ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಯೂಟರ್‌ ಬಳಕೆ, ಸಿಸಿಟಿವಿ ಕ್ಯಾಮೆರಾ ಕಣ್ಗಾವಲು!

ಗಡಿನಾಡಿನಲ್ಲೊಂದು ಮಾದರಿ ಸರ್ಕಾರಿ ಶಾಲೆ
ಅಕ್ಷರ ಗಾತ್ರ

ಚಿಕ್ಕೋಡಿ: ಅಂಗಳ ಪ್ರವೇಶಿಸುತ್ತಿದ್ದಂತೆಯೇ ವಿದ್ಯಾದೇವತೆ ಸರಸ್ವತಿಯ ದರ್ಶನ. ಆವರಣದೆಲ್ಲೆಡೆ ಹಸಿರು ಸಿರಿ. ತರಗತಿಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ. ಸ್ವಚ್ಛತೆಗೆ ಆದ್ಯತೆ. ಪಠ್ಯದೊಂದಿಗೆ ಪಠ್ಯೇತರ ಹಾಗೂ ಕಂಪ್ಯೂಟರ್‌ ತರಬೇತಿಯೂ ಲಭ್ಯ. ಪೂರ್ವ ಪ್ರಾಥಮಿಕ ತರಗತಿಗಳ ಮೂಲಕ ಮಕ್ಕಳಿಗೆ ಆಟದೊಂದಿಗೆ ಪಾಠ. ಮಕ್ಕಳ ಸುರಕ್ಷತೆಗಾಗಿ ಸಿಸಿ ಟಿವಿ ಕ್ಯಾಮೆರಾ ಕಣ್ಗಾವಲು.

– ಚಿಕ್ಕೋಡಿ ತಾಲ್ಲೂಕಿನ ಗಡಿಯಂಚಿನ ಕಾರದಗಾ ಗ್ರಾಮದ ಮರಾಠಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಶೇಷತೆಗಳಿವು.

150 ವರ್ಷ ಹೊಸ್ತಿಲಲ್ಲಿರುವ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೆ 497 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 16 ಶಿಕ್ಷಕರಿದ್ದು, ಒಬ್ಬ ಕನ್ನಡ ಭಾಷಾ ಅತಿಥಿ ಶಿಕ್ಷಕರೂ ಇದ್ದಾರೆ. ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಒಬ್ಬ ಅತಿಥಿ ಶಿಕ್ಷಕಿಯನ್ನೂ ನೇಮಕ ಮಾಡಿಕೊಳ್ಳಲಾಗಿದೆ.

ಸಮುದಾಯದ ಸಹಕಾರ:ಹಿಂದೆ ಸಾಮಾನ್ಯ ಎಂಬಂತಿದ್ದ ಈ ಸರ್ಕಾರಿ ಶಾಲೆ ಸಮುದಾಯದ ಸಹಭಾಗಿತ್ವದೊಂದಿಗೆ ಅಮೂಲಾಗ್ರ ಬೆಳವಣಿಗೆ ಕಂಡಿದೆ. ಆವರಣದಲ್ಲಿ ಏಳೆಂಟು ವರ್ಷಗಳಾಚೆ ಆಗಿನ ಎಸ್‌ಡಿಎಂಸಿ ಅಧ್ಯಕ್ಷ ಅಭಿನಂದನ ಮೂರಾಬಟ್ಟೆ, ಸದಸ್ಯರು ಮತ್ತು ಶಿಕ್ಷಕರು ವಿಶೇಷ ಮುತುವರ್ಜಿ ವಹಿಸಿ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ₹ 3 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನ ಆಕರ್ಷಿಸುತ್ತಿದೆ. ಅದರ ಮಧ್ಯದಲ್ಲಿ ಶಾರದಾಂಬೆಯ ಆಕರ್ಷಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿ ಮಕ್ಕಳಿಗೆ ಸ್ಫೂರ್ತಿಯಾಗಿದೆ. ಆಯುರ್ವೇದ ಸಸಿಗಳನ್ನು ಬೆಳೆಸಲಾಗಿದೆ. ತರಕಾರಿಯನ್ನೂ ಬೆಳೆಯಲಾಗುತ್ತಿದೆ. ಅಲಂಕಾರಿಕ ಸಸಿಗಳು ಆಕರ್ಷಿಸುತ್ತವೆ.

ಪಠ್ಯೇತರ ಶಿಕ್ಷಣ:‘ಮಕ್ಕಳಿಗೆ ಪಠ್ಯ ಶಿಕ್ಷಣದೊಂದಿಗೆ ಗಣಕಯಂತ್ರ ಶಿಕ್ಷಣವನ್ನೂ ನೀಡಲಾಗುತ್ತಿದೆ. ದಾನಿಗಳ ನೆರವಿನಿಂದ ಐದು ಕಂಪ್ಯೂಟರ್‌ಗಳನ್ನು ಖರೀದಿಸಲಾಗಿದೆ. ನಿಯಮಿತವಾಗಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಇದಕ್ಕಾಗಿಯೇ ಎಸ್‌ಡಿಎಂಸಿ ವತಿಯಿಂದ ಒಬ್ಬ ಅತಿಥಿ ಶಿಕ್ಷಕಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಪ್ರಭಾರ ಮುಖ್ಯಶಿಕ್ಷಕ ಎಸ್‌.ಎಸ್‌. ಖಾಮಕರ ಹೇಳುತ್ತಾರೆ.

ಈ ಶಾಲೆಯ ಪ್ರತಿ ತರಗತಿ ಕೊಠಡಿಗಳಲ್ಲೂ ಶುದ್ಧೀಕರಿಸಿದ ನೀರು ಒದಗಿಸಲಾಗುತ್ತದೆ. ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿದೆ. ಈ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮತ್ತು ಸ್ವಚ್ಛತೆಯ ಅರಿವು ಮೂಡಿಸಲಾಗುತ್ತಿದೆ. ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಇದೆ. ಸುಮಾರು 16 ಗುಂಟೆ ವಿಸ್ತೀರ್ಣದಲ್ಲಿ ಆಟದ ಮೈದಾನ ನಿರ್ಮಿಸಲಾಗಿದೆ. ಅದರಲ್ಲಿ ಸಭಾಮಂಟಪ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ.

ಪೂರ್ವ ಪ್ರಾಥಮಿಕ ತರಗತಿ:‘ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ 3 ವರ್ಷಗಳಿಂದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನೂ ಆರಂಭಿಸಲಾಗಿದೆ. ಆ ಮಕ್ಕಳಿಗೆ ಎಸ್‌ಡಿಎಂಸಿ ವತಿಯಿಂದ ಬ್ಯಾಗ್, ನೋಟಬುಕ್‌ಗಳನ್ನು ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಎರಡೂ ತರಗತಿಗಳಲ್ಲಿ 66 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಅವರಿಗೆ ಶಿಕ್ಷಣ ನೀಡಲು ಇಬ್ಬರು ಅತಿಥಿ ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಸೋಮರಾಯ ಗಾವಡೆ ತಿಳಿಸಿದರು.

*
ಮಕ್ಕಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ಪ್ರಯೋಗಾಲಯವಿದೆ. ಸಾಮಾನ್ಯ ಜ್ಞಾನ ಹೆಚ್ಚಿಸಲು ಪುಸ್ತಕಾಲಯವಿದೆ. ನವೋದಯ ಪರೀಕ್ಷೆ ಎದುರಿಸಲು ಮಾರ್ಗದರ್ಶನ ನೀಡಲಾಗುತ್ತಿದೆ.
-ಎಸ್‌.ಎಸ್‌. ಖಾಮಕರ,ಪ್ರಭಾರ ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT