ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಿಂದ 214ಕ್ಕೇರಿದ ಮಕ್ಕಳ ಸಂಖ್ಯೆ!

ರಾಜ್ಯದಲ್ಲೇ ಅತಿ ಹೆಚ್ಚು ದಾಖಲಾತಿಯುಳ್ಳ ಕಿರಿಯ ಪ್ರಾಥಮಿಕ ಶಾಲೆ
Last Updated 18 ಜನವರಿ 2019, 11:14 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಯಾದವಾಡದ ಕುರಬಟ್ಟಿಯ ಶಾಲೆ, ರಾಜ್ಯದಲ್ಲಿಯೇ ಹೆಚ್ಚು ದಾಖಲಾತಿ ಹೊಂದಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎನ್ನುವ ಕೀರ್ತಿ ಗಳಿಸಿ ಗಮನಸೆಳೆದಿದೆ.

2005ರಲ್ಲಿ ಪ್ರಾರಂಭವಾದಾಗ 22 ಮಕ್ಕಳನ್ನು ದಾಖಲಿಸಲು ಬಹಳ ಕಷ್ಟಪಡಬೇಕಾಗಿತ್ತು. 2ಸಾವಿರ ಜನಸಂಖ್ಯೆಯುಳ್ಳ ಇಲ್ಲಿನವರಲ್ಲಿ ಶಿಕ್ಷಣದ ಬಗ್ಗೆ ನಿರುತ್ಸಾಹವಿತ್ತು. ಬಹುತೇಕರು ಮಕ್ಕಳನ್ನು ಕೃಷಿಗೋ, ಕುರಿ ಕಾಯುವುದಕ್ಕೋ ಹಚ್ಚುತ್ತಿದ್ದರು. ಇದರಿಂದ ಮಕ್ಕಳು ಶಾಲೆಯಿಂದ ವಿಮುಖರಾಗಿದ್ದರು.

‌2014ರಲ್ಲಿ ಮುಖ್ಯಶಿಕ್ಷಕರಾಗಿ ಬಂದ ಮಾರುತಿ ಕರೆನ್ನವರ ಹಾಗೂ ಶಿಕ್ಷಕರ ಇಚ್ಛಾಶಕ್ತಿ ಮತ್ತು ಕ್ರಿಯಾಶೀಲ ಚಟುವಟಿಕೆಗಳಿಂದಾಗಿ ಈಗ 1ರಿಂದ 5ನೇ ತರಗತಿಗೆ 214 ಮಕ್ಕಳು ಪ್ರವೇಶ ಪಡೆದಿದ್ದಾರೆ. ಇವರಲ್ಲಿ 114 ಬಾಲಕಿಯರಿರುವುದು ವಿಶೇಷ. ಶಿಕ್ಷಕರು ಮನೆ–ಮನೆಗೆ ಭೇಟಿ ನೀಡಿ ಶಿಕ್ಷಣದ ಮಹತ್ವದ ಬಗ್ಗೆ ಪಾಲಕರಲ್ಲಿ ಅರಿವು ಮೂಡಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ.

ಸಮುದಾಯದ ಕೊಡುಗೆ:ಯಾದವಾಡದ ದಾಲ್ಮಿಯಾ ಪ್ರತಿಷ್ಠಾನದವರು ₹1.80 ಲಕ್ಷ ವೆಚ್ಚದಲ್ಲಿ ಪರಿಸರ ಸ್ನೇಹಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಸ್ಟೀಲ್ ಕಪಾಟು, ಟಿವಿ, ಮೇಜು, ಖುರ್ಚುಗಳು, ಪ್ಯಾನ್, ಪಾತ್ರೆಗಳು, ಸ್ಟೀಲ್ ತಟ್ಟೆ ಹಾಗೂ ಲೋಟಗಳನ್ನು ಜನರು ಮತ್ತು ಜನಪ್ರತಿನಿಧಿಗಳು ಉದಾರ ಮನಸ್ಸಿನಿಂದ ಕೊಡುಗೆಯಾಗಿ ನೀಡಿದ್ದಾರೆ. ಇದರೊಂದಿಗೆ ಶಾಲೆ ಬೆಳವಣಿಗೆಗೆ ಟೊಂಕ ಕಟ್ಟಿ ನಿಂತಿದ್ದಾರೆ.

6 ಮಂದಿ ಶಿಕ್ಷಕರಿದ್ದಾರೆ. ಕೆಲವರು ಬಿ.ಎ. ಬಿ.ಇಡಿ. ಮತ್ತು ಸ್ನಾತಕೋತ್ತರ ಪದವೀಧರರು. ನವೋದಯ, ಮೊರಾರ್ಜಿ ದೇಸಾಯಿ ವಸತಿಶಾಲೆಗಳ ಪ್ರವೇಶ ಪರೀಕ್ಷೆಗಳಿಗೆ ಶಾಲೆಯ ಅವಧಿ ನಂತರ ಮತ್ತು ರಜೆ ದಿನಗಳಲ್ಲ್ಲಿ ಉಚಿತವಾಗಿ ತರಬೇತಿ ನೀಡಿ ಸಿದ್ಧಗೊಳಿಸುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷವೂ ಮೊರಾರ್ಜಿ ದೇಸಾಯಿ ವಸತಿಶಾಲೆಗಳಿಗೆ ಇಲ್ಲಿಂದ 10ರಿಂದ 12 ಮಕ್ಕಳು ಆಯ್ಕೆಯಾಗುತ್ತಿದ್ದಾರೆ.

ಇಲ್ಲಿ ಎಜುಸ್ಯಾಟ್‌ ಶಿಕ್ಷಣ ಸೌಲಭ್ಯ ಕಲ್ಪಿಸಲಾಗಿದೆ. ಪ್ರತಿ ಮಗುವಿಗೂ ಶಿಕ್ಷಕರು ತಮ್ಮ ಸ್ವಂತ ಖರ್ಚಿನಲ್ಲಿ 4 ನೋಟ್‌ಬುಕ್‌ಗಳನ್ನು ಉಚಿತವಾಗಿ ಕೊಡಿಸುತ್ತಾರೆ. ಜನ್ಮ ದಿನವನ್ನು ಮಕ್ಕಳೊಂದಿಗೆ ಆಚರಿಸಿ, ತಮ್ಮ ಖರ್ಚಿನಲ್ಲಿ ಎಲ್ಲರಿಗೂ ಸಿಹಿ, ತಿಂಡಿ ವ್ಯವಸ್ಥೆ ಮಾಡುತ್ತಾರೆ. ಈ ಮೂಲಕ ಮಕ್ಕಳಲ್ಲಿ ಉತ್ಸಾಹ ತುಂಬುತ್ತಿದ್ದಾರೆ; ಶಾಲೆಯತ್ತ ಆಕರ್ಷಿಸುತ್ತಿದ್ದಾರೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದಾರೆ. ಕ್ರೀಡೆ, ಪ್ರತಿಭಾ ಕಾರಂಜಿ, ಕಲಿಕೋತ್ಸವ ಸ್ಪರ್ಧೆಗಳಲ್ಲಿ ತಾಲ್ಲೂಕು, ಜಿಲ್ಲಾಮಟ್ಟಕ್ಕೆ ಹೋಗಿದ್ದಾರೆ. ಡಿಡಿಪಿಐ, ಬಿಇಒ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳ ಮೆಚ್ಚುಗೆಗೂ ಶಾಲೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT