ಗುರುವಾರ , ಆಗಸ್ಟ್ 11, 2022
21 °C
ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಆರಂಭಿಸಿದ ಬಿಜೆಪಿ

‘ಕಾರ್ಯಕರ್ತರನ್ನು ನಾಯರಕನ್ನಾಗಿಸುವ ಅವಕಾಶ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಕ್ಕೇರಿ: ‘ಕಾರ್ಯಕರ್ತರನ್ನು ನಾಯಕರನ್ನಾಗಿಸಲು ಗ್ರಾಮ ಪಂಚಾಯಿತಿ ಚುನಾವಣೆ ಸೂಕ್ತ ವೇದಿಕೆಯಾಗಿದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಹೊರವಲಯದ ವಿಶ್ವರಾಜ ಭವನದಲ್ಲಿ ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕವು ಹುಕ್ಕೇರಿ, ಯಮಕನಮರಡಿ, ಚಿಕ್ಕೋಡಿ, ನಿಪ್ಪಾಣಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಯಕರ್ತರಿಗೆ ಮಂಗಳವಾರ ಆಯೋಜಿಸಿದ್ದ ಗ್ರಾಮ ಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಪಕ್ಷ ಹಾಗೂ ಸದೃಢ ಕಾರ್ಯಕರ್ತರ ಪಡೆಯನ್ನು ತಳಮಟ್ಟದಲ್ಲಿ ಗಟ್ಟಿಗೊಳಿಸಬೇಕಿದೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಂತೆ ಮಾಡಲು ಶ್ರಮಿಸಬೇಕು. ಈ ಮೂಲಕ ಕಾರ್ಯಕರ್ತರನ್ನು ನಾಯಕರನ್ನಾಗಿಸಲು ಬಂದಿರುವ ಸುವರ್ಣಾವಕಾಶ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಗ್ರಾಮ ಪಂಚಾಯಿತಿ ಚುನಾವಣೆ ಎಂದರೆ ಅದು ಕಾರ್ಯಕರ್ತರ ಚುನಾವಣೆ. ಅವರಲ್ಲಿ ಒಗ್ಗಟ್ಟು ಮೂಡಿಸಿ, ಶಕ್ತಿ ತುಂಬುವುದಕ್ಕಾಗಿ ಪಕ್ಷವು ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಂಡಿದೆ. ಮಹಾತ್ಮ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ಮಾಡಬೇಕು. ಕ್ರಿಯಾಶೀಲ ಹಾಗೂ ಗೆಲ್ಲುವ ಸಾಮರ್ಥ್ಯ ಇರುವವರನ್ನು ಜಾತಿ, ಮತ ನೋಡದೆ ಮಣೆ ಹಾಕಬೇಕು. ಪಕ್ಷ ದ್ರೋಹ ಮಾಡಬಾರದು. ಈಗ ಅವಕಾಶ ಸಿಗದವರಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ಸಿಗುವುದೆಂಬ ಆಶಾಭಾವ ಹೊಂದಬೇಕು’ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಪ್ರಚಾರ:

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ‘ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬರುವಂತಾಗಲು ಸಚಿವರು, ಸಂಸದರು, ಶಾಸಕರು ಕಾರ್ಯಕರ್ತರಂತೆ ದುಡಿಯಲಿದ್ದಾರೆ. ಕಾರ್ಯಕರ್ತರ ಪರವಾಗಿ ಇದೇ ಮೊದಲಿಗೆ ಗ್ರಾಮ ಮಟ್ಟದಲ್ಲಿ ಪ್ರಚಾರ ನಡೆಸಲಿದ್ದಾರೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮೇಶ ಕತ್ತಿ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಈ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರ ಗೆಲುವಿಗೆ ಶ್ರಮಿಸಬೇಕು. ಬೇರು ಮಟ್ಟದ ಕಾರ್ಯಕರ್ತರಿಗೆ ಅಧಿಕಾರ ಸಿಕ್ಕರೆ ಭವಿಷ್ಯದಲ್ಲಿ ಎದುರಾಗುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಿಸಲು ಸುಲಭವಾಗಲಿದೆ.ಗ್ರಾಮ ಮಟ್ಟದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಕಾರ್ಯಕರ್ತರು ಚರ್ಚಿಸಿ ಬಗೆಹರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಸಚಿವರಾದ ಶಶಿಕಲಾ ಜೊಲ್ಲೆ, ಸಿ.ಸಿ. ಪಾಟೀಲ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಶಾಸಕ ಪಿ. ರಾಜೀವ್, ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಸಚಿವ ಶಶಿಕಾಂತ ನಾಯಿಕ, ಮುಖಂಡರಾದ ಮಹೇಶ ಭಾತೆ, ಜಯಗೌಡ ಪಾಟೀಲ, ಸತ್ತ್ಯೆಪ್ಪ ನಾಯಿಕ, ಮಾರುತಿ ಅಷ್ಟಗಿ, ಕಲಗೌಡ ಪಾಟೀಲ, ಬಸವರಾಜ ಹುಂದ್ರಿ, ರಾಜೇಂದ್ರ ಪಾಟೀಲ, ಎ.ಕೆ. ಪಾಟೀಲ, ಮಹಾವೀರ ಬಾಗಿ ಇದ್ದರು.

ಬಿಜೆಪಿ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ ನೇರ್ಲಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ ನಿರೂಪಿಸಿದರು. ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು