ಶುಕ್ರವಾರ, ನವೆಂಬರ್ 22, 2019
26 °C
ಸಂಗ್ರಹಿಸಲು ಗೋದಾಮಿನಲ್ಲಿ ಜಾಗವೇ ಇಲ್ಲವಂತೆ!

ಅಥಣಿ: ಆರಂಭವಾಗದ ‘ಹೆಸರು‘ ಮಾರಾಟ ನೋಂದಣಿ

Published:
Updated:

ಬೆಳಗಾವಿ: ಜಿಲ್ಲೆಯಲ್ಲಿ ಸರ್ಕಾರದ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಹಾಗೂ ಉದ್ದು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ 20 ದಿನಗಳೇ ಕಳೆದಿವೆ. ಆದರೆ, ಅಥಣಿಯಲ್ಲಿ ಈವರೆಗೂ ನೋಂದಣಿ ಪ್ರಕ್ರಿಯೆಯೇ ಆರಂಭವಾಗಿಲ್ಲ!

ಸವದತ್ತಿ, ರಾಮದುರ್ಗ, ಬೈಲಹೊಂಗಲ, ದೊಡವಾಡ, ಸಂಕೇಶ್ವರ, ಅಥಣಿಯಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಹಾಗೂ ಅಥಣಿ,  ಸವದತ್ತಿಯಲ್ಲಿ ಉದ್ದಿನ ಕಾಳು ಖರೀದಿ ಕೇಂದ್ರ ಆರಂಭಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿತ್ತು. ಹೆಸರು ಕಾಳನ್ನು ಪ್ರತಿ ಕ್ವಿಂಟಲ್‌ಗೆ ₹7,050 ಹಾಗೂ ಉದ್ದಿನ ಕಾಳನ್ನು ₹5,700 ದರದ ಅನ್ವಯ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ಖರೀದಿಸುತ್ತಾರೆ. ಪ್ರತಿ ರೈತರಿಂದ ಗರಿಷ್ಠ 4 ಕ್ವಿಂಟಲ್‌ನಂತೆ ಹೆಸರು ಕಾಳು, ಗರಿಷ್ಠ 3 ಕ್ವಿಂಟಲ್‌ನಂತೆ ಉದ್ದು ಖರೀದಿಸಲಾಗುವುದು ಎಂದು ತಿಳಿಸಲಾಗಿತ್ತು.

ಪತ್ರ ಬರೆಯಲಾಗಿದೆ:  ‘ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಗರಿಷ್ಠ 30 ಕಿ.ಮೀ.ವರೆಗೆ ಸಾಗಾಣಿಕೆ ವೆಚ್ಚ ಕೊಡಲಾಗುತ್ತದೆ. ನಾವು ರೈತರಿಂದ ಹೆಸರು ಹಾಗೂ ಉದ್ದಿನ ಕಾಳು ಖರೀದಿಸಿದರೆ ಅಥಣಿಯ ಗೋದಾಮಿನಲ್ಲಿ ಸಂಗ್ರಹಿಸಲು ಜಾಗ ಇಲ್ಲ. 100 ಕಿ.ಮೀ. ದೂರದಲ್ಲಿರುವ ಸಂಕೇಶ್ವರದಲ್ಲಿರುವ ಗೋದಾಮಿಗೆ ಸಾಗಿಸಬೇಕಾಗುತ್ತದೆ. ಹೀಗಾಗಿ, ಈ ತಾಂತ್ರಿಕ ತೊಂದರೆ ನಿವಾರಣೆಗೆ ನಿರ್ದೇಶನ ನೀಡಬೇಕು. ಅಲ್ಲಿಗೆ ಸಾಗಿಸಲು ವೆಚ್ಚ ಪಡೆಯಲು ಅನುಮತಿ ಕೋರಿ ಮಹಾಮಂಡಳಕ್ಕೆ ಪತ್ರ ಬರೆಯಲಾಗಿದೆ. ಆದರೆ, ಅಲ್ಲಿಂದ ಇನ್ನೂ ನಿರ್ದೇಶನ ಬಂದಿಲ್ಲ. ಆದ್ದರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿಲ್ಲ’ ಎಂದು ಮಹಾಮಂಡಳದ ಅಥಣಿ ಶಾಖೆಯ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಥಣಿಯಲ್ಲಿ ಖರೀದಿ ಕೇಂದ್ರದಲ್ಲಿ ಪ್ರಕ್ರಿಯೆ ನಡೆಸದಿರುವುದು ಖಂಡನೀಯ. ತಾಲ್ಲೂಕಿನ ಉತ್ತರಭಾಗದ ಅನಂತಪುರ, ತೆಲಸಂಗ, ಕೊಕಟನೂರ, ಐಗಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳು ಬೆಳೆದಿದ್ದರು. ಅವರಿಗೆ ಸರ್ಕಾರದ ಬೆಂಬಲ ದೊರೆಯುವಂತೆ ನೋಡಿಕೊಳ್ಳಬೇಕು. ತಾಂತ್ರಿಕ ಕಾರಣಗಳೇನೇ ಇದ್ದರೂ ಬಗೆಹರಿಸಿ, ಕೂಡಲೇ ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ರೈತ ಸಂಘ ಅಥಣಿ ತಾಲ್ಲೂಕು ಘಟಕದ ಅಧ್ಯಕ್ಷ ಮಹಾದೇವ ಮಡಿವಾಳ ಒತ್ತಾಯಿಸಿದರು.

ಅವಧಿ ವಿಸ್ತರಣೆ: ಉಳಿದಂತೆ, ಇತರ ಕೇಂದ್ರಗಳಲ್ಲಿ ಗುರುವಾರದವರೆಗೆ 1,144 ರೈತರು ಹೆಸರುಕಾಳು ಮಾರಲು ನೋಂದಾಯಿಸಿದ್ದಾರೆ. ನೋಂದಣಿಗೆ, ಈ ಹಿಂದೆ ಅ.19ರವರೆಗೆ ಕೊಟ್ಟಿದ್ದ ಅವಧಿಯನ್ನು ನ.2ರವರೆಗೆ ವಿಸ್ತರಿಸಲಾಗಿದೆ.

ಹಿಂದಿನ ವರ್ಷಗಳಲ್ಲಿ ಸೆಪ್ಟೆಂಬರ್‌ 2ನೇ ವಾರದಿಂದಲೇ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುತ್ತಿತ್ತು. ಆದರೆ, ಈ ಬಾರಿ ಸೆಪ್ಟೆಂಬರ್‌ ಕೊನೆ ವಾರದಿಂದ ನಡೆಸಲಾಗುತ್ತಿದೆ. ಹೀಗಾಗಿ, ಬಹಳಷ್ಟು ಮಂದಿ ರೈತರು ಮಧ್ಯವರ್ತಿಗಳ ಮೂಲಕ ಕಡಿಮೆ ದರಕ್ಕೆ ಮಾರಿದ ಉದಾಹರಣೆಯೂ ಇದೆ. ಸರ್ಕಾರದ ವಿಳಂಬ ಧೋರಣೆಯಿಂದಾಗಿ ಬೆಳೆಗಾರರಿಗೆ ನಷ್ಟವಾಗಿದ್ದರೆ, ಮಧ್ಯವರ್ತಿಗಳಿಗೇ ಲಾಭವಾಗಿದೆ! ಅಲ್ಲದೇ, ರೈತರ ಸೋಗಿನಲ್ಲಿ ಮಧ್ಯವರ್ತಿಗಳು ಅಥವಾ ವರ್ತಕರು ಖರೀದಿ ಕೇಂದ್ರದಲ್ಲಿ ಹೆಸರು ಕಾಳು ಮಾರಲು ಅವಕಾಶ ಮಾಡಿಕೊಟ್ಟಂತೆಯೂ ಆಗಿದೆ ಎನ್ನಲಾಗುತ್ತಿದೆ.

ಪ್ರವಾಹದಿಂದ ಹಾಳಾಗಿದೆ!
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 8,123 ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬೆಳೆಯಲಾಗಿತ್ತು. ಇದರಲ್ಲಿ 2,203 ಹೆಕ್ಟೇರ್‌ ಬೆಳೆ ನೆರೆ ಹಾಗೂ ಧಾರಾಕಾರ ಮಳೆಯಿಂದ ಹಾಳಾಗಿದೆ. ಹೀಗಾಗಿ, ಉಳಿದಿದ್ದರಲ್ಲಿ 6,010 ಟನ್‌ ಉದ್ದಿನಕಾಳು ಇಳುವರಿ ನಿರೀಕ್ಷಿಸಲಾಗಿದೆ.

ಅಂತೆಯೇ, 31,591 ಹೆಕ್ಟೇರ್‌ನಲ್ಲಿ ಹೆಸರು ಬಿತ್ತಲಾಗಿತ್ತು. ಈ ಪೈಕಿ ಪ್ರವಾಹದಿಂದಾಗಿ 15,497 ಹೆಕ್ಟೇರ್‌ ಹಾನಿಯಾಗಿದೆ. ಉಳಿದಿದ್ದರಲ್ಲಿ 6,438 ಟನ್‌ ಇಳುವರಿ ನಿರೀಕ್ಷಿಸಲಾಗಿದೆ.

ಪ್ರತಿಕ್ರಿಯಿಸಿ (+)