12,454 ಕ್ವಿಂಟಲ್‌ ಹೆಸರು ಕಾಳು ಖರೀದಿ ಬಾಕಿ!

7
ಇನ್ನೂ 3,051 ರೈತರಿಂದ ಹೆಸರು ಕಾಳು ಪಡೆಯಬೇಕಿತ್ತು

12,454 ಕ್ವಿಂಟಲ್‌ ಹೆಸರು ಕಾಳು ಖರೀದಿ ಬಾಕಿ!

Published:
Updated:

ಬೆಳಗಾವಿ: ಜಿಲ್ಲೆಗೆ ನಿಗದಿಯಾಗಿದ್ದಷ್ಟು ಪ್ರಮಾಣದಲ್ಲಿ ಹೆಸರುಕಾಳು ಖರೀದಿಸುವುದಕ್ಕೆ ಮುನ್ನವೇ, ಕೇಂದ್ರಗಳನ್ನು ಬಂದ್ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಬೈಲಹೊಂಗಲ, ರಾಮದುರ್ಗ, ಕುಡಚಿ, ಸವದತ್ತಿ, ಸಂಕೇಶ್ವರ ಟಿಎಪಿಸಿಎಂಎಸ್‌, ಅನಿಗೋಳ, ದೊಡ್ಡವಾಡ ಹಾಗೂ ಹುಲಕುಂದ ಪಿಕೆಪಿಎಸ್‌ನಲ್ಲಿ ಎಂಟು ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಸೆ. 8ರಂದು ಆರಂಭಿಸಲಾಗಿತ್ತು. ಹಲವು ತಾಂತ್ರಿಕ ಕಾರಣಗಳಿಂದಾಗಿ ಕುಂಟುತ್ತಾ ಸಾಗಿತ್ತು. ಆನ್‌ಲೈನ್‌ನಲ್ಲಿ ನೋಂದಣಿಯು ತಂತ್ರಾಂಶದಲ್ಲಿನ ಸಮಸ್ಯೆಯಿಂದಲೂ ತೊಂದರೆಯಾಗಿತ್ತು.

ಸೆ. 17ರ ನಂತರ ಖರೀದಿ ಆರಂಭಗೊಂಡಿತ್ತು. 2018–19ನೇ ಸಾಲಿನಲ್ಲಿ ಕ್ವಿಂಟಲ್‌ ಹೆಸರುಬೇಳೆಗೆ ಕೇಂದ್ರ ಸರ್ಕಾರವು ₹ 6,975 ಬೆಂಬಲ ಬೆಲೆ ನಿಗದಿಪಡಿಸಿದೆ. ಗುಣಮಟ್ಟದ ಹೆಸರು ಕಾಳನ್ನು ಇಲ್ಲಿಗೆ ತಂದು ಮಾರಲು ರೈತರು, ಅಗತ್ಯ ದಾಖಲೆಗಳನ್ನು ಕೊಟ್ಟು ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು.

ಸಂಕಷ್ಟ: ಒಟ್ಟು 7,187 ರೈತರು ನೋಂದಾಯಿಸಿದ್ದರು. ಅವರಿಂದ 28,748 ಕ್ವಿಂಟಲ್‌ ಹೆಸರು ಕಾಳು ಖರೀದಿಗೆ ಉದ್ದೇಶಿಸಲಾಗಿತ್ತು. ಆದರೆ, ಅ. 30ರ ಬೆಳಿಗ್ಗೆ 11ರವರೆಗೆ ಮಾತ್ರವೇ ಖರೀದಿ ಪ್ರಕ್ರಿಯೆ ನಡೆದಿದೆ. ನಂತರ, ಸ್ಥಗಿತಗೊಳಿಸಲಾಗಿದೆ. ನೋಂದಾಯಿಸಿದ್ದ ರೈತರ ಪೈಕಿ ಇನ್ನೂ 4,316 ಮಂದಿಯಿಂದ 16,294 ಕ್ವಿಂಟಲ್‌ ಖರೀದಿಸಲಾಗಿದೆ. ಇನ್ನೂ 3,051 ಕೃಷಿಕರಿಂದ 12,454 ಕ್ವಿಂಟಲ್ ಖರೀದಿಸಬೇಕಿತ್ತು. ಈ ನಡುವೆಯೇ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಅವರು, ಸರ್ಕಾರದಿಂದ ಬೆಂಬಲ ಬೆಲೆಯಾದರೂ ದೊರೆಯುತ್ತದೆ ಎಂದು ಹೊಂದಿದ್ದ ನಿರೀಕ್ಷೆ ಹುಸಿಯಾಗಿದೆ. ಇದನ್ನು ಖಂಡಿಸಿ, ವಿವಿಧೆಡೆ ರೈತರು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಮೂರು ತಾಲ್ಲೂಕಿಗೆ ಒಂದರಂತೆ: ಉತ್ತಮ ಮಳೆಯಾದ್ದರಿಂದಾಗಿ ಈ ಬಾರಿ ಒಳ್ಳೆಯ ಇಳುವರಿ ಬಂದಿತ್ತು. ಜಿಲ್ಲೆಯಲ್ಲಿ 43,847 ಹೆಕ್ಟೇರ್‌ನಲ್ಲಿ ಹೆಸರು ಬೆಳೆಯಲಾಗಿದ್ದು, ಈ ಪೈಕಿ ಸವದತ್ತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 18,929 ಹೆಕ್ಟೇರ್‌ ಪ್ರದೇಶದಲ್ಲಿ ಹಾಕಲಾಗಿತ್ತು. ನಂತರದ ಸ್ಥಾನಗಳಲ್ಲಿ ರಾಮದುರ್ಗ (16,840 ಹೆ.) ಹಾಗೂ ಬೈಲಹೊಂಗಲ (5,221 ಹೆ.) ತಾಲ್ಲೂಕುಗಳಿದ್ದವು. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿ ಹೆಸರು ಬೆಳೆದಿರುವ ಪ್ರದೇಶ ಸಾವಿರ ಹೆಕ್ಟೇರ್‌ ಪ್ರಮಾಣದ ಒಳಗೇ ಇತ್ತು. ಕಡಿಮೆ ಇರುವೆಡೆ ಮೂರು ತಾಲ್ಲೂಕುಗಳಿಗೆ ಒಂದರಂತೆ ಕೇಂದ್ರವನ್ನು ತೆರೆಯಲಾಗಿತ್ತು. ರಾಜ್ಯಕ್ಕೆ 23,250 ಮೆಟ್ರಿಕ್‌ ಟನ್ ಖರೀದಿಗೆ ಅನುಮತಿ ದೊರೆತಿತ್ತು. ಈ ಪೈಕಿ, ಜಿಲ್ಲೆಗೆ 2,985 ಮೆಟ್ರಿಕ್‌ ಟನ್ ಗುರಿ ನಿಗದಿಪಡಿಸಲಾಗಿತ್ತು.

ಎಕರೆಗೆ 4 ಕ್ವಿಂಟಲ್‌ನಂತೆ ಪ್ರತಿ ರೈತರಿಂದ 10 ಕ್ವಿಂಟಲ್‌ ಮಾತ್ರ ಖರೀದಿಸಲಾಗುವುದು ಎಂದು ತಿಳಿಸಲಾಗಿತ್ತು. ಈಗ, ರಾಜ್ಯಕ್ಕೆ ನೀಡಿದ್ದ ಗುರಿ ತಲುಪಿದ್ದರಿಂದ, ಖರೀದಿ ಪ್ರಕ್ರಿಯೆ ನಿಲ್ಲಿಸಲಾಗಿದೆ ಎಂಬ ಕಾರಣವನ್ನು ಹೇಳಲಾಗುತ್ತಿದೆ.

‘ಹೆಸರು ಕಾಳು ಖರೀದಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಸಹಕಾರ ಇಲಾಖೆಯ ಸೂಚನೆ ಮೇರೆಗೆ ಈ ಕ್ರಮ ವಹಿಸಲಾಗಿದೆ. ಸರ್ಕಾರದಿಂದ ಸೂಚನೆ ಬಂದರೆ ಪುನರ್‌ ಆರಂಭಿಸಲಾಗುವುದು. ಖರೀದಿ ಪ್ರಕ್ರಿಯೆ ಮುಂದುವರಿಸಲು ಗುರಿಯ ಮಿತಿ ಹೆಚ್ಚಿಸಬೇಕು ಎಂದು ಸರ್ಕಾರದಿಂದಲೂ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಗೊತ್ತಾಗಿದೆ’ ಎಂದು ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕ ಕೆ.ಎಚ್. ಗುರುಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 2

  Frustrated
 • 2

  Angry

Comments:

0 comments

Write the first review for this !