ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ: ಅಭಿವೃದ್ಧಿಯತ್ತ ಸಾಗಿದ ಶಿವಾಪುರ

ಕಂಗೊಳಿಸುತ್ತಿರುವ ಸರ್ಕಾರಿ ಶಾಲೆಗಳು, ತೋಟಪಟ್ಟಿ ರಸ್ತೆಗಳ ಸುಧಾರಣೆ
Last Updated 6 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ಶಿವಾಪುರ(ಹ) ಅಭಿವೃದ್ಧಿಯತ್ತ ಹೆಜ್ಜೆ ಇಟ್ಟಿದ್ದು, ತಂಟೆ, ತಕರಾರು ಇಲ್ಲದ ಸೌಹಾರ್ದದ ಗ್ರಾಮ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ತೋಟಪಟ್ಟಿ ರಸ್ತೆಗಳು ಸುಧಾರಣೆ ಕಂಡಿವೆ. ಸರ್ಕಾರಿ ಶಾಲೆಗಳಂತೂ ಹೈಟೆಕ್‌ ಸೌಕರ್ಯಗಳೊಂದಿಗೆ ಕಂಗೊಳಿಸುತ್ತಿವೆ.

2015ರಲ್ಲಿ ಇದು ಪ್ರತ್ಯೇಕ ಗ್ರಾಮ ಪಂಚಾಯಿತಿ ಆಗಿದೆ. 5,400 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಶೇ 80ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. 60ಕ್ಕೂ ಅಧಿಕ ಯುವಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 2019ರಲ್ಲಿ ಸೇನೆಯಲ್ಲಿ ಸಾವನ್ನಪ್ಪಿದ ಗ್ರಾಮದ ಯೋಧ ವಿಠ್ಠಲ ಮೇತ್ರಿ ಅವರ ಪುತ್ಥಳಿಯನ್ನು ದೇಶಾಭಿಮಾನದ ಪ್ರತೀಕವಾಗಿ ಶಾಲೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ.

ನರೇಗಾ ಕಾಮಗಾರಿ: ಇಲ್ಲಿನ ಸರ್ಕಾರಿ ಶಾಲೆಗಳಿಗೆ ನರೇಗಾ ಯೋಜನೆ ಹೊಸ ಹೊಳಪು ನೀಡಿದೆ. ಸುಸಜ್ಜಿತವಾದ ಆಟದ ಮೈದಾನ, ಅತ್ಯುತ್ತಮ ಶೌಚಾಲಯ, ಕಾಂಪೌಂಡ್ ಹಾಗೂ ಪೇವರ್ಸ್‌ಗಳ ಅಳವಡಿಕೆಯಿಂದ ವರಾಂಡಗಳು ಗಮನ ಸೆಳೆಯುತ್ತಿವೆ.

ಶಿವಾಪುರದ ಬಲಭೀಮ ಸರ್ಕಾರಿ ಪ್ರೌಢಶಾಲೆ ಆವರಣಕ್ಕೆ ಕಾಲಿಟ್ಟರೆ ಸಾಕು. ವಿಶ್ವವಿದ್ಯಾಲಯದಲ್ಲಿರುವ ಅಥ್ಲೆಟಿಕ್ಸ್‌ ಟ್ರ್ಯಾಕ್‌ ನೋಡಿದಂತಹ ಅನುಭವವಾಗುತ್ತದೆ. ಬಾಸ್ಕೆಟ್‌ಬಾಲ್‌ ಅಂಕಣ, ಸಭಾಂಗಣ, ಮುಖ್ಯ ಕಟ್ಟಡಕ್ಕೆ ಹೊಂದಿಕೊಂಡಂತೆ ಹೈಟೆಕ್‌ ಶೌಚಾಲಯ, ಆವರಣದ ಸುತ್ತಲೂ ಕಾಂಪೌಂಡ್‌ ಅನ್ನು ಈ ಶಾಲೆಯಲ್ಲಿ ನಿರ್ಮಿಸಲಾಗಿದೆ.

ಗ್ರಾಮದಲ್ಲಿರುವ ಉಳಿದ ಮೂರು ಸರ್ಕಾರಿ ಪ್ರಾಥಮಿಕ ಶಾಲೆಗಳೂ ಇದೇ ಮಾದರಿಯಲ್ಲಿ ಸುಧಾರಣೆ ಕಂಡಿವೆ. ಇಲ್ಲಿನ ಗ್ರಾಮ ಪಂಚಾಯಿತಿಯವರು ಸರ್ಕಾರಿ ಶಾಲೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ, ಕಳೆದ ಒಂದು ವರ್ಷದಲ್ಲಿ ನರೇಗಾ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ್ದಾರೆ.

ಬಲಭೀಮ ಸರ್ಕಾರಿ ಪ್ರೌಢಶಾಲೆಗೆ ₹39.30 ಲಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹23.30 ಲಕ್ಷ, ತೋಟದ ಸಂಖ್ಯೆ 2ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ₹13.30 ಲಕ್ಷ ಹಾಗೂ ಮದಲಮಟ್ಟಿ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಗೆ ₹8.30 ಲಕ್ಷ ಸೇರಿ ₹84.20 ಲಕ್ಷ ವೆಚ್ಚ ಮಾಡಲಾಗಿದೆ.

‘ನರೇಗಾ ಅಡಿ 38ಕ್ಕೂ ಹೆಚ್ಚು ತೋಟಪಟ್ಟಿ ರಸ್ತೆಗಳ ಸುಧಾರಣೆ ಮಾಡಲಾಗಿದೆ. 35ಕ್ಕೂ ಹೆಚ್ಚು ಕುಡಿಯುವ ನೀರಿನ ಜಲಕುಂಭಗಳು, ಸಾರ್ವಜನಿಕ ಶೌಚಾಲಯಗಳು, ಚರಂಡಿ
ಗಳನ್ನು ನಿರ್ಮಿಸಲಾಗಿದೆ. ಗ್ರಾಮದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಸಾಯನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮದಲ್ಲಿ ಕೆಲವೆಡೆ ಶೌಚಾಲಯ ಮತ್ತು ಚರಂಡಿಗಳ ನಿರ್ಮಾಣ ಮಾಡಬೇಕಾಗಿದೆ. ಶೀಘ್ರಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ಸೇತುವೆ ಎತ್ತರ ಹೆಚ್ಚಿಸಿ
‘ಶಿವಾಪುರದ ಮುಖ್ಯ ರಸ್ತೆಯ ಹಳ್ಳಕ್ಕೆ ಇರುವ ಹಳೆಯ ಕಾಲದ ಸೇತುವೆ ಕೆಳಮಟ್ಟದಲ್ಲಿದೆ. ಸತತ ಮಳೆಯಿಂದಾಗಿ ಪ್ರವಾಹ ಬಂದರೆ, ಸಂಚಾರ ಸ್ಥಗಿತವಾಗುತ್ತದೆ. ಸೇತುವೆ ಕಿರಿದಾಗಿರುವುದರಿಂದ ವಾಹನಗಳ ದ್ವಿಮುಖ ಸಂಚಾರಕ್ಕೂ ತೊಂದರೆ ಇದೆ. ಹಲವು ದಶಕಗಳಿಂದ ಈ ಸಮಸ್ಯೆ ಇದೆ. ಮುನ್ಯಾಳ, ಖಾನಟ್ಟಿ, ಹಳ್ಳೂರ ಗ್ರಾಮಗಳ ಜನರು ಮೂಡಲಗಿ ತಾಲ್ಲೂಕಿಗೆ ಈ ಸೇತುವೆ ದಾಟಿಯೇ ಬರಬೇಕು. ವಾಹನಗಳ ಸಂಚಾರದ ದಟ್ಟಣೆ ಅಧಿಕವಾಗಿರುವುದರಿಂದ ನೀರಾವರಿ ಇಲಾಖೆಯಿಂದ ಸೇತುವೆ ಎತ್ತರ ಹೆಚ್ಚಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT