಿಸುತ್ತಿಲ್ಲ’ ಎಂದು ಸರಸ್ವತಿ ಪಾಟೀಲ, ಜಿತೇಂದ್ರ ಮಾದಾರ ಸೇರಿದಂತೆ ಇತರೆ ಸದಸ್ಯರು ಆರೋಪಿಸಿದರು.

ಹೀಗಾಗದಂತೆ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ಸಿಇಒ ರಾಜೇಂದ್ರ ಅವರು ಸೂಚಿಸಿದ ನಂತರ ಸದಸ್ಯರು ಧರಣಿ ಹಿಂದಕ್ಕೆ ಪಡೆದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು