ಗುರುವಾರ , ಜೂನ್ 24, 2021
21 °C
ಗ್ರಾಮ ಪ‍ಂಚಾಯ್ತಿಗಳಲ್ಲಿ ಸೇವಾ ಕೇಂದ್ರ ಆರಂಭಿಸಲು ಸಿದ್ಧತೆ

ಬೆಳಗಾವಿ: ಆಧಾರ್‌ ತಿದ್ದುಪಡಿಗೂ ಜಿಎಸ್‌ಟಿ ವಸೂಲಿ!

ಎಂ.ಮಹೇಶ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ 506 ಗ್ರಾಮ ಪಂಚಾಯ್ತಿಗಳಲ್ಲಿ ಶೀಘ್ರವೇ ಆರಂಭವಾಗಲಿರುವ ಆಧಾರ್‌ ತಿದ್ದುಪಡಿ ಕೇಂದ್ರಗಳಲ್ಲಿ ಸಾರ್ವಜನಿಕರು ಸೇವೆ ಪಡೆಯಲು ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಪಾವತಿಸುವುದು ಕಡ್ಡಾಯವಾಗಿದೆ.

ಪ್ರಸ್ತುತ ಬಹಳಷ್ಟು ಸೇವೆ ಹಾಗೂ ಯೋಜನೆಗಳಿಗೆ ಆಧಾರ್‌ ಸಂಖ್ಯೆಯನ್ನು ಪ್ರಮುಖವಾಗಿ ಕೇಳಲಾಗುತ್ತಿದೆ. ಬಹುತೇಕರು ಆಧಾರ್‌ ಚೀಟಿಗಾಗಿ ನೋಂದಣಿ ಮಾಡಿಸಿದ್ದಾರೆ ಹಾಗೂ ಪಡೆದಿದ್ದಾರೆ ಕೂಡ. ಇತ್ತೀಚಿನ ದಿನಗಳಲ್ಲಿ ತಿದ್ದುಪಡಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಹೀಗಾಗಿ, ಗ್ರಾಮೀಣ ಜನರಿಗೆ ಅನುಕೂಲ ಆಗಲೆಂದು ಗ್ರಾಮ ಪಂಚಾಯ್ತಿಗಳಲ್ಲೂ ಆಧಾರ್‌ ತಿದ್ದುಪಡಿ ಕೇಂದ್ರಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ಆಧಾರ್‌ ಪ್ರಾಧಿಕಾರದ ಕೋರಿಕೆ ಮೇರೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯು ಸೇವೆ ಒದಗಿಸಲು ಮುಂದಾಗಿದೆ.

ಶುಲ್ಕವಷ್ಟೇ ಇತ್ತು:  ಆಧಾರ್‌ ತಿದ್ದುಪಡಿ ಸೇವೆಗಳಿಗೆ ಸಂಬಂಧಿಸಿದಂತೆ ಇದೇ ವರ್ಷ ಜೂನ್‌ನಲ್ಲಿ ಇಲಾಖೆಯು ಹೊರಡಿಸಿದ್ದ ಸುತ್ತೋಲೆಯಲ್ಲಿ ಶುಲ್ಕದ ಪ್ರಸ್ತಾಪವಿತ್ತು. ಪರಿಷ್ಕೃತ ಆದೇಶದ ಪ್ರಕಾರ, ಶುಲ್ಕದೊಂದಿಗೆ ತೆರಿಗೆಯನ್ನೂ ನಿಗದಿಪಡಿಸಲಾಗಿದೆ.

ಆಧಾರ್‌ ಪ್ರಾಧಿಕಾರದ ಮಾರ್ಗಸೂಚಿಯಂತೆ ಆಧಾರ್‌ ತಿದ್ದುಪಡಿ ಸೇವೆಗಳಿಗೆ ಜಿಎಸ್‌ಟಿ ಅನ್ವಯವಾಗಲಿದ್ದು, ಆ ತೆರಿಗೆ ಹಣವನ್ನು ಗ್ರಾಮ ಪಂಚಾಯ್ತಿಗಳ ನಿಧಿಗೆ ಜಮಾ ಮಾಡುವಂತೆ ಸೂಚಿಸಲಾಗಿದೆ. ಜನರ ಅನಿವಾರ್ಯವನ್ನು ಹಣ ವಸೂಲಿಗೆ ಬಳಸಿಕೊಳ್ಳುತ್ತಿರುವ ಪ್ರಾಧಿಕಾರದ ಈ ಕ್ರಮ, ಹಳ್ಳಿವಾಸಿಗಳಿಗೆ ಕೊಂಚ ಹೊರೆಯಾಗಿ ಪರಿಣಮಿಸಲಿದೆ.

ಪಂಚಾಯಿತಿಗಳಲ್ಲಿ ಆರಂಭವಾಗಲಿರುವ ತಿದ್ದುಪಡಿ ಕೇಂದ್ರಗಳಲ್ಲಿ ಮೂರು ರೀತಿಯ ಸೇವೆಗಳು ಇರುತ್ತವೆ. ಹಿಂದಿನ ಸುತ್ತೋಲೆಯಂತೆ, ಆಧಾರ್‌ ಕಾರ್ಡ್‌ದಾರರ ಹೆಸರು, ವಿಳಾಸ ತಿದ್ದುಪಡಿಗೆ (ಒಂದು ಬಾರಿಗೆ) ₹ 25, ಆಧಾರ್‌ ಸಂಖ್ಯೆ ಹುಡುಕಿ ಅದರ ಕಲರ್‌ಪ್ರಿಂಟ್‌ ಪಡೆದುಕೊಳ್ಳಲು ₹ 20 ಮತ್ತು ಆಧಾರ್‌ ಸಂಖ್ಯೆ ಹುಡುಕಿ ಅದರ ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಪ್ರಿಂಟ್‌ ತೆಗೆಸಿಕೊಳ್ಳಲು ₹ 10 ಶುಲ್ಕ ನಿಗದಿಪಡಿಸಿತ್ತು. ಆಗ, ತೆರಿಗೆ ವಿಧಿಸಲಾಗಿರಲಿಲ್ಲ.

ಹೊಸ ಸುತ್ತೋಲೆಯಂತೆ, ಆಧಾರ್‌ ಕಾರ್ಡ್‌ದಾರರ ಹೆಸರು, ವಿಳಾಸ ತಿದ್ದುಪಡಿಗೆ ₹ 5 ಜಿಎಸ್‌ಟಿ ಸೇರಿ ₹ 30, ಆಧಾರ್‌ ಸಂಖ್ಯೆ ಹುಡುಕಿ ಕಲರ್‌ ಪ್ರಿಂಟ್‌ ಪಡೆಯಲು ₹ 4 ಜಿಎಸ್‌ಟಿ ಸೇರಿ ₹ 24 ಬ್ಲ್ಯಾಕ್‌ ಆ್ಯಂಡ್‌ ವೈಟ್‌ ಪ್ರಿಂಟ್‌ಗೆ ₹ 2 ಜಿಎಸ್‌ಟಿ ಸೇರಿ 12 ಶುಲ್ಕ ನಿಗದಿಪಡಿಸಲಾಗಿದೆ.

ತಿದ್ದುಪಡಿ ಅತ್ಯಗತ್ಯ:  ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯಪಡಿಸಲಾಗಿದೆ. ಇದರಿಂದಾಗಿ, ಆಧಾರ್‌ ನೋಂದಣಿ ಜೊತೆಗೆ ತಿದ್ದುಪಡಿ ಮತ್ತು ಪರಿಷ್ಕರಣೆ ಕೂಡ ಅತ್ಯಗತ್ಯವಾಗಿದೆ. ಅಲ್ಲದೆ, ತಿದ್ದುಪಡಿ ಸೇವೆಗಳು ಸಮೀಪದಲ್ಲಿಯೇ ತ್ವರಿತವಾಗಿ, ಕಡಿಮೆ ಸಮಯದಲ್ಲಿ ದೊರೆಯುವಂತಾದರೆ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಇದಕ್ಕಾಗಿ ವಿಶೇಷ ತಂತ್ರಾಂಶ ಸಿದ್ಧಪಡಿಸಿ ಅದನ್ನು ಗ್ರಾಮ ಪಂಚಾಯ್ತಿಗಳ ಕಂಪ್ಯೂಟರ್‌ಗಳಲ್ಲಿ ಅಳವಡಿಸಲಾಗುತ್ತಿದೆ.

ಹಳ್ಳಿಗಳಲ್ಲಿ ಆಧಾರ್‌ ಚೀಟಿ ಹೊಂದಿರುವವರು ಬೆರಳಚ್ಚು, ಹೆಸರು, ಜನ್ಮ ದಿನಾಂಕ ಮೊದಲಾದವುಗಳ ತಿದ್ದುಪಡಿಗಾಗಿ ನಗರ ಪ್ರದೇಶಗಳಿಗೆ ಬರಬೇಕಾದ ಸ್ಥಿತಿ ಇದೆ. ಈ ಸಮಸ್ಯೆ ಪರಿಹಾರಕ್ಕೆ ಪಂಚಾಯ್ತಿ ಕೇಂದ್ರಗಳಿಂದ ನೆರವಾಗಲಿದೆ.

‘ತಂತ್ರಾಂಶ ಬಳಸುವುದು ಹೇಗೆ, ಎದುರಾಗುವ ತಾಂತ್ರಿಕ ತೊಂದರೆಗಳನ್ನು ನಿವಾರಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಮೇಲೆ ಪಂಚಾಯ್ತಿಗಳ ಕಂಪ್ಯೂಟರ್ ಆಪರೇಟರ್‌ಗಳಿಗೆ ಪ್ರಾಯೋಗಿಕ ತರಬೇತಿ ಕೊಡಿಸಲಾಗಿದೆ. ತರಬೇತಿ ವೇಳೆ ಎಷ್ಟು ತಿಳಿದುಕೊಂಡಿದ್ದಾರೆ ಎನ್ನುವುದನ್ನು ತಿಳಿಯಲು ಅವರಿಗೆ ಪರೀಕ್ಷೆಯನ್ನೂ ನಡೆಸಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಆರ್. ರಾಮಚಂದ್ರನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರದಿಂದ ಸೂಚನೆ ಬರುತ್ತಿದಂತೆಯೇ, ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು