ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಹೊಡೆತ

7
ತೆರಿಗೆ ಪ್ರಮಾಣ ಹೆಚ್ಚಳ: ಪ್ರತಿ ತಿಂಗಳೂ ಪಾವತಿಸಬೇಕಾದ ಸಂಕಷ್ಟ!

ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿಗೆ ಹೊಡೆತ

Published:
Updated:
Deccan Herald

ಬೆಳಗಾವಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಿಂದ ದೊಡ್ಡ ಉದ್ಯಮಿಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ ಒಳ್ಳೆಯದಾಗಿದೆ. ಆದರೆ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೊಡೆತ ಬಿದ್ದಿದೆ. – ಜಿಎಸ್‌ಟಿ ಕುರಿತು ಉದ್ಯಮಿಗಳ ಅಭಿಪ್ರಾಯವಿದು.

ಏಕರೂಪ ತೆರಿಗೆ ಬಂದ ವರ್ಷದಲ್ಲಿ ಕೈಗಾರಿಕೆಗಳ ಮೇಲಾಗಿರುವ ಪರಿಣಾಮವೇನು ಎಂಬ ‘ಪ್ರಜಾವಾಣಿ’ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉದ್ಯಮಿಗಳು, ಹೊಸ ವ್ಯವಸ್ಥೆಯಿಂದ ವಹಿವಾಟು ಕುಸಿದಿದೆ ಎಂದು ತಿಳಿಸಿದರು.

ಇಲ್ಲಿ 4500ಕ್ಕೂ ಹೆಚ್ಚು ಉದ್ಯಮಿಗಳಿದ್ದಾರೆ. ಅದರಲ್ಲೂ ಸಣ್ಣ ಕೈಗಾರಿಕೆಗಳನ್ನು ನಡೆಸುತ್ತಿರುವವರು ಹೆಚ್ಚು. ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆ ರದ್ದಾದ ಸಂದರ್ಭದಲ್ಲಿ ತೊಂದರೆ ಅನುಭವಿಸಿದ್ದ ಅವರಿಗೆ, ಜಿಎಸ್‌ಟಿಯು ಬರೆ ಹಾಕಿದೆ. ತೆರಿಗೆ ಪ್ರಮಾಣ ಹೆಚ್ಚಳವಾಗಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ. ಇದು, ನೇರವಾಗಿ ಗ್ರಾಹಕರ ಮೇಲೆ ಪರಿಣಾಮ ಬೀರುತ್ತಿದೆ.

ಶೇ 18ರಷ್ಟು ತೆರಿಗೆ: ಜಾಬ್ ವರ್ಕ್ಸ್ ಮತ್ತು ಲೇಬರ್ ಚಾರ್ಜಸ್ ಮೇಲೆ ಈ ಹಿಂದೆ ತೆರಿಗೆ ಇರಲಿಲ್ಲ. ವ್ಯಾಟ್ ಮತ್ತು ಎಕ್ಸೈಜ್ ಅಡಿ ವಿನಾಯತಿ ಇತ್ತು. ಜಿಎಸ್‌ಟಿ ಜಾರಿಯಾದ ನಂತರ ಜಾಬ್ ವರ್ಕ್ಸ್ ಮೇಲೆ ಶೇ 18ರಷ್ಟು ತೆರಿಗೆ ವಿಧಿಸಲಾಗಿದೆ. ಇದು ಬೃಹತ್ ಘಟಕಗಳಿಗೆ ಸೇವೆ ನೀಡುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ತೊಡಕಾಗಿದೆ.

ನಿಗದಿತ ಸಮಯದಲ್ಲಿ ತೆರಿಗೆ ಪಾವತಿಸಬೇಕಾಗಿರುವುದರಿಂದ, ಈ ವಲಯದ ನಗದು ವಹಿವಾಟಿನ ಮೇಲೂ ಗಂಭೀರ ಪರಿಣಾಮ ಉಂಟಾಗಿದೆ. ಜಾಬ್ ವರ್ಕ್ಸ್ ಸಂಬಂಧಿಸಿದಂತೆ ಪಾವತಿಗಳು ವಿಳಂಬವಾಗುತ್ತಿವೆ. ಬಂಡವಾಳ ಕೊರತೆಯಿಂದಾಗಿ, ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಅನೇಕ ಘಟಕಗಳಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ, ಜಾಬ್ ವರ್ಕ್ಸ್ ವಿಭಾಗವನ್ನು ಶೇ 5ರ ವ್ಯಾಪ್ತಿಗೆ ತರಬೇಕು ಅಥವಾ ವಿನಾಯಿತಿ ಕೊಡಬೇಕು ಎಂಬ ಒತ್ತಾಯಗಳಿವೆ.

ಜಿಎಸ್‌ಟಿಯಡಿ ನೋಂದಾಯಿಸಿದ ಉದ್ಯಮಿಗಳು, ನೋಂದಾಯಿಸದ ಉದ್ದಿಮೆಗಳಿಂದ ಖರೀದಿಸಿದರೆ ರಿವರ್ಸ್ ಚಾರ್ಜ್ ಮ್ಯೆಕಾನಿಸಮ್ ಆಧಾರದ ಮೇಲೆ ಜಿಎಸ್‌ಟಿ ಪಾವತಿಸಲೇಬೇಕು. ರಿವರ್ಸ್ ಚಾರ್ಜ್ ಮ್ಯೆಕಾನಿಸಮ್ ತಾಂತ್ರಿಕ ಅಗತ್ಯತೆಗಳನ್ನು ಅನುಸರಿಸುವಲ್ಲಿ ಸಾಕಷ್ಟು ತೊಡಕುಗಳಿವೆ. ಹೀಗಾಗಿ, ನೋಂದಾಯಿಸದ ಉದ್ದಿಮೆಗಳಿಂದ ಖರೀದಿಯಿಂದ ವಿಮುಖರಾಗುವ ಪರಿಸ್ಥಿತಿ ಉಂಟಾಗಿದೆ.

ವಿನಾಯಿತಿ ಮಿತಿ ಹೆಚ್ಚಿಸಿ: ‘ನೋದಾಯಿಸದ ಉದ್ದಿಮೆಗಳಿಂದ ಮಾಡುವ ₹ 5000ವರೆಗಿನ ಖರೀದಿಗೆ (ದಿನಕ್ಕೆ) ಮಾತ್ರ ವಿನಾಯಿತಿ ಇದೆ. ಉಳಿದದ್ದಕ್ಕೆ ತೆರಿಗೆ ಕಟ್ಟಬೇಕಿರುವುದು ಹೊರೆಯಾಗಿದೆ. ಖರೀದಿಗಳನ್ನು ನಿಲ್ಲಿಸುವುದರಿಂದ ನೋಂದಾಯಿಸದ ಉದ್ದಿಮೆಗಳು ನಷ್ಟ ಅನುಭವಿಸುತ್ತಿವೆ. ಇದನ್ನು ಸರ್ಕಾರವು ಮರುಪರಿಶೀಲಿಸಬೇಕು. ನೋಂದಾಯಿಸದ ಉದ್ದಿಮೆದಾರರಿಂದ ಖರೀದಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು. ಪ್ರಸ್ತುತ ₹ 20 ಲಕ್ಷಗಳವರೆಗಿನ ವ್ಯವಹಾರ ವಹಿವಾಟುಗಳಿಗೆ ಜಿಎಸ್‌ಟಿ ನೋಂದಣಿ ಮಾಡಿಸಬೇಕು. ಈ ವಿನಾಯಿತಿ ಮಿತಿಯನ್ನು ₹ 50 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸುತ್ತಾರೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಗೌರವಾಧ್ಯಕ್ಷ ಬಸವರಾಜ ಎಸ್. ಜವಳಿ.

ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಕೈಗಾರಿಕೆಗಳಿಗೆ 3 ತಿಂಗಳುಗಳಿಗೊಮ್ಮೆ ರಿಟರ್ನ್ಸ್ ಸಲ್ಲಿಸಲು ಅನುಮತಿ ಇದೆ. ಅದರೆ, ಸಣ್ಣ ಕೈಗಾರಿಕೆಗಳು ಪ್ರತಿ ತಿಂಗಳೂ ತೆರಿಗೆ ಪಾವತಿ ಸಾಧ್ಯವಾಗುವುದಿಲ್ಲ. ಹೀಗಾಗಿ, ರಿಟರ್ನ್ಸ್ ಸಲ್ಲಿಸುವಾಗಲೇ ತೆರಿಗೆ ಪಾವತಿಗೆ ಅನುಮತಿ ಕೊಡಬೇಕು ಎನ್ನುತ್ತಾರೆ ಅವರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !