ಅಗತ್ಯ ವಸ್ತುಗಳ ತೆರಿಗೆ ಇಳಿಕೆ

7
ಹೊಸ ವ್ಯವಸ್ಥೆ ಬಗ್ಗೆ ಅರಿವು ಮೂಡಿಸಬೇಕು: ವರ್ತಕರು

ಅಗತ್ಯ ವಸ್ತುಗಳ ತೆರಿಗೆ ಇಳಿಕೆ

Published:
Updated:
Deccan Herald

ಬೆಳಗಾವಿ: ನಿತ್ಯಬಳಕೆಯ ವಸ್ತುಗಳ ಮೇಲೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಲಾಗುತ್ತಿರುವುದರಿಂದ, ಜನರು ದಿನಸಿಗಳ ಮೇಲೆ ಮಾಡುತ್ತಿದ್ದ ತಿಂಗಳ ಖರ್ಚು ಕೊಂಚ ಕಡಿಮೆಯಾಗಿದೆ. ಆರಂಭದಲ್ಲಿ ತುಸು ಹೊರೆ ಎನಿಸುತ್ತಿತ್ತು; ಗೊಂದಲವೂ ಉಂಟಾಗಿತ್ತು. ನಂತರದ ದಿನಗಳಲ್ಲಿ ತೆರಿಗೆ ಪ್ರಮಾಣ ಇಳಿಕೆ ಮಾಡಲಾಗಿದೆ. ವಹಿವಾಟು ಸುಗಮವಾಗಿ ನಡೆಯುತ್ತಿದೆ.

– ದಿನಸಿ ಹಾಗೂ ಕಿರಾಣಿ ಅಂಗಡಿಗಳ ವರ್ತಕರ ಅಭಿಪ್ರಾಯವಿದು.

ಜಿಎಸ್‌ಟಿ ಜಾರಿಯಾಗಿ ವರ್ಷ ಪೂರೈಸಿರುವ ಸಂದರ್ಭದಲ್ಲಿ, ‘ಪ್ರಜಾವಾಣಿ’ಯೊಂದಿಗೆ ಅನಿಸಿಕೆ ಹಂಚಿಕೊಂಡ ಅವರು, ‘ಬೆಲೆ ಇಳಿಕೆಯಿಂದಾಗಿ ಗ್ರಾಹಕರಿಗೆ ನೇರವಾಗಿ ಲಾಭವಾಗುತ್ತಿದೆ’ ಎಂದು ತಿಳಿಸಿದರು.

‘ಅಗತ್ಯ ವಸ್ತುಗಳ ಮಾರಾಟದಿಂದ ನಮಗೆ ಸಿಗುತ್ತಿದ್ದ ಲಾಭಾಂಶ ಹಿಂದಿನಷ್ಟೇ ಇದೆ. ಆದರೆ, ಬೆಲೆ ಇಳಿಕೆಯಿಂದ ಜನರಿಗೆ ಲಾಭವಾಗಿದೆ. ವ್ಯಾಟ್ ಜಾರಿಯಲ್ಲಿದ್ದಾಗ ವರ್ತಕರ ಖರ್ಚಿನ ಮೇಲಿನ ತೆರಿಗೆಯನ್ನು ಮರಳಿ ಪಡೆಯಲು ಸಾಧ್ಯವಿರಲಿಲ್ಲ. ಈಗ ಲೆಕ್ಕಪತ್ರಗಳನ್ನು ಸಲ್ಲಿಸಿ, ವಾಪಾಸ್ಸು ಪಡೆಯಬಹುದಾಗಿದೆ. ಇದರಿಂದ ಬಹಳ ಅನುಕೂಲವಾಗಿದೆ. ಟೂತ್‌ಪೇಸ್ಟ್‌, ಸೋಪು, ಶಾಂಪೂ, ಕೇಶ ತೈಲ, ಸಿದ್ಧ ಆಹಾರ ಮೊದಲಾದ ಕಿರಾಣಿ ಸಾಮಗ್ರಿಗಳ ಬೆಲೆ ಇಳಿದಿದೆ. ಬಾದಾಮಿ, ಗೋಡಂಬಿ ಮೇಲಿದ್ದ  ತೆರಿಗೆಯನ್ನು ಶೇ 14ರಿಂದ ಶೇ 12ಕ್ಕೆ ಇಳಿಸಲಾಗಿದೆ. ಕೆಲವು ಸುಗಂಧ ದ್ರವ್ಯಗಳ ಬೆಲೆಯೂ ಕೊಂಚ ಕಡಿಮೆಯಾಗಿದೆ’ ಎಂದು ಮಾಹಿತಿ ನೀಡಿದರು.‌

ಕಿರಿಕಿರಿ ತ‍ಪ್ಪಿದೆ:

ಪ್ಯಾಕ್ ಮಾಡದ ಆಹಾರಧಾನ್ಯಗಳು, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಪನ್ನೀರ್, ಬ್ರಾಂಡೆಂಡ್ ಅಲ್ಲದ ನೈಸರ್ಗಿಕ ಜೇನು ತುಪ್ಪ, ತರಕಾರಿ, ಪ್ಯಾಕ್ ಮಾಡದ ಗೋಧಿ, ಮೈದಾ, ಕಡಲೆ ಹಿಟ್ಟು, ಉಪ್ಪು, ಗರ್ಭನಿರೋಧಕಗಳು, ಕಚ್ಚಾ ಸೆಣಬು, ಕಚ್ಚಾ ರೇಷ್ಮೆಯನ್ನು ಜಿಎಸ್‌ಟಿಯಿಂದ ಮುಕ್ತಗೊಳಿಸಲಾಗಿದೆ.

ಏಕರೂಪ ತೆರಿಗೆ ಜಾರಿಯಾದ ನಂತರ, ರಾಜ್ಯಗಳ ಗಡಿಗಳಲ್ಲಿದ್ದ ವಾಣಿಜ್ಯ ಚೆಕ್‌‍ಪೋಸ್ಟ್‌ಗಳನ್ನು ಬಂದ್‌ ಮಾಡಲಾಗಿದೆ. ಇದರಿಂದಾಗಿ, ಕಿರಿಕಿರಿ ಹಾಗೂ ಸರಕು ಸಾಗಣೆಯಲ್ಲಿ ಆಗುತ್ತಿದ್ದ ವಿಳಂಬ, ಸರಬರಾಜಿನಲ್ಲಿ ಕೊರತೆ ತಪ್ಪಿದೆ. ಇದು, ವ್ಯಾಪಾರಿಗಳು ಹಾಗೂ ಗ್ರಾಹಕರಿಬ್ಬರಿಗೂ ಅನುಕೂಲ ಮಾಡಿಕೊಟ್ಟಿದೆ. ಅಕ್ಕಿ, ಗೋಧಿ ಬೆಲೆ ಕಡಿಮೆಯಾಗಿದೆ. ಬ್ರಾಂಡೆಡ್‌ ಉತ್ಪನ್ನಗಳ ಬೆಲೆ ಏರಿಕೆಯಾಗಿರುವುದು ಹೊರೆಯಾಗಿ ಪರಿಣಮಿಸಿದೆ ಎನ್ನುವ ಅಭಿಪ್ರಾಯಗಳಿವೆ.

ಗರಿಷ್ಠ ಮುಖ ಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ ಸಂದರ್ಭದಲ್ಲಿ ಬಹಳ ತೊಂದರೆಯಾಗಿತ್ತು. ಚಿಲ್ಲರೆಯ ಅಭಾವವೂ ಕಾಣಿಸಿಕೊಂಡಿತ್ತು. ಕೆಲವು ತಿಂಗಳುಗಳ ನಂತರ, ಎಲ್ಲವೂ ಹಳಿಗೆ ಬಂದಿದೆ. ಕಿರಾಣಿ ಅಂಗಡಿಗಳಲ್ಲೂ ಸ್ವೈಪಿಂಗ್ ಮಷಿನ್‌, ಪೇಟಿಎಂ ಬಳಸುವುದು ಕೂಡ ಕಂಡುಬರುತ್ತಿದೆ. ಜಿಎಸ್‌ಟಿಯಡಿ ನೋಂದಾಯಿಸಿದ್ದರೆ, ಬಿಲ್‌ ಕೊಟ್ಟು ದಾಖಲೆಗಳನ್ನು ನಿರ್ವಹಿಸಬೇಕು. ಸಕಾಲಕ್ಕೆ ರಿಟರ್ಸ್‌ ಸಲ್ಲಿಸಬೇಕು. ಇಲ್ಲವಾದಲ್ಲಿ ದಂಡ ಕಟ್ಟಬೇಕಾಗುತ್ತದೆ. ಪಾರದರ್ಶಕವಾಗಿ ವ್ಯಾಪಾರ ಮಾಡುವವರಿಗೆ ತೊಂದರೆ ಇಲ್ಲ ಎಂದು ವರ್ತಕರು ತಿಳಿಸಿದರು.

‘ಎಲ್ಲ ಅಗತ್ಯ ವಸ್ತುಗಳಿಗೂ ಜಿಎಸ್‌ಟಿ ಸೇರಿಸಿಯೇ ಬೆಲೆ ನಿಗದಿಪಡಿಸಲಾಗಿರುತ್ತದೆ. ಇದರಿಂದಾಗಿ ಹೆಚ್ಚು ವಿಧಿಸುವ ಪ್ರಶ್ನೆಯೇ ಬರುವುದಿಲ್ಲ. ಸರ್ಕಾರವು, ಜಿಎಸ್‌ಟಿ ಕುರಿತು ಜನಸಾಮಾನ್ಯರಲ್ಲಿರುವ ಗೊಂದಲಗಳನ್ನು ನಿವಾರಿಸಲು ಒತ್ತು ನೀಡಬೇಕು’ ಎನ್ನುತ್ತಾರೆ ಅವರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !