ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಕೈಗಾರಿಕೆ ಆರಂಭಕ್ಕೆ ಅವಕಾಶ; ಸಚಿವ ಸುರೇಶ ಅಂಗಡಿ ಭರವಸೆ

ಉದ್ಯಮಿಗಳ ಸಭೆ ನಡೆಸಿದ ಸಚಿವರು
Last Updated 29 ಏಪ್ರಿಲ್ 2020, 13:32 IST
ಅಕ್ಷರ ಗಾತ್ರ

ಬೆಳಗಾವಿ: ‘ಮೇ 3ರ ಬಳಿಕ ಕೇಂದ್ರ ಸರ್ಕಾರ ಕೈಗೊಳ್ಳಲಿರುವ ತೀರ್ಮಾನ ಹಾಗೂ ಮಾರ್ಗಸೂಚಿ ಆಧರಿಸಿ ಕೈಗಾರಿಕೆಗಳನ್ನು ಆರಂಭಿಸಲು ಅನುವು ಮಾಡಿಕೊಡಲಾಗುವುದು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಭರವಸೆ ನೀಡಿದರು.

ಇಲ್ಲಿನ ಉದ್ಯಮಬಾಗ್‌ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಬುಧವಾರ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ನಮಗೆ ಕೈಗಾರಿಕೆಗಳನ್ನು ಆರಂಭಿಸಲು ಅವಕಾಶ ನೀಡಬೇಕು’ ಎಂದು ಕೈಗಾರಿಕೋದ್ಯಮಿಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಸಚಿವರು, ‘ಮುಂಬರುವ ದಿನಗಳಲ್ಲಿ ಕಾರ್ಮಿಕರಿಗೆ, ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗದಂತೆ ಮತ್ತು ಉತ್ಪಾದನೆ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಕ್ರಮ‌ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಕೊರೊನಾ ಭೀತಿಯಿಂದ ಕಾರ್ಮಿಕರು ತಮ್ಮ ತಮ್ಮ ಊರು ಹಾಗೂ ರಾಜ್ಯಗಳಿಗೆ ಹಿಂದಿರುಗುತ್ತಿದ್ದಾರೆ. ಒಮ್ಮೆ ಹೀಗೆ ಕಾರ್ಮಿಕರು ಹೋದರೆ ನಂತರದ ದಿನಗಳಲ್ಲಿ ತಕ್ಷಣವೇ ಕೈಗಾರಿಕೆ ಪುನರಾರಂಭಿಸುವುದು ಕಷ್ಟವಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೈಗಾರಿಕೆ ಆರಂಭಿಸಲು ಅವಕಾಶ ನೀಡಬೇಕು’ ಎಂದು ಉದ್ಯಮಿಗಳು ಕೋರಿದರು.

‘ಸರ್ಕಾರದ ಮಾರ್ಗಸೂಚಿ ಪ್ರಕಾರ ಕೈಗಾರಿಕೆಗಳನ್ನು ಆರಂಭಿಸಲು ಸಿದ್ಧವಿದ್ದೇವೆ. ಕಾರ್ಮಿಕರಿಗೆ ಪಾಸ್ ಮತ್ತು ಉದ್ಯಮಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಪೂರೈಸಬೇಕು’ ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕು ಪತ್ತೆಯಾಗಿರುವ ಪ್ರದೇಶದಿಂದ ಕೈಗಾರಿಕೆಗಳು ದೂರದಲ್ಲಿವೆ. ಆದ್ದರಿಂದ ಕೈಗಾರಿಕೆಗಳು ಹಾಗೂ ಕಾರ್ಮಿಕರ ಹಿತದೃಷ್ಟಿಯಿಂದ ಕೈಗಾರಿಕೆ ಆರಂಭಿಸಲು ಕ್ರಮ ವಹಿಸಲಾಗುವುದು’ ಎಂದು ಸಚಿವ ಅಂಗಡಿ ಪ್ರತಿಕ್ರಿಯಿಸಿದರು.

‘ಕಾರ್ಮಿಕರ ಆರೋಗ್ಯ ಕಾಪಾಡಿಕೊಳ್ಳುವುದು, ಊಟ-ವಸತಿ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸುವುದು ಆಯಾ ಕೈಗಾರಿಕೋದ್ಯಮಿಗಳ ಹೊಣೆಯಾಗಿರಲಿದೆ’ ಎಂದರು.

ಶಾಸಕರಾದ ಅಭಯ ಪಾಟೀಲ್, ಅನಿಲ ಬೆನಕೆ, ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಜಿಲ್ಲಾ ಕೊವಿಡ್-19 ನೋಡಲ್ ಅಧಿಕಾರಿ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ವಿ. ರಾಜೇಂದ್ರ, ಎಸ್ಪಿ ಲಕ್ಷ್ಮಣ ನಿಂಬರಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT